Advertisement
ಚಿಕ್ಕವರಿದ್ದಾಗ ಜೂನ್ ಎಂದರೆ ಸಾಕು; ಅಂಗಡಿಯಿಂದ ಹೊಸ ಹೊಸ ಪುಸ್ತಕಗಳನ್ನು ಖರೀದಿಸುವ, ಸೀನಿಯರ್‌ಗಳಿಂದ ಪುಸ್ತಕಗಳನ್ನು ಅರ್ಧ ರೇಟಿಗೆ ಕೊಳ್ಳುವ ಸಂಭ್ರಮ. ಈಗಿನ ಹಾಗೆ ಉಚಿತ ಪುಸ್ತಕ ಕೊಡುವ ಕಾಲವಾಗಿರಲಿಲ್ಲ ಅದು. ಹಾಗೆ ತಂದ ಪುಸ್ತಕಗಳನ್ನು ರಿಪೇರಿ ಮಾಡಿಕೊಂಡು ಬೈಂಡ್ ಹಾಕಿ, ಲೇಬಲ್ ಅಂಟಿಸಿ, ನಮ್ಮ ಹೆಸರನ್ನು ಅದರ ಮೇಲೆ ಬರೆದ ಮೇಲೆಯೇ ಸಮಾಧಾನ. ಅದರಲ್ಲೂ ಎಂಥ ಬೈಂಡ್ ಹಾಕಬೇಕು, ಯಾವ ರೀತಿ ಫೋಲ್ಡ್ ಮಾಡಬೇಕು ಎನ್ನುವ ತಲೆಬಿಸಿ ಬೇರೆ.
Related Articles
Advertisement
ಕತ್ತೆಯಂತೆ ಭಾರ ಹೊತ್ತು, ಅವ್ಯಕ್ತ ಭಯ- ಕಳವಳದಿಂದ ಶಾಲೆಗೆ ಹೋಗುತ್ತದೆ. ಅಲ್ಲಿನ ಅತಿಯಾದ ಶಿಸ್ತು, ಪಠ್ಯಕ್ರಮದ ಹೊರೆ, ಶಿಕ್ಷಕರ ಭಯ… ಯಾವುದು ಮಗುವನ್ನು ಹೆಚ್ಚು ಹೆದರಿಸುತ್ತದೆ ಎಂದು ಹೇಗೆ ಹೇಳುವುದು? ಎಲ್ಲಕ್ಕಿಂತ ಹೆಚ್ಚಾಗಿ, ಅಲ್ಲಿ ಮಗುವಿನ ಸ್ವತ್ಛಂದತೆಗೆ ಆಸ್ಪದವೇ ಇಲ್ಲ. ಎಲ್ಲ ಗೊತ್ತಿದ್ದೂ ನಾವು ಮಕ್ಕಳನ್ನು, ರೇಸಿನಲ್ಲಿ ಕುದುರೆಯನ್ನು ನಿಲ್ಲಿಸುವಂತೆ ಒಯ್ದು ನಿಲ್ಲಿಸುತ್ತೇವೆ. ನಮ್ಮ ಮಗುವೇ ಮೊದಲಿಗನಾಗಬೇಕೆಂದು ಆಶಿಸುತ್ತೇವೆ.
ಆನ್‌ಲೈನ್‌ನ ಹೆಸರಿನಲ್ಲಿ…: ಇವೆಲ್ಲ ವೈರುಧ್ಯಗಳ ಕುರಿತು ಯೋಚಿಸುತ್ತಾ, ಪರಿಹಾರದ ಬಗ್ಗೆ ಚಿಂತಿಸುತ್ತಿರುವಾಗ, ಕೊರೊನಾ ಬಂದು ಅಪ್ಪಳಿಸಿದೆ. ರಜೆ ಮುಗಿಯುತ್ತಾ ಬಂದರೂ, ಮುಂದೇನು ಮಾಡಬೇಕೆಂದು ಯಾರಿಗೂ ತಿಳಿಯುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ, ನಮ್ಮನ್ನು ನಾವು ಮನೆಯಲ್ಲಿಯೇ ಬಂಧಿಸಿಕೊಳ್ಳದೆ ವಿಧಿ ಇಲ್ಲ. ಆದರೆ, ಎಂತಹ ಪರಿಸ್ಥಿತಿಯಲ್ಲಿಯೂ ಮಗುವಿನ ಶಿಕ್ಷಣ ನಿಲ್ಲಬಾರದು.
ಅದಕ್ಕಾಗಿ ಅಂತರ್ಜಾಲದ ಮೊರೆ ಹೋಗಿದ್ದೇವೆ. ಅಂತೆಯೇ ಆನ್‌ಲೈನ್ ತರಗತಿಗಳತ್ತ ಶಾಲೆಗಳು ಮುಖಮಾಡಿವೆ. ಆದರೆ, ಪ್ರಿಕೆಜಿ, ಎಲ್‌ಕೆಜಿ, ಯುಕೆಜಿಗಳಿಗೂ ಆನ್‌ಲೈನ್ ತರಗತಿ ಮಾಡುತ್ತೇವೆ ಅಂದಾಗ ಮಾತ್ರ ಎಲ್ಲ ದಿಗ್ಭ್ರಾಂತರಾದರು. ಆ ಪುಟ್ಟ ಮಕ್ಕಳಿಗೆ ಆನ್‌ಲೈನ್ ಪಾಠ ಅಗತ್ಯವಾ? ಎಲ್‌ಕೆಜಿಯ ಮಕ್ಕಳು ಆನ್‌ಲೈನ್ ಮೂಲಕ ಕಲಿಯಲು ಸಾಧ್ಯವಾ? ಇಂಥ ಪ್ರಶ್ನೆಗಳು ಹತ್ತು ಕಡೆಯಿಂದ ಕೇಳಿಬಂ ದವು. ಈಗಲೂ ಆ ವಿಷಯವಾಗಿ ಪರ- ವಿರೋಧದ ಮಾತುಗಳು ನಡೆದೇ ಇವೆ.
ವಿಡಿಯೋದ ಮಾತು ಪಾಠವಾ?: ಇದರಿಂದಾಗಿ, ಜೂನ್ ತಿಂಗಳ ಸಂಭ್ರಮವನ್ನು ಮಗು ಕಳೆದುಕೊಂಡಿದೆ. ಆದರೆ, ಕೊರೊನಾ ಕಾರಣದಿಂದ ಸಿಕ್ಕ ದೀರ್ಘ ರಜೆಯನ್ನು ಮಕ್ಕಳು ಖುಷಿಯಾಗಿ ಅನುಭವಿಸುತ್ತಿದ್ದಾರೆ. ತರಗತಿಯಲ್ಲದ ತರಗತಿಯಲ್ಲಿ ಅವರನ್ನು ಕೂರಿಸಿ ಓದು ಎನ್ನುತ್ತಿರುವುದರಿಂದ ಅವರಿಗೂ ಅಯೋಮಯವಾಗಿದೆ. ಮನೆ ಎಂದರೆ ಎಂಥದೋ ನೆಮ್ಮದಿ ಎಂದುಕೊಳ್ಳುತ್ತಿದ್ದವರು, ಮನೆಯೂ ಶಾಲೆಯಾದದ್ದನ್ನು ಕಂಡು ಹೌಹಾರುತ್ತಿದ್ದಾರೆ. ಈಗೇನಿದ್ದರೂ, ನಿಗದಿಪಡಿಸಿದ ಸಮಯದಲ್ಲಿ ಪಾಠ ಕೇಳುವುದು. ಉಳಿದ ಸಮಯದಲ್ಲಿ ಅಭ್ಯಾಸ ಮತ್ತು ಆಟ.
ನಾಲ್ಕು ಜನ ಒಟ್ಟಾಗಿ ಆಟಕ್ಕಾಗಿ ಬೀದಿಗಿಳಿಯುವಂತಿಲ್ಲ! ಆಟವೆಂದರೆ ಮೊಬೈಲ್ ಗೇಮ್ ಅಷ್ಟೇ. ಸ್ನೇಹಿತರಿಲ್ಲದೇ ಅದೂ ಒಂದು ಆಟವಾ? ಶಾಲೆಯಲ್ಲಿ ಗುರುಗಳಿಂದ ನೇರವಾಗಿ ಕಲಿಯುತ್ತಿದ್ದವರು, ಈಗ ವಿಡಿಯೋ ಮೂಲಕ ಕೇಳಿದ್ದನ್ನು ಹೇಗೆ ಪಾಠವೆಂದುಕೊಳ್ಳಬೇಕು? ಇಂತಹ ಪ್ರಶ್ನೆಗಳಿಗೆ ಉತ್ತರವಂತೂ ಯಾರಲ್ಲೂ ಇಲ್ಲ. ಇವೆಲ್ಲ ಇನ್ನಷ್ಟೇ ಅಭ್ಯಾಸವಾಗ ಬೇಕಿದೆ ಮಕ್ಕಳಿಗೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಜೂನ್ ಅಡಿಯಿಟ್ಟಿದೆ; ತಣ್ಣಗೆ ಯಾವ ಸಂಭ್ರಮವ ನ್ನೂ ಹೊತ್ತು ತರದೆ…
* ಆಶಾ ಜಗದೀಶ್