Advertisement

ನಾಳೆ ಮೊದಲ ಟೆಸ್ಟ್: ಆಡುವ ಬಳಗದ ಸುಳಿವು ನೀಡಿದ ಉಪನಾಯಕ ರಾಹುಲ್

12:15 PM Dec 25, 2021 | Team Udayavani |

ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯು ರವಿವಾರ ಆರಂಭವಾಗಲಿದೆ. ಸೆಂಚೂರಿಯನ್ ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ನಡೆಯಲಿದೆ. ಇದುವರೆಗೂ ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲದ ಭಾರತ ತಂಡ ಈ ಬಾರಿ ಗೆಲ್ಲುವ ಹುಮ್ಮಸ್ಸಿನಲ್ಲಿದೆ.

Advertisement

ಇದೇ ಮೊದಲ ಬಾರಿಗೆ ಟೆಸ್ಟ್ ಉಪನಾಯಕನ ಜವಾಬ್ದಾರಿ ಹೊತ್ತಿರುವ ಕೆ.ಎಲ್.ರಾಹುಲ್ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಕಾಂಬಿನೇಶನ್ ಕುರಿತು ಸುಳಿವು ನೀಡಿದ್ದಾರೆ.

“ಪ್ರತಿಯೊಂದು ತಂಡವೂ ಟೆಸ್ಟ್‌ ಗೆಲುವಿಗಾಗಿ 20 ವಿಕೆಟ್‌ ಉರುಳಿಸುವುದು ಅಗತ್ಯ. ವಿದೇಶಿ ಸರಣಿಗಳಲ್ಲಿ ನಾವು ಐದು ಬೌಲರ್‌ಗಳ ಸೂತ್ರವನ್ನು ಅನುಸರಿಸುತ್ತ ಬಂದಿದ್ದೇವೆ. ಇದರಿಂದ ನಮಗೆ ಲಾಭವೇ ಆಗಿದೆ. ಇದರಿಂದ ವರ್ಕ್‌ ಲೋಡ್‌ ಕೂಡ ಕಡಿಮೆ ಆಗುತ್ತದೆ. ಹೀಗಾಗಿ ಇಲ್ಲಿಯೂ ಐದು ಬೌಲರ್‌ಗಳನ್ನು ಆಡಿಸುವ ಸಾಧ್ಯತೆ ಇದೆ’ ಎಂದು ರಾಹುಲ್‌ ಹೇಳಿದರು.

ಆಗ ಒಬ್ಬ ಸ್ಪೆಷಲಿಸ್ಟ್‌ ಬ್ಯಾಟ್ಸ್‌ಮನ್‌ನನ್ನು ಕೈಬಿಡಲೇಬೇಕಾಗುತ್ತದೆ. ರಹಾನೆ, ಅಯ್ಯರ್‌ ಮತ್ತು ಹನುಮ ವಿಹಾರಿ ಅವರಲ್ಲಿಬ್ಬರು ಹೊರಗುಳಿಯಬೇಕಾಗುತ್ತದೆ.

ಇದನ್ನೂ ಓದಿ:ಬಂದ್‌ಗೆ ಚಿತ್ರೋದ್ಯಮ ನೈತಿಕ ಬೆಂಬಲ: ಸಿನಿಮಾ ರಿಲೀಸ್‌, ಶೂಟಿಂಗ್‌ ಯಥಾಸ್ಥಿತಿ

Advertisement

“ಇದೊಂದು ಕಠಿನ ನಿರ್ಧಾರ. ರಹಾನೆ ಟೆಸ್ಟ್‌ ತಂಡದ ಪ್ರಮುಖ ಆಟಗಾರ. ವಿದೇಶಗಳಲ್ಲಿ ಅನೇಕ ಉಪಯುಕ್ತ ಇನ್ನಿಂಗ್ಸ್‌ ಆಡಿದ್ದಾರೆ. ಅಯ್ಯರ್‌ ಕಾನ್ಪುರದಲ್ಲಿ ಶತಕ ಬಾರಿಸಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಹಾರಿ ಕೂಡ ಉತ್ತಮ ಬ್ಯಾಟ್ಸ್‌ಮನ್‌. ಇಂದು ಅಥವಾ ನಾಳೆಯೊಳಗೆ ಸುದೀರ್ಘ‌ವಾಗಿ ಚರ್ಚಿಸಿ ಆಯ್ಕೆ ಪ್ರಕ್ರಿಯೆ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಿದ್ದೇವೆ” ಎಂದು ರಾಹುಲ್‌ ಹೇಳಿದರು.

ಸಂಭಾವ್ಯ ತಂಡ: ವಿರಾಟ್ ಕೊಹ್ಲಿ (ನಾ), ಕೆ.ಎಲ್.ರಾಹುಲ್ (ಉ.ನಾ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ/ ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

Advertisement

Udayavani is now on Telegram. Click here to join our channel and stay updated with the latest news.

Next