“ದುನಿಯಾ’ ರಶ್ಮಿ ಸದ್ದಿಲ್ಲದೆಯೇ “ಕಾರ್ನಿ’ ಎಂಬ ಚಿತ್ರ ಮಾಡಿರುವುದು ಗೊತ್ತೇ ಇದೆ. ಆ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ನಿರ್ದೇಶಕ ವಿನೋದ್, ತಮ್ಮ ತಂಡದೊಂದಿಗೆ ಮಾಹಿತಿ ಹಂಚಿಕೊಳ್ಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು. ಮೊದಲು ಮಾತು ಶುರು ಮಾಡಿದ್ದು ನಿರ್ಮಾಪಕ ಗೋವಿಂದ್‌ರಾಜ್.
“ನನಗೆ ಚಿಕ್ಕಂದಿನಲ್ಲೇ ಸಿನಿಮಾ ಆಸೆ ಇತ್ತು. ಆದರೆ, ಕೆಲಸ ಮಾಡೋಕೆ ಆಗಲಿಲ್ಲ. ಈಗ ನಿರ್ಮಾಣ ಮಾಡುವ ಮೂಲಕ ಆ ಆಸೆ ಈಡೇರಿಸಿಕೊಂಡಿದ್ದೇನೆ. ವಿನೋದ್ ಒಳ್ಳೇ ಚಿತ್ರ ಮಾಡಿಕೊಟ್ಟಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಕನ್ನಡದ ಮಟ್ಟಿಗೆ ಒಳ್ಳೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳ ಸಾಲಿಗೆ ಸೇರುವ ಚಿತ್ರವಿದು ಎಂದೇ ಭಾವಿಸಿದ್ದೇನೆ. ನಾಲ್ಕು ತಿಂಗಳಲ್ಲೇ ಚಿತ್ರ ಮಾಡಿದ್ದೇವೆ. ನಮಗಿದು ಹೊಸ ಅನುಭವ. ಇಲ್ಲಿ ಸೌಂಡ್ ಎಫೆಕ್ಟ್ ಜೀವಾಳ. ಇಂತಹ ಚಿತ್ರಗಳಿಗೆ ಛಾಯಾಗ್ರಹಣ ಹೈಲೆಟ್ ಆಗಿರಬೇಕು. ಇಲ್ಲಿ ಛಾಯಾಗ್ರಹಣವೇ ಎಲ್ಲವನ್ನೂ ಹೇಳುತ್ತದೆ. ಹೊಸಬಗೆಯ ಚಿತ್ರ ಮಾಡಿರುವ ಖುಷಿ ಇದೆ. ಕನ್ನಡಿಗರು ಮೆಚ್ಚಿಕೊಂಡರೆ ಮತ್ತೂಂದು ಹೊಸ ಪ್ರಯತ್ನ ಮಾಡುತ್ತೇವೆ’ ಅಂದರು ನಿರ್ಮಾಪಕರು.
ನಿರ್ದೇಶಕ ವಿನೋದ್ ಅವರಿಗೆ ಇದು ಎರಡನೇ ಚಿತ್ರ. “ಹಾಲಿವುಡ್ ಸಿನಿಮಾವೊಂದರ ಸ್ಫೂರ್ತಿ ಪಡೆದು ಮಾಡಿದ ಚಿತ್ರವಿದು’ ಎಂಬುದು ವಿನೋದ್ ಮಾತು. “ಕಾರ್ನಿ’ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿದೆ. ಕಾರ್ನಿ ಎಂಬುದು ದೇವಿ ಸಂಹಾರಕ್ಕೆ ಬಳಸುವ ಆಯುಧದ ಹೆಸರು. ಇಲ್ಲಿ ನಾಯಕಿಯೇ ಕಾರ್ನಿ. ಆಕೆ ಯಾರನ್ನು, ಯಾಕೆ ಸಂಹಾರ ಮಾಡುತ್ತಾಳೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎನ್ನುವ ನಿರ್ದೇಶಕರು, ಬಹುತೇಕ ರಾತ್ರಿಯಲ್ಲೇ ಚಿತ್ರೀಕರಣ ಮಾಡಿದ್ದೇವೆ. ಯಾವುದೇ ಹಾಡುಗಳಿಲ್ಲ. ಹಿನ್ನೆಲೆ ಸಂಗೀತ ಚಿತ್ರದ ಹೈಲೆಟ್. ಕೇವಲ ಒಂದುಮುಕ್ಕಾಲು ತಾಸಿನ ಚಿತ್ರವಿದು. ಕನ್ನಡದಲ್ಲಿ ಅನೇಕ ಹೊಸ ತರಹದ ಚಿತ್ರಗಳು ಬರುತ್ತಿವೆ. ಆ ಸಾಲಿಗೆ “ಕಾರ್ನಿ’ ಕೂಡ ಸೇರಲಿದೆ ಎಂಬ ನಂಬಿಕೆ’ ನನ್ನದು ಎನ್ನುತ್ತಾರೆ ವಿನೋದ್.
ನಾಯಕಿ ರಶ್ಮಿ ಎರಡು ವರ್ಷಗಳ ಬಳಿಕ ಒಪ್ಪಿಕೊಂಡ ಚಿತ್ರವಿದು. ಅವರೇ ಹೇಳುವಂತೆ, “ಇಲ್ಲಿ ನನಗೆ ವಿಭಿನ್ನ ಪಾತ್ರ ಸಿಕ್ಕಿದೆ. ಎರಡು ದೃಶ್ಯ ಹೊರತುಪಡಿಸಿದರೆ, ಮಾತೇ ಇಲ್ಲ. ಕೇವಲ ಸನ್ನೆ ಮೂಲಕ ಅಭಿನಯ ಮಾಡಿದ್ದೇನೆ. ಅದೊಂದು ಚಾಲೆಂಜ್ ಎನಿಸುವ ಪಾತ್ರವಿತ್ತು. ನಿರ್ದೇಶಕರು ಫೈಟ್ ಕೂಡ ಕೊಟ್ಟಿದ್ದಾರೆ. ಮೊದಲ ಸಲ ಫೈಟ್ ಮಾಡಿದ್ದು ವಿಶೇಷ. ಹೇಗೆಲ್ಲಾ ಫೈಟ್ ಮಾಡ್ತೀನಿ ಎನ್ನುವುದನ್ನು ಚಿತ್ರದಲ್ಲೇ ನೋಡಬೇಕು’ ಎಂಬುದು ರಶ್ಮಿ ಮಾತು.
“ನನಗಿದು ಎರಡನೇ ಚಿತ್ರ’ ಎಂದು ಮಾತಿಗಿಳಿದರು ನಾಯಕ ನಿರಂತ್. “ಇಲ್ಲಿ ಎರಡು ಶೇಡ್ ಇರುವ ಪಾತ್ರ ಸಿಕ್ಕಿದೆ. ಅದೊಂದು ರೀತಿ ನೆಗೆಟಿವ್ ಶೇಡ್ ಇರುವ ಹೀರೋ ಪಾತ್ರ. ಕಮರ್ಷಿಯಲ್ ಅಂಶಗಳಿಲ್ಲದ, ಒಂದು ಕುತೂಹಲದ ಚಿತ್ರವಿದು. ನೋಡುಗರಿಗೆ ಎಲ್ಲೂ ಮೋಸ ಆಗಲ್ಲ ಎಂಬ ಗ್ಯಾರಂಟಿ’ ಕೊಡುತ್ತೇವೆ’ ಎಂದರು ನಿರಂತ್. ಸಹ ನಿರ್ಮಾಪಕ ಅಲೋಕ್, ಸಂಕಲನಕಾರ ವಿನಯ್ ಮತ್ತು ರಾಜೇಶ್ “ಕಾರ್ನಿ’ ಅನುಭವ ಹಂಚಿಕೊಂಡರು.