Advertisement
ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಕೂಡಾ ಮಾಡಬಹುದು ಎಂದು ಹಲವರಿಗೆ ತಿಳಿಯುತ್ತಿರಲಿಲ್ಲ, ಕೆ.ಎಲ್.ರಾಹುಲ್ ಮಧ್ಯಮ ಕ್ರಮಾಂಕದಲ್ಲೂ ರಿಷಭ್ ಸ್ಥಾನದಲ್ಲಿ ಫಿಟ್ ಆಗಬಲ್ಲ ಎಂದು ಯಾರಿಗೂ ಅಂದಾಜಾಗುತ್ತಿರಲಿಲ್ಲ. ಅವಕಾಶವೇ ದೊರೆಯದೆ ಬೆಂಚು ಬಿಸಿ ಮಾಡುತ್ತಿದ್ದವ ವಿರಾಟ್, ರೋಹಿತ್ ಅನುಪಸ್ಥಿತಿಯಲ್ಲಿ ತಂಡದ ಕ್ಯಾಪ್ಟನ್ ಆಗಲು ಸಾಧ್ಯವಾಗುತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಯಾವುದೇ ಕ್ರಮಾಂಕದಲ್ಲೂ ಆಡಿ, ಯಾವುದೇ ಜವಾಬ್ದಾರಿಯನ್ನೂ ನಿಭಾಯಿಸಬಲ್ಲ ಒಬ್ಬ ಅಪ್ಪಟ ಟೀಂ ಮ್ಯಾನ್ ಆಗಿ ರಾಹುಲ್ ಬದಲಾಗುತ್ತಿರಲಿಲ್ಲ. ಇದು ಮೊದಲ ಸಾಲಿನಲ್ಲಿ ಕೇಳಿದ ಪ್ರಶ್ನೆಗೆ ದೊರೆತ ಉತ್ತರ.
ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿ ಆಗಬಲ್ಲರು ಎಂಬ ಆಶಾದಾಯಕ ಭರವಸೆಯಿಂದ ತಂಡಕ್ಕೆ ಎಂಟ್ರಿಯಾದವರು ವಿಕೆಟ್ ಕೀಪರ್ ರಿಷಭ್ ಪಂತ್. ಹುಡುಗು ಬುದ್ಧಿಯ ಹೊಡೆತಗಳು, ಅಸ್ಥಿರ ಪ್ರದರ್ಶನ,ಗಟ್ಟಿ ಮನಸ್ಥಿತಿಯ ಕೊರತೆ ಪಂತ್ ಗೆ ಕಾಡುತ್ತಿದ್ದು ನಿಜ. ಆದರೆ ಬಿಸಿಸಿಐ ಬೇರೆ ಯುವ ವಿಕೆಟ್ ಕೀಪರ್ ಗಳ ಮೇಲೆ ಅಷ್ಟಾಗಿ ಭರವಸೆ ಇಡದ ಕಾರಣ ಅಸ್ಥಿರ ಪ್ರದರ್ಶನದ ಹೊರತಾಗಿಯೂ ಪಂತ್ ಗೆ ಅವಕಾಶ ಸಿಗುತ್ತಿತ್ತು. ಆದರೆ ರಾಹುಲ್ ವಿಕೆಟ್ ಹಿಂದೆ ಕೂಡ ಕಮಾಲ್ ಮಾಡಬಹುದು ಎಂದು ತಿಳಿಯಿತೋ ಆದು ಪಂತ್ ಕ್ರಿಕೆಟ್ ಬದುಕನ್ನೇ ಅಸ್ಥಿರಗೊಳಿಸಿದ್ದು ಮಾತ್ರ ಸುಳ್ಳಲ್ಲ.
Related Articles
Advertisement
ಕೀಪರ್ ಆಗಿ ರಾಹುಲ್ರಾಹುಲ್ ಅಚಾನಕ್ ಆಗಿ ವಿಕೆಟ್ ಕೀಪಿಂಗ್ ಗ್ಲೌಸ್ ಹಿಡಿದವರಲ್ಲ. ಬಾಲ್ಯದಿಂದಲೂ ವಿಕೆಟ್ ಕೀಪಿಂಗ್ ಅಭ್ಯಾಸ ಮಾಡಿದ್ದ. ಕರ್ನಾಟಕ ತಂಡ, ಐಪಿಎಲ್ ಫ್ರಾಂಚೈಸಿಗಳಿಗೆ ರಾಹುಲ್ ವಿಕೆಟ್ ಹಿಂದೆ ನಿಂತಿದ್ದಾರೆ. ಆದರೆ ಭಾರತ ತಂಡದಲ್ಲಿ ಧೋನಿ, ನಂತರ ಪಂತ್ ಇದ್ದ ಕಾರಣ ಅವಕಾಶ ಸಿಕ್ಕಿರಲಿಲ್ಲ ಅಷ್ಟೇ. ಆದರೆ ಸದ್ಯ ತಾನಾಗಿಯೇ ಒಲಿದು ಬಂದ ಅಮೂಲ್ಯ ಅವಕಾಶವನ್ನು ಕೆ ಎಲ್ ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದಾರೆ.
ಪ್ರಮುಖ ಕೀಪರ್ ರಿಷಭ್ ಪಂತ್ ಗುಣಮುಖರಾಗಿದ್ದಾರೆ. ಪಂತ್ ಗೆ ಮತ್ತೆ ಕೀಪಿಂಗ್ ಗ್ಲೌಸ್ ಕೊಡಬಹುದಲ್ವ? ಮತ್ತೊಬ್ಬ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಇದ್ದರಲ್ಲ, ಅವರಿಗೆ ಅವಕಾಶ ನೀಡಬಹುದಲ್ವ? ರಾಹುಲ್ ಯಾಕೆ ಬೇಕು? ರಾಹುಲ್ ಯಾಕೆ ಬೇಕೆಂದರೆ ಸದ್ಯ ಆತನಿರುವ ಫಾರ್ಮ್. ಜೀವನದ ಅತ್ಯುನ್ನತ ಫಾರ್ಮ್ ನಲ್ಲಿರುವ ರಾಹುಲ್ ಪ್ರತಿ ಪಂದ್ಯದಲ್ಲೂ ಮಿಂಚುತ್ತಿದ್ದಾರೆ. ಅದೇ ಆಟವನ್ನು ಪಂತ್ ಅಥವಾ ಸಂಜುವಲ್ಲಿ ಸದ್ಯಕ್ಕಿಲ್ಲ. ನಿಮ್ಮ ಅತ್ಯುತ್ತಮ ಬ್ಯಾಟ್ಸ್ ಮನ್ ಒಬ್ಬ ಕೀಪಿಂಗ್ ಕೂಡ ಮಾಡಬಲ್ಲ ಎಂದಾದರೆ ಅದು ಆ ತಂಡದ ಅದೃಷ್ಟ. ಆಗ ಮತ್ತೋರ್ವ ಕೀಪರ್ ಆಡಿಸುವ ಜಾಗದಲ್ಲಿ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಅಥವಾ ಆಲ್ ರೌಂಡರ್ ನನ್ನು ಆಡಿಸುವ ಅವಕಾಶವಿರುತ್ತದೆ. ಈ ಹಿಂದೆ ಸೌರವ್ ಗಂಗೂಲಿಯೂ ಇದೇ ಲೆಕ್ಕಾಚಾರದಲ್ಲಿ ರಾಹುಲ್ ದ್ರಾವಿಡ್ ಗೆ ಕೀಪಿಂಗ್ ಜವಾಬ್ದಾರಿ ನೀಡಿದ್ದು. ದಕ್ಷಿಣ ಆಫ್ರಿಕಾ ತಂಡದಲ್ಲಿ ಬೌಚರ್ ರಾಜೀನಾಮೆ ನಂತರ ಕ್ವಿಂಟನ್ ಡಿ ಕಾಕ್ ಪದಾರ್ಪಣೆ ಆಗುವವರೆಗೆ ಡಿ ವಿಲಿಯರ್ಸ್ ಕೀಪರ್ ಆಗಿದ್ದು ಕೂಡ ಇದೇ ರೀತಿಯ ಕಾರಣದಿಂದ.
ಕೆ.ಎಲ್ .ರಾಹುಲ್ ಈಗ ಆರಂಭಿಕ ಆಟಗಾರನಲ್ಲ. ಬದಲಾಗಿ ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿಯುವ ರಾಹುಲ್, ಹಿಂದೆ ಧೋನಿ ನಿಭಾಯಿಸುತ್ತಿದ್ದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಐದನೇ ಕ್ರಮಾಂಕದಲ್ಲಿ ಆಡಿಸಿ ಫಿನಿಶರ್ ಆಗಿ ಕೆ.ಎಲ್.ರಾಹುಲ್ ಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಐದನೇ ಕ್ರಮಾಂಕದಲ್ಲಿ ಆಡಿದ ಎರಡು ಇನ್ನಿಂಗ್ಸ್ ನಲ್ಲಿ ರಾಹುಲ್ ಅದ್ಭುತವಾಗಿ ಆಡಿದ್ದಾರೆ. ಕೆ.ಎಲ್.ರಾಹುಲ್ ನ ಶಕ್ತಿ ಏನೆಂದರೆ ಆತ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಬಲ್ಲ ಅಥವಾ ಮೊದಲ ಎಸೆತದಿಂದಲೇ ಸಿಕ್ಸರ್ ಬಾರಿಸಬಲ್ಲ. ಹೀಗಾಗಿ ಯಾವ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲ ಸಾಮರ್ಥ್ಯ ರಾಹುಲ್ ಗಿದೆ. ಐದನೇ ಕ್ರಮಾಂಕದಲ್ಲಿ ಸಂದರ್ಭಕ್ಕೆ ತಕ್ಕ ವೇಗದಲ್ಲಿ ಬ್ಯಾಟ್ ಬೀಸುತ್ತಿರುವುದು ತಂಡಕ್ಕೆ ಹೊಸ ಹುರುಪು ಕೊಡುತ್ತಿದೆ. ಕಿವೀಸ್ ಏಕದಿನ ಸರಣಿಯಲ್ಲಿಇಬ್ಬರು ಆರಂಭಿಕರು ಗೈರಾಗಿದ್ದರೂ ರಾಹುಲ್ ರನ್ನು ಐದನೇ ಕ್ರಮಾಂಕದಲ್ಲೇ ಆಡಿಸಲು ಪ್ರಮುಖ ಕಾರಣ ನಾಯಕ ರಾಹುಲ್ ರನ್ನು ರಕ್ಷಿಸುತ್ತಿರುವ ನಾಯಕ ವಿರಾಟ್ ಕೊಹ್ಲಿ. ಕೆ ಎಲ್ ರಾಹುಲ್ ರ ಕೌಶಲ್ಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಅವರನ್ನು ತಂಡದಿಂದ ಕೈಬಿಡಲು ತಯಾರಿಲ್ಲ. ರಾಹುಲ್ ರನ್ನು ಆರಂಭಿಕರಾಗಿ ಇಳಿಸಿದರೆ, ಗಾಯಗೊಂಡಿರುವ ರೋಹಿತ್ ಮತ್ತು ಧವನ್ ಮರಳಿ ಬಂದಾಗ ಅವರ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಆಗ ರಾಹುಲ್ ಸ್ಥಾನಕ್ಕೆ ಕುತ್ತು ಬರುತ್ತದೆ. ಹಾಗಾಗಿ ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ರನ್ನು ಗಟ್ಟಿಗೊಳಿಸಲು ಕೊಹ್ಲಿ ಉತ್ತಮ ವೇದಿಕೆ ಸೃಷ್ಟಿಸುತ್ತಿದ್ದಾರೆ. ಕೆ.ಎಲ್. ರಾಹುಲ್ ರ ಪ್ರತಿಭೆ ಅಗಾಧವಾದದ್ದು. ಸದ್ಯ ಅದ್ಭುತ ಫಾರ್ಮ್ ನಲ್ಲಿರುವ ರಾಹುಲ್ ಗೆ ಉತ್ತಮ ಅವಕಾಶವೂ ದೊರೆಯುತ್ತಿದೆ. ಸರಿಯಾಗಿ ಬಳಸಿಕೊಳ್ಳಬೇಕಷ್ಟೆ. ಕೀರ್ತನ್ ಶೆಟ್ಟಿ ಬೋಳ