ಪಾರ್ಲ್: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸೋಲನುಭವಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್ ಗಳು ಕೈಕೊಟ್ಟ ಕಾರಣ ಟೀಂ ಇಂಡಿಯಾ 31 ರನ್ ಅಂತರದ ಸೋಲನುಭವಿಸಿದೆ.
ಬೊಲ್ಯಾಂಡ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ತಂಡ 4 ವಿಕೆಟ್ ಕಳೆದುಕೊಂಡು 296 ರನ್ ಗಳಿಸಿದರೆ ಭಾರತ ತಂಡ 8 ವಿಕೆಟ್ ಕಳೆದುಕೊಂಡು 265 ರನ್ ಮಾಡಲಷ್ಟೇ ಶಕ್ತವಾಯಿತು.
ತಂಡದ ಸೋಲಿನ ಬಗ್ಗೆ ಮಾತನಾಡಿದ ನಾಯಕ ಕೆ.ಎಲ್.ರಾಹುಲ್, “ಇದೊಂದು ಒಳ್ಳೆಯ ಪಂದ್ಯ. ಕಲಿಯಲು ತುಂಬಾ ಸಿಕ್ಕಿತು. ನಾವು ಉತ್ತಮ ಆರಂಭ ಪಡೆದೆವು. ಆದರೆ ಮಧ್ಯದಲ್ಲಿ ವಿಕೆಟ್ ತೆಗೆಯಲಿಲ್ಲ. ಬ್ಯಾಟಿಂಗ್ ನಲ್ಲಿ 20-25ನೇ ಓವರ್ ವರೆಗೆ ಪಂದ್ಯ ನಮ್ಮ ಹಿಡಿತದಲ್ಲಿತ್ತು. ನಾವು ಸುಲಭದಲ್ಲಿ ಚೇಸ್ ಮಾಡುತ್ತೇವೆ ಎಂದುಕೊಂಡಿದ್ದೆ. ಆದರೆ ನಮ್ಮ ಮಧ್ಯಮ ಕ್ರಮಾಂಕದ ಆಟಗಾರರು ಕೈಕೊಟ್ಟರು. ಆಫ್ರಿಕಾ ಬೌಲರ್ ಗಳು ಉತ್ತಮ ದಾಳಿ ನಡೆಸಿದರು” ಎಂದರು.
ಪ್ರತಿಯೊಂದು ಪಂದ್ಯವು ನಮಗೆ ಮಹತ್ವದ್ದೆ. ಪ್ರತಿಯೊಬ್ಬರೂ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತೇವೆ. ನಾವು ಕೆಲವು ಸಮಯದಿಂದ ಏಕದಿನ ಪಂದ್ಯವಾಡಿಲ್ಲ. ಮುಂದಿನ ವಿಶ್ವಕಪ್ ನತ್ತ ನಮ್ಮ ಚಿತ್ತವಿದೆ. ವಿಶ್ವಕಪ್ ಗೆ ಒಂದು ಬಲಾಢ್ಯ ತಂಡವನ್ನು ಕಟ್ಟಬೇಕಿದೆ. ಹೌದು ತಪ್ಪು ಮಾಡುತ್ತೇವೆ, ಆದರೆ ಅದರಿಂದ ಕಲಿಯುತ್ತೇವೆ” ಎಂದು ಮೊದಲ ಬಾರಿಗೆ ಏಕದಿನ ತಂಡದ ನಾಯಕತ್ವ ವಹಿಸಿದ ರಾಹುಲ್ ಹೇಳಿದರು.
ಇದನ್ನೂ ಓದಿ:ಅಂಡರ್ 19 ವಿಶ್ವಕಪ್: ಐರ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ ಭಾರತ ತಂಡ
ಒಂದು ಹಂತದಲ್ಲಿ ಎರಡು ವಿಕೆಟ್ ನಷ್ಟಕ್ಕೆ 138 ರನ್ ಗಳಿಸಿದ್ದ ಭಾರತ ತಂಡ ನಂತರ ಸತತ ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದ ಆಟಗಾರರಾದ ಶ್ರೇಯಸ್ ಅಯ್ಯರ್, ರಿಷಭ್ ಪಂತ್ ಮತ್ತು ವೆಂಕಟೇಶ್ ಅಯ್ಯರ್ ಅಗ್ಗಕ್ಕೆ ಔಟಾಗಿದ್ದು, ತಂಡಕ್ಕೆ ಹಿನ್ನಡೆಯಾಯಿತು.