Advertisement

ಜೂ. ನ್ಯಾಶನಲ್‌ ಆ್ಯತ್ಲೆಟಿಕ್ಸ್‌ : ಉಡುಪಿಯ ಡ್ರಮ್ಮರ್‌ ಅಭಿನ್‌ ಸ್ವರ್ಣ ಸಂಭ್ರಮ

11:25 PM Feb 11, 2021 | Team Udayavani |

ಉಡುಪಿ: ಅಸ್ಸಾಮ್‌ನ ಗುವಾಹಟಿಯಲ್ಲಿ ನಡೆದ ಅಂಡರ್‌-20 ನ್ಯಾಶನಲ್‌ ಆ್ಯತ್ಲೆಟಿಕ್ಸ್‌ ಕೂಟದ 200 ಮೀ. ರೇಸ್‌ನಲ್ಲಿ ಉಡುಪಿಯ ಡ್ರಮ್ಮರ್‌, ಯುವ ಓಟಗಾರ ಅಭಿನ್‌ ಭಾಸ್ಕರ್‌ ದೇವಾಡಿಗ ಚಿನ್ನದ ಪದಕ ಗೆದ್ದು ಕ್ರೀಡಾಪ್ರೇಮಿಗಳಲ್ಲಿ ಸಂಭ್ರಮ ಮೂಡಿಸಿದ್ದಾರೆ. ಅವರು ಈ ದೂರವನ್ನು 21.34 ಸೆಕೆಂಡ್ಸ್‌ನಲ್ಲಿ ತಲುಪಿದರು.

Advertisement

ಚಿನ್ನದ ನಿರೀಕ್ಷೆ ಇತ್ತು
ಈ ಸಂದರ್ಭದಲ್ಲಿ “ಉದಯವಾಣಿ’ಯೊಂದಿಗೆ ಮಾತಾಡಿದ ಅಭಿನ್‌, “ಭೋಪಾಲ್‌ನ ಜೂನಿಯರ್‌ ಫೆಡರೇಶನ್‌ ಕೂಟದಲ್ಲಿ ಚಿನ್ನ ಹಾಗೂ ಬೆಳ್ಳಿ ಜಯಿಸಿದ್ದೆ. ಹೀಗಾಗಿ ಗುವಾಹಾಟಿಯಲ್ಲಿ ಚಿನ್ನದ ನಿರೀಕ್ಷೆ ಇತ್ತು. ಆದರೆ ಚಿನ್ನದ ಹೊರತಾಗಿಯೂ ಈ ಗೆಲುವು ಅಷ್ಟೇನೂ ಸಮಾಧಾನ ಕೊಟ್ಟಿಲ್ಲ. ಇನ್ನೂ ಬೇಗನೇ ಓಟವನ್ನು ಪೂರೈಸುವ ಗುರಿ ನನ್ನದಾಗಿತ್ತು’ ಎಂದರು.

ನೈರೋಬಿಗೆ ತೇರ್ಗಡೆ; ಆದರೆ…
ಗುವಾಹಟಿ ಸಾಧನೆಯಿಂದ ಕೀನ್ಯಾದ ನೈರೋಬಿಯಲ್ಲಿ ನಡೆಯಲಿರುವ ಅಂಡರ್‌-20 ವಿಶ್ವ ಕೂಟದಲ್ಲಿ ಪಾಲ್ಗೊಳ್ಳುವ ಅರ್ಹತಾ ಮಾನದಂಡದಲ್ಲಿ (21.38 ಸೆ.)

ಅಭಿನ್‌ ತೇರ್ಗಡೆಯಾಗಿದ್ದಾರೆ. ಆದರೆ ಈ ಕೂಟ ಜೂನ್‌ ತಿಂಗಳ ಒಳಗೆ ನಡೆದರಷ್ಟೇ ಅಭಿನ್‌ ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಇಲ್ಲವಾದರೆ ಅವರ ವಯಸ್ಸು ಇಪ್ಪತ್ತರ ಗಡಿ ದಾಟುತ್ತದೆ.

ಇದನ್ನೂ ಓದಿ:ಪಾರ್ಕಿಂಗ್‌ ಜಾಗ ಅತಿಕ್ರಮಿಸಿದರೆ ಟ್ರೇಡ್‌ ಲೈಸನ್ಸ್‌ ರದ್ದು : ಜಿಲ್ಲಾಧಿಕಾರಿ ಸೂಚನೆ

Advertisement

“ಚೀನದಲ್ಲಿ ನಡೆಯಲಿರುವ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್‌ನಲ್ಲಿ ಭಾಗವಹಿಸುವುದು ನನ್ನ ಗುರಿ. ಇದಕ್ಕಾಗಿ ಭುವನೇಶ್ವರದಲ್ಲಿ ಟ್ರಯಲ್ಸ್‌ ನಡೆಯಲಿದೆ’ ಎಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಸೆಕೆಂಡ್‌ ಬಿ.ಕಾಂ ಓದುತ್ತಿರುವ ಅಭಿನ್‌ ಹೇಳಿದರು. ಕೋಚ್‌ ಜಾಹೀರ್‌ ಅಬ್ಟಾಸ್‌ ಅವರ ಮಾರ್ಗದರ್ಶನ ಅಭಿನ್‌ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.

“ಕ್ರೀಡಾ ಪ್ರತಿಭೆಗಳನ್ನು ಗುರುತಿಸುವವರು ಬೇಕು’
“ನಮ್ಮಂಥ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವವರು ಬೇಕು’ ಎಂದು ಅಭಿನ್‌ ಸಂದರ್ಶನದ ವೇಳೆ ಹೇಳಿದರು.
ಆಟೋಮೊಬೈಲ್ಸ್‌ ನಡೆಸುತ್ತಿರುವ ತಂದೆ ಭಾಸ್ಕರ ದೇವಾಡಿಗ ಅವರೇ ಆರ್ಥಿಕ ಬೆನ್ನೆಲುಬಾಗಿ ನಿಂತಿದ್ದಾರೆ. ಉಳಿದಂತೆ ಬಿಡುವಿನ ವೇಳೆ ಸಂಗೀತ ಕಾರ್ಯಕ್ರಮಗಳಲ್ಲಿ ಡ್ರಮ್ಸ್‌ ಬಾರಿಸುವ ಮೂಲಕ ಒಟ್ಟುಗೂಡಿಸಿದ ಹಣವನ್ನು ಅಭಿನ್‌ ತಮ್ಮ ಕ್ರೀಡಾ ಚಟುವಟಿಕೆಗೆ ಬಳಸಿಕೊಳ್ಳುತ್ತಿದ್ದಾರೆ.

ಸಾಮಾನ್ಯವಾಗಿ ಆ್ಯತ್ಲೆಟಿಕ್ಸ್‌ ವಿಜೇತರಿಗೆ ಪದಕ ಹೊರತುಪಡಿಸಿದರೆ ನಗದು ಮೊತ್ತ ನೀಡಲಾಗುವುದಿಲ್ಲ. ಕ್ರೀಡಾ ಸ್ಕಾಲರ್‌ಶಿಪ್‌ ಲಭಿಸಿದರೆ ಅದು ಅವರ ಅದೃಷ್ಟ!

Advertisement

Udayavani is now on Telegram. Click here to join our channel and stay updated with the latest news.

Next