Advertisement

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

12:33 PM Jan 07, 2025 | Team Udayavani |

ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಸೋಮವಾರ (ಜ.06) ಸಂಜೆ ಪ್ರಧಾನಿ ಹುದ್ದೆ ಹಾಗೂ ಲಿಬರಲ್‌ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬರೋಬ್ಬರಿ ಹತ್ತು ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದ ಟ್ರುಡೋ ರಾಜೀನಾಮೆಗೆ ಒತ್ತಾಯಿಸಿ ಸ್ವಪಕ್ಷದಲ್ಲೇ ಭಿನ್ನಮತ ಸೃಷ್ಟಿಯಾಗಿದ್ದರಿಂದ ಈ ಬೆಳವಣಿಗೆ ನಡೆದಿದೆ. ಆದರೆ ಲಿಬರಲ್‌ ಪಕ್ಷ ನೂತನ ಪ್ರಧಾನಿ ಆಯ್ಕೆ ಮಾಡುವವರೆಗೆ ತಾನೇ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆನಡಾದ ಮುಂದಿನ ಪ್ರಧಾನಿ ಯಾರು ಎಂಬ ಲೆಕ್ಕಾಚಾರ ಆರಂಭವಾಗಿದೆ.

Advertisement

ಮಾಧ್ಯಮಗಳ ವರದಿ ಪ್ರಕಾರ, ಕೆನಡಾದ ಮುಂದಿನ ಸಂಭಾವ್ಯ ಪ್ರಧಾನಿಗಳ ಪಟ್ಟಿಯಲ್ಲಿ ಕ್ರಿಸ್ಟಿಯಾ ಫ್ರೀಲ್ಯಾಂಡ್‌, ಭಾರತೀಯ ಮೂಲದ ಅನಿತಾ ಆನಂದ್‌ ಸೇರಿದಂತೆ ಕೆಲವರ ಹೆಸರು ಹರಿದಾಡುತ್ತಿದೆ ಎಂದು ತಿಳಿಸಿದೆ.

ಕ್ರಿಸ್ಟಿಯಾ ಫ್ರೀಲ್ಯಾಂಡ್:‌

ಕ್ರಿಸ್ಟಿಯಾ ಫ್ರೀಲ್ಯಾಂಡ್‌ ಟ್ರುಡೋ ಅವರ ಕ್ಯಾಬಿನೆಟ್‌ ನಲ್ಲಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕ್ರಿಸ್ಟಿಯಾ ಲಿಬರಲ್‌ ಪಕ್ಷದ ಪ್ರಭಾವಿ ನಾಯಕರಲ್ಲೊಬ್ಬರು ಎಂದು ಪರಿಗಣಿಸಲಾಗಿದೆ. ಮಾಜಿ ಪ್ರಧಾನಿ ಟ್ರುಡೋ ಹಾಗೂ ಕ್ರಿಸ್ಟಿಯಾ ನಡುವೆ ತೀವ್ರ ಭಿನ್ನಾಭಿಪ್ರಾಯ ಮೂಡಿದ್ದರಿಂದ ಕ್ರಿಸ್ಟಿಯಾ 2024ರ ಡಿಸೆಂಬರ್‌ ನಲ್ಲಿ ವಿತ್ತ ಸಚಿವ ಖಾತೆಗೆ ರಾಜೀನಾಮೆ ನೀಡಿದ್ದರು.

ಕ್ರಿಸ್ಟಿಯಾ ಫ್ರೀಲ್ಯಾಂಡ್‌ ರಾಜೀನಾಮೆ ನಂತರ ಟ್ರುಡೋ ಅವರ ರಾಜೀನಾಮೆಗೆ ಸ್ವಪಕ್ಷದಲ್ಲೇ ಒತ್ತಾಯ ಹೆಚ್ಚತೊಡಗಿದ್ದು, ಅದರ ಪರಿಣಾಮ 2025ರ ಜನವರಿ 06ರಂದು ರಾಜೀನಾಮೆ ನೀಡಿದ್ದರು.

Advertisement

ಅನಿತಾ ಆನಂದ್:‌

ಭಾರತೀಯ ಮೂಲದ ಅನಿತಾ ಆನಂದ್‌ ಇಂಡೋ-ಕೆನಡಿಯನ್‌ ಸಮುದಾಯದ ಮುಖಂಡರಾಗಿದ್ದಾರೆ. ಇದೀಗ ಲಿಬರಲ್‌ ಪಕ್ಷದ ನಾಯಕಿಯಾಗಿರುವ ಅನಿತಾ ಅವರು ಕೆನಡಾದ ಮುಂದಿನ ಪ್ರಧಾನಿ ಹುದ್ದೆಯ ರೇಸ್‌ ನಲ್ಲಿದ್ದಾರೆ.

57 ವರ್ಷದ ಅನಿತಾ ಆನಂದ್‌ ಆಕ್ಸ್‌ ಫರ್ಡ್‌ ಯೂನಿರ್ವಸಿಟಿ ಪದವೀಧರೆಯಾಗಿದ್ದಾರೆ. ಅನಿತಾ ಅವರು ಓಕ್‌ ವಿಲ್ಲೆಯ ಸಂಸದೆಯಾಗಿದ್ದರು.  ನೋವಾ ಸ್ಕೋಟಿಯಾದಲ್ಲಿ ಜನಿಸಿದ್ದ ಅನಿತಾ ಆನಂದ್‌, 1985ರಲ್ಲಿ ಓನ್‌ ಟಾರಿಯೋಕ್ಕೆ ಸ್ಥಳಾಂತರಗೊಂಡಿದ್ದರು. ಅನಿತಾ ಮತ್ತು ಪತಿ ಜಾನ್‌ ಹಾಗೂ ನಾಲ್ವರು ಮಕ್ಕಳೊಂದಿಗೆ ಓಕ್‌ ವಿಲ್ಲೆಯಲ್ಲಿ ವಾಸವಾಗಿರುವುದಾಗಿ ವರದಿ ತಿಳಿಸಿದೆ.

2019ರಲ್ಲಿ ಅನಿತಾ ಆನಂದ್‌ ಮೊದಲ ಬಾರಿಗೆ ಓಕ್‌ ವಿಲ್ಲೆಯಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ರಾಷ್ಟ್ರೀಯ ಭದ್ರತೆಯ ಖಚಾಂಚಿ ಮಂಡಳಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು. 2024ರ ಸೆಪ್ಟೆಂಬರ್‌ ನಲ್ಲಿ ಸಾರಿಗೆ ಸಚಿವರಾಗಿ ಅನಿತಾ ಅವರನ್ನು ಆಯ್ಕೆ ಮಾಡಲಾಗಿತ್ತು.

ಮೆಲೈನ್‌ ಜೋಲಿ:

ಮೆಲೈನಾ ಜೋಲಿ ಟ್ರುಡೋ ಸರ್ಕಾರದಲ್ಲಿ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದರು. ಅಷ್ಟೆ ಅಲ್ಲ ಕೆನಡಾ ರಾಜಕಾರಣದಲ್ಲೂ ಪ್ರಭಾವಶಾಲಿಯಾಗಿದ್ದು, 2021ರಲ್ಲಿ ಮೆಲೈನಾ ಅವರನ್ನು ವಿದೇಶಾಂಗ ಸಚಿವರನ್ನಾಗಿ ನಿಯೋಜಿಸಲಾಗಿತ್ತು. ಇದಕ್ಕೂ ಮೊದಲು ಸಂಪುಟದಲ್ಲಿ ವಿವಿಧ ಸಚಿವ ಸಚಿವ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದರು.

ಮೆಲೈನಾ (45ವರ್ಷ) ಆಕ್ಸ್‌ ಫರ್ಡ್‌ ಯೂನಿರ್ವಸಿಟಿ ಪದವೀಧರೆ. ರಷ್ಯಾ ಮತ್ತು ಉಕ್ರೈನ್‌ ಯುದ್ಧದ ವೇಳೆ ಮೆಲೈನಾ ಹಲವು ಬಾರಿ ಉಕ್ರೈನ್‌ ಗೆ ಭೇಟಿ ನೀಡಿ ಕೆನಡಾದ ಬೆಂಬಲ ವ್ಯಕ್ತಪಡಿಸಿದ್ದರು.

ಮಾರ್ಕ್‌ ಕಾರ್ನೆ:

59 ವರ್ಷದ ಹಾರ್ವರ್ಡ್‌ ಪದವೀಧರ ಮಾರ್ಕ್‌ ಕಾರ್ನೆ ಅವರು ಈವರೆಗೂ ರಾಜಕೀಯ ಪ್ರವೇಶಿಸಿದವರಲ್ಲ. ಆದರೆ ಇಕಾನಾಮಿಕ್ಸ್‌ ನಲ್ಲಿ ಪಾಂಡಿತ್ಯ ಪಡೆದಿರುವ ಮಾರ್ಕ್‌ ಬ್ಯಾಂಕ್‌ ಆಫ್‌ ಕೆನಡಾ ಮತ್ತು ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ನಲ್ಲಿ ಸೇವೆ ಸಲ್ಲಿಸಿದ್ದು, ಈಗ ಕೆನಡಾ ಪ್ರಧಾನಿ ಹುದ್ದೆಯ ರೇಸ್‌ ನಲ್ಲಿ ಇವರ ಹೆಸರು ಕೇಳಿಬರುತ್ತಿದೆ.

ಫ್ರಾಂಕೋಯಿಸ್‌ ಫಿಲಿಪ್ಪ್:‌

ಫ್ರಾಂಕೋಯಿಸ್‌ ಫಿಲಿಪ್ಪ್‌ ಅವರು ಹಾಲಿ ಸರ್ಕಾರದಲ್ಲಿ ವಿಜ್ಞಾನ ಮತ್ತು ಕೈಗಾರಿಕಾ ಸಚಿವರಾಗಿದ್ದರು. 2015ರಲ್ಲಿ ಫ್ರಾಂಕೋಯಿಸ್‌ ಚುನಾವಣೆಯಲ್ಲಿ ಮೊದಲ ಬಾರಿ ಗೆಲುವು ಸಾಧಿಸಿದ್ದರು. ಈ ಮೊದಲು ಅವರು ಅಂತಾರಾಷ್ಟ್ರೀಯ ವಹಿವಾಟು ಮತ್ತು ವಿದೇಶಾಂಗ ವ್ಯವಹಾರಗಳ ಕ್ಯಾಬಿನೆಟ್‌ ಹುದ್ದೆ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next