Advertisement

900 ವರ್ಷಗಳ ಹೋರಾಟಕ್ಕೆ ಸಿಕ್ಕ ನ್ಯಾಯ

07:12 PM Mar 21, 2018 | Team Udayavani |

ದಾವಣಗೆರೆ: ರಾಜ್ಯ ಸರ್ಕಾರ ಲಿಂಗಾಯತ ಧರ್ಮವನ್ನ ಸ್ವತಂತ್ರ ಧರ್ಮ ಹಾಗೂಲಿಂಗಾಯತರನ್ನ ಧಾರ್ಮಿಕ ಅಲ್ಪಸಂಖ್ಯಾತರು ಎಂಬುದಾಗಿ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನ ಸ್ವಾಗತಿಸಿ ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ವಿವಿಧ ಮಠಾಧೀಶರು, ಗಣ್ಯರು, ಬಸವಾಭಿಮಾನಿಗಳು ಮಂಗಳವಾರ ಸಂಜೆ ಜಯದೇವ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು. ಬಸವಣ್ಣನ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ, ಪರಸ್ಪರ ಸಿಹಿ ಹಂಚಿ, ನಂದಿಕೋಲು ಕುಣಿತ, ಜೈಕಾರ ಕೂಗುವ ಮೂಲಕ ವಿಜಯೋತ್ಸವ ಆಚರಿಸಿದರು.

Advertisement

ರಾಜ್ಯ ಸರ್ಕಾರದ ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದಲ್ಲಿ ಮತ್ತೂಮ್ಮೆ ವಿಜಯೋತ್ಸವ ಆಚರಿಸಲಾಗುವುದು ಎಂದರು. ವಿಜಯೋತ್ಸವವನ್ನುದ್ದೇಶಿಸಿ ಮಾತನಾಡಿದ  ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ದೊರೆಯಬೇಕು ಎಂಬ 900 ವರ್ಷಗಳ ಕಾಲದ ನಿರಂತರ ಹೋರಾಟಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮೊದಲ ಜಯ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜವಾದ ಬಸವಾಭಿಮಾನಿಗಳಾಗಿದ್ದಾರೆ. ಅವರು ಲಿಂಗಾಯತ
ಧರ್ಮಕ್ಕೆ ನ್ಯಾಯ ಒದಗಿಸಿದ್ದಾರೆ. ಅವರು ಧರ್ಮ ಒಡೆಯುವ ಕೆಲಸ ಮಾಡಿಯೇ ಇಲ್ಲ ಎಂದರು.

ಕೆಲವಾರು ಸಂಪ್ರದಾಯ, ಮೂಲಭೂತವಾದಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮ ಒಡೆದಿದ್ದಾರೆ ಎಂಬ ಅಪಪ್ರಚಾರ ಮಾಡುತ್ತಿದ್ದಾರೆ. ಒಡೆಯಲಿಕ್ಕೆ ಧರ್ಮವೇನು ಗಾಜಿನುಂಡೆ ಅಥವಾ ಕುಂಬಳಕಾಯಿ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ
ಧರ್ಮಕ್ಕೆ ಸಾಮಾಜಿಕ ನ್ಯಾಯ ಕೊಟ್ಟಿದ್ದಾರೆ. ಬಸವಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಿದ್ದಾರೆ. ವೀರಶೈವರು ಸ್ವತಂತ್ರ ಧರ್ಮದ ಮಾನ್ಯತೆ ಪಡೆದುಕೊಳ್ಳಲಿ. ಯಾರೂ ಬೇಡ ಎನ್ನುವುದೇ ಇಲ್ಲ ಎಂದರು. ಬಸವಣ್ಣನವರು ವೈಚಾರಿಕ, ವೈಜ್ಞಾನಿಕ. ಸಮಾನತೆಯ ಲಿಂಗಾಯತ ಧರ್ಮವನ್ನ ಪ್ರಾರಂಭಿಸಿದವರು. ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು ಎಂಬ
ಹೋರಾಟಕ್ಕೆ ಶತಮಾನದ ಇತಿಹಾಸವೇ ಇದೆ. 900 ವರ್ಷಗಳ ಲಿಂಗಾಯತ ಧರ್ಮವನ್ನ ವೈದಿಕ ಮೂಲಭೂತವಾದಿಗಳು ಬಂಧನದಲ್ಲಿಟ್ಟಿದ್ದರು. ರಾಜ್ಯ ಸರ್ಕಾರ ಲಿಂಗಾಯತ ಧರ್ಮವನ್ನು ಬಂಧನದಿಂದ ಮುಕ್ತ ಗೊಳಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಕೇಂದ್ರಕ್ಕೆ ಮಾಡಿರುವ ಶಿಫಾರಸಿನಂತೆ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು. ಆಗ ಮತ್ತೂಮ್ಮೆ ಇದೇ ಜಯದೇವ ವೃತ್ತದಲ್ಲಿ ವಿಜಯೋತ್ಸವ ನಡೆಸಲಾಗುವುದು. ಮೋದಿ ಸರ್ಕಾರ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು. ಆ ನಿಟ್ಟಿನಲ್ಲೂ ಒತ್ತಡದ ಹೋರಾಟ ನಡೆಸಬೇಕು ಎಂದು ಹೇಳಿದರು.

ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರು ಬಸವ ಸ್ವಾಮೀಜಿ ಮಾತನಾಡಿ, 900 ವರ್ಷಗಳ ಹಿಂದಿನಿಂದಲೂ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕು ಎಂಬ ನಿರಂತರ ಹೋರಾಟ ನಡೆಯುತ್ತಲೇ ಇತ್ತು. 1891 ರಿಂದ ಈ ಹೋರಾಟ ತೀವ್ರತೆ ಪಡೆದುಕೊಂಡಿತ್ತು. ಇತ್ತೀಚಿನವರೆಗೆ ಹೋರಾಟ ನಡೆದಿತ್ತು. ಸರ್ಕಾರ ಹೋರಾಟಕ್ಕೆ ಸ್ಪಂದಿಸಿ, ಸ್ವತಂತ್ರ ಧರ್ಮದ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಸಂತೋಷದ ವಿಚಾರ ಎಂದರು.

Advertisement

ವಿ. ಸಿದ್ದರಾಮ ಶರಣರು, ಜಾಗತಿಕ ಲಿಂಗಾಯತ ಮಹಾಸಭಾದ ನಿಯೋಜಿತ ಜಿಲ್ಲಾ ಅಧ್ಯಕ್ಷ ಎಂ. ಶಿವಕುಮಾರ್‌, ಹಿರಿಯ ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ, ಬಾಡದ ಆನಂದರಾಜ್‌, ದೇವಿಗೆರೆ ವೀರಭದ್ರಪ್ಪ, ಶಶಿಕುಮಾರ್‌ ಬಸಾಪುರ, ಹುಚ್ಚಪ್ಪ ಮಾಸ್ತರ್‌, ಬಸವರಾಜ್‌ ಶ್ಯಾಗಲೆ, ಹಾಲೇಶಪ್ಪ ಆವರಗೆರೆ, ವನುಜಾ ಮಹಾಲಿಂಗಯ್ಯ, ರುದ್ರಮ್ಮ, ವೀಣಾ ಮಂಜುನಾಥ್‌, ಎಚ್‌.ಎಂ.
ಸ್ವಾಮಿ, ಅಜ್ಜಂಪುರಶೆಟ್ರಾ ಷಡಕ್ಷರಪ್ಪ, ನಿರ್ಮಲಮ್ಮ, ವಿನೋದಮ್ಮ, ಲಕ್ಷ್ಮಿ ರುದ್ರಪ್ಪ, ಆವರಗೆರೆ ರುದ್ರಮುನಿ ಇತರರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next