ನಾಳೆ ಮಾಡುವ ಕಾರ್ಯವನ್ನು ಇಂದೇ ಮಾಡು, ಇಂದು ಮಾಡುವ ಕೆಲಸವನ್ನು ಈಗಲೇ ಮಾಡು – ಇದು ಹಿರಿಯರು ಹೇಳುವ ಮಾತು. ಕೆಲಸ ಕಾರ್ಯಗಳನ್ನು ಮುಂದಕ್ಕೆ ಹಾಕಬಾರದು ಎಂಬುದು ಇದರರ್ಥ. ಒಳ್ಳೆಯ ಕೆಲಸಗಳನ್ನು ಮುಂದಕ್ಕೆ ಹಾಕಬಾರದು ಎಂಬ ಮಾತು ಕೂಡ ಇದೆ. ಮುಂದಿನ ಕ್ಷಣ, ಇನ್ನೊಂದು ತಾಸಿನ ಬಳಿಕ, ಇಂದು ಸಂಜೆ ಅಥವಾ ನಾಳೆ – ನಮ್ಮ ಪಾಲಿಗೆ ಇರುತ್ತದೆಯೋ ಇಲ್ಲವೋ ಯಾರಿಗೆ ಗೊತ್ತಿದೆ ಎಂಬ ಬೃಹದರ್ಥವೂ ಈ ಹಿತವಚನದ ಹಿಂದೆ ಇದೆ. ಕಾಲ ಮಿಂಚಿ ಹೋಗುತ್ತದೆ ಎಂಬುದು ಪ್ರತೀ ಕ್ಷಣವೂ ಸತ್ಯ. ಹಾಗಾಗಿ ಈ ಕ್ಷಣವೇ ಅಂತಿಮ ಎಂಬ ಎಚ್ಚರದಲ್ಲಿ ಇದ್ದು ಕೊಂಡೇ ಕೆಲಸಗಳನ್ನು, ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಮುಂದಕ್ಕೆ ಹಾಕುವುದು ಬುದ್ಧಿವಂತರ ಲಕ್ಷಣವಲ್ಲ.
ಒಂದೂರಿನ ಸರೋವರದಲ್ಲಿ ಮೂರು ಮೀನುಗಳಿದ್ದವಂತೆ. ಅವುಗಳಲ್ಲಿ ಒಂದು ಬುದ್ಧಿವಂತ ಮೀನು. ಇನ್ನೊಂದು ಅರೆ ಬುದ್ಧಿವಂತ ಮೀನು. ಮೂರನೆಯದು ಮೂರ್ಖ ಮೀನಾಗಿತ್ತು. ಒಂದು ದಿನ ಕೆಲವು ಮನುಷ್ಯರು ಮೀನು ಹಿಡಿಯುವ ಬಲೆ ಹಿಡಿದುಕೊಂಡು ಆ ಸರೋವರದ ಬಳಿಗೆ ಬಂದರು. ದಡದಲ್ಲಿ ನಿಂತುಕೊಂಡು ಏನೋ ಮಾತಾಡಿಕೊಳ್ಳುತ್ತಿದ್ದರು.
ಅವರನ್ನು ನೋಡಿದ ಕೂಡಲೇ ಬುದ್ಧಿವಂತ ಮೀನಿಗೆ ಅಪಾಯದ ಅರಿವಾಯಿತು. ಅದು ತತ್‌ಕ್ಷಣ ಆ ಸರೋವರವನ್ನು ತ್ಯಜಿಸಿ ಸಮುದ್ರದತ್ತ ಸಾಗಲು ನಿರ್ಧರಿಸಿತು. “ಈ ಎರಡು ಮೀನುಗಳ ಬಳಿ ನನ್ನ ಯೋಜನೆಯ ಬಗ್ಗೆ ಏನೂ ಹೇಳುವುದಿಲ್ಲ. ಹೇಳಿದರೆ ಇಂದು-ನಾಳೆ ಎಂದು ಮುಂದಕ್ಕೆ ಹಾಕಬೇಕಾಗುತ್ತದೆ, ನನ್ನ ನಿರ್ಧಾರ ದುರ್ಬಲವಾಗುತ್ತದೆ. ಏಕೆಂದರೆ ಅವೆರಡೂ ಈ ಸರೋವರವೇ ಸ್ವರ್ಗ ಎಂದುಕೊಂಡಿವೆ…’ ಎಂದುಕೊಂಡಿತು. ಬಳಿಕ ಸರೋವರವನ್ನು ಸಂಪರ್ಕಿಸಿದ್ದ ತೊರೆಯ ಮೂಲಕ ಸಮುದ್ರದ ದಿಕ್ಕಿನಲ್ಲಿ ಈಜುತ್ತ ಹೊರಟೇ ಬಿಟ್ಟಿತು.
ಬುದ್ದಿವಂತ ಮೀನು ಹೋಗಿಯಾದ ಬಳಿಕ ಅರೆ ಬುದ್ಧಿವಂತ ಮೀನಿಗೆ ಜ್ಞಾನೋದಯವಾಯಿತು. “ಛೆ! ನನ್ನ ಗೆಳೆಯನ ಜತೆಗೆ ಹೋಗಿಬಿಡಬಹು ದಿತ್ತು. ಈಗ ಆ ಅವಕಾಶ ಕಳೆದೇ ಹೋಯಿತು’ ಎಂದು ಕೊಂಡ ಅದು ಸ್ವಲ್ಪ ಹೊತ್ತು ದುಃಖೀಸಿತು. ಬಳಿಕ ಈ ಮನುಷ್ಯರ ಬಲೆಯಿಂದ ಪಾರಾಗಲು ಏನು ಮಾಡಬಹುದು ಎಂದು ಯೋಚಿಸಿತು. “ನಾನು ಈಗಾಗಲೇ ಸತ್ತಂತೆ ನಟಿಸಿದರೆ ಇವರಿಂದ ಬಚಾವಾಗಬಹುದು’ ಎಂದುಕೊಂಡು ಹೊಟ್ಟೆ ಮೇಲಾಗಿ ತೇಲುತ್ತ ಸತ್ತಂತೆ ಆ ಮನುಷ್ಯರ ಕೈಯಳತೆಯಲ್ಲಿ ಬಿದ್ದುಕೊಂಡಿತು.
ಅವರಲ್ಲೊಬ್ಬ, “ಹೋ! ದೊಡ್ಡ ಮೀನು ಈಗಾಗಲೇ ಸತ್ತಿದೆ’ ಎಂದು ಕೂಗಿದ. ಅದರ ಬಾಲ ಹಿಡಿದು ಎತ್ತಿ ದೂರ ಎಸೆದ. ಅವರ ದೃಷ್ಟಿ ಆಚೆಗೆ ಹೊರಳಿದ ಬಳಿಕ ಅರೆ ಬುದ್ಧಿವಂತ ಮೀನು ಮೆಲ್ಲನೆ ಹೊರಳಿ ಜಾರಿ ಸರೋವರವನ್ನು ಸೇರಿಕೊಂಡು ನೀರಿನ ಆಳದಲ್ಲಿ ಉಳಿಯಿತು.
ಮೂರನೆಯ ಮೂರ್ಖ ಮೀನು ಬಲೆ ಹಿಡಿದ ಮನುಷ್ಯರನ್ನು ನೋಡುತ್ತ ರೋಷಾವೇಶದಿಂದ ಮೇಲೆ -ಕೆಳಗೆ ಹಾರಿತು, ಜೋರು ಜೋರಾಗಿ ಈಜಾಡಿತು. ಅವರು ಅದಕ್ಕೇ ಗುರಿ ಇರಿಸಿ ಬಲೆ ಬೀಸಿದರು. ಮನೆಗೊಯ್ದರು.
ಅವರ ಮನೆಯ ಅಡುಗೆ ಕೋಣೆಯಲ್ಲಿ ಬಿಸಿ ಬಿಸಿ ಬಾಣಲೆಯ ಮೇಲೆ ಮಲಗಿಕೊಂಡು ಮೂರ್ಖ ಮೀನು ಯೋಚಿಸಿತು, “ಈಗೊಂದು ಅವಕಾಶ ಸಿಕ್ಕಿದರೆ ಈ ಜನ್ಮದಲ್ಲಿ ಆ ಸರೋವರದ ದಿಕ್ಕಿಗೆ ತಲೆ ಹಾಕಿ ಮಲಗುವುದಿಲ್ಲ. ಮುಂದಿನ ಜನ್ಮ ಎಂಬುದೇನಾದರೂ ಇದ್ದರೆ ಎಲ್ಲೇ ಹುಟ್ಟಿದರೂ ಮೊದಲು ಮಾಡುವ ಕೆಲಸ ಎಂದರೆ ಸಮುದ್ರಕ್ಕೇ ಹೋಗಿಬಿಡುವುದು! ಅದನ್ನೇ ನನ್ನ ಮನೆಯನ್ನಾಗಿ ಮಾಡಿಕೊಳ್ಳುತ್ತೇನೆ…’
( ಸಾರ ಸಂಗ್ರಹ)