ಹೊಸದಿಲ್ಲಿ : ನಿಮ್ಮ ತಾಯಿ ಏಲಾನ್ ಗುಟ್ಟಾ ಓರ್ವ ಚೀನೀ ಎಂದು ಅವಮಾನಕರ ರೀತಿಯಲ್ಲಿ ಟ್ವಿಟರ್‌ನಲ್ಲಿ ಹೀಗಳೆದ ಹಿಂಬಾಲಕನೋರ್ವನ ವಿರುದ್ಧ ಭಾರತೀಯ ಬ್ಯಾಡ್ಮಿಂಟನ್ ಡಬಲ್ಸ್ ತಾರೆ ಜ್ವಾಲಾ ಗುಟ್ಟಾ, ಟ್ವಿಟರ್‌ನಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ ತನ್ನ ತಾಯಿಯ ವಿಡಿಯೋ ಒಂದನ್ನುupload ಮಾಡಿದ್ದಾರೆ.
“ನಿಮ್ಮ ತಾಯಿ ಮೋದಿ ವಿರೋಧಿ; ರಾಷ್ಟ್ರ ವಿರೋಧಿ; ಆಕೆ ಒಬ್ಬ ಚೀನೀ ಮಹಿಳೆ ” ಎಂದು ಟ್ವಿಟರ್ ಹಿಂಬಾಲಕನೋರ್ವ ಜ್ವಾಲಾ ಗುಟ್ಟಾ ವಿರುದ್ಧ ಆರೋಪಗಳ ಸುರಿಮಳೆ ಗೈದಿದ್ದ.
“ನೀವು ಪ್ರತೀ ಬಾರಿ ಮೋದಿಯನ್ನು ವಿರೋಧಿಸುವುದು ನಿಮ್ಮ ತಾಯಿ ಚೀನದವರಾಗಿರುವ ಕಾರಣಕ್ಕೆ ಇರಬಹುದೇ ?’ ಎಂದು ಆ ಟ್ವಿಟರ್ ಹಿಂಬಾಲಕ ಕಟಕಿಯಾಡಿದ.
ಇದಕ್ಕೆ ಉತ್ತರವಾಗಿ ಜ್ವಾಲಾ ಗುಟ್ಟಾ “ಮಾತನಾಡುವ ಮೊದಲು ಎರಡು ಬಾರಿ ಯೋಚಿಸಿ’ ಎಂದು ಖಡಕ್ ಆಗಿ ಉತ್ತರಿಸಿದ್ದರು.
ಇದಾದ ಬಳಿಕ ಟ್ವಿಟರ್ ಹಿಂಬಾಲಕ ಮತ್ತು ಜ್ವಾಲಾ ನಡುವೆ ಸರಣಿ ಟ್ವೀಟ್ ಸಮರವೇ ಮುಂದುವರಿಯಿತು.
ಈಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಸೆಲಿಬ್ರಿಟಿಗಳನ್ನು ಅತ್ಯಂತ ಕ್ಷುಲ್ಲಕ ಕಾರಣಗಳಿಗೆ ಹೀಯಾಳಿಸುವುದು, ಹೀಗಳೆಯುವುದು, ಟ್ರೋಲ್ ಮಾಡುವುದು ಮತ್ತು ವಿವಾದಾತ್ಮಾಕ ಬರಹಗಳನ್ನು ಪೋಸ್ಟ್ ಮಾಡುವ ಚಾಳಿ ವ್ಯಾಪಕವಾಗಿದೆ ಎಂಬುದಕ್ಕೆ ಇದೂ ಒಂದು ನಿದರ್ಶನವಾಗಿದೆ.