ತಂದೆ ಒಂದು ಆಲದ ಮರವಿದ್ದಂತೆ, ತಂದೆಯೊಬ್ಬ ಮನೆಯೊಳಗಿದ್ದರೆ ಮನೆಯವರೆಲ್ಲರಿಗೂ ಒಂದು ಸುರಕ್ಷತೆಯ ಭಾವನೆ ಬರುತ್ತದೆ. ನನ್ನ ತಂದೆ ತುಂಬಾ ಕಟ್ಟುನಿಟ್ಟಿನ ಮನುಷ್ಯ, ಕೋಪ ಜಾಸ್ತಿ ಮಕ್ಕಳು ಓದಿನಲ್ಲಿ ಮುಂದಿರಬೇಕೆಂಬುದು ಅವರ ನಿಲುವು. ಯಾವಾಗಲೂ ಕೈಯಲ್ಲಿ ಪುಸ್ತಕವಿರಬೇಕು ಸಮಯಕ್ಕೆ ಸರಿಯಾಗಿ ಎಲ್ಲ ಕೆಲಸಗಳೂ ನಡೆಯಬೇಕು.
ಬೆಳಗ್ಗೆ ಆರು ಗಂಟೆಯೊಳಗೆ ಎದ್ದಿರಬೇಕು ಸ್ವಚ್ಚವಾಗಿ ಹಲ್ಲುಜ್ಜಿ ಸ್ನಾನ ಮಾಡಿ ನಂತರ ತಿಂಡಿ, ಮಧ್ಯಾಹ್ನ 1.30 ಕ್ಕೆ ರಾತ್ರಿ 9 ಗಂಟೆಗೆ ಊಟ, ಇದು ದಿನನಿತ್ಯದ ಕ್ರಮ ಇದರಲ್ಲಿ ಯಾವುದೇ ವ್ಯತ್ಯಾಸವಾಗಬಾರದು. ನಮ್ಮ ಅಣ್ಣ ನನ್ನ ಅಜ್ಜನ ಮನೆಯಲ್ಲಿ ಓದುತ್ತಿದ್ದನು ಇಲ್ಲಿ ನಾನು ಅಕ್ಕ ತಮ್ಮ ಮೂರು ಜನ, ನಾವು ಮೂವರು ದೀಪ ಹಚ್ಚುವ ವೇಳೆಗೆ ಮನೆಯಲ್ಲಿ ಇರಬೇಕು ನಂತರ ಓದೋದಕ್ಕೆ ಶುರು ಮಾಡಬೇಕು ಟಿವಿ ಬಂದ ಕಾಲ ಅದು, ನಮ್ಮ ಮನೆಯಲ್ಲಿ ಟಿವಿ ಇರಲಿಲ್ಲ ಪಕ್ಕದ ಮನೆಯಲ್ಲಿ ಇತ್ತು, ಒಂದು ದಿನ ಟಿವಿಯಲ್ಲಿ ಸಿನಿಮಾ ಬರುತ್ತಿತ್ತು ಸರಿ ಸ್ನೇಹಿತರ ಬಲವಂತದಿಂದ ನೋಡುವುದಕ್ಕೆ ಅಲ್ಲಿ ಕುಳಿತೆವು.
ನಮ್ಮ ಮೂವರ ಕಣ್ಣು ಗಡಿಯಾರದ ಮೇಲೆಯೇ ಇತ್ತು ಯಾಕೆಂದರೆ ಆರೂ ಮೂವತ್ತರ ಒಳಗೆ ಮನೆಯಲ್ಲಿರಬೇಕು ನೋಡುತ್ತ ನೋಡುತ್ತ ಸಮಯ ಜಾರುತ್ತಿತ್ತು ಸಿನಿಮಾವನ್ನು ಬಿಟ್ಟು ಹೋಗಲು ಮನಸ್ಸಿಲ್ಲ ಹೇಗೋ ಮೂರು ಜನ ಇದ್ದೇವೆ ಏನೂ ಮಾಡುವುದಿಲ್ಲ ಎಂಬ ಧೈರ್ಯದಿಂದ ನೋಡುವುದನ್ನು ಮುಂದುವರೆಸಿದೆವು ಒಮ್ಮೆ ಗಡಿಯಾರ ನೋಡಿದರೆ ಸಮಯ ಒಂಭತ್ತು ತೋರಿಸುತ್ತಿತ್ತು ಗಾಬರಿಗೊಂಡು ಮನೆಗೆ ಹೋದೆವು ಬಾಗಿಲು ಮುಚ್ಚಿತ್ತು.
ಭಯದಿಂದ ಬಾಗಿಲು ತಟ್ಟಿದೆವು ಜೋರು ಸ್ವರದಲ್ಲಿ ತಂದೆ ಗುಡುಗಿದರು ಎಷ್ಟು ಟೈಮ್ ಈಗ? ಮನೆಗೆ ಬರುವ ಸಮಯವೇ? ಒಳಗೆ ಬರಕೂಡದು ಎಂದರು, ನಿಂತ ನೆಲವೇ ಕುಸಿದಂತಾಯಿತು ಒಳಗಡೆ ಇದ್ದ ಅಮ್ಮನೂ ಹೇಳಿ ನೋಡಿದರೆ ಯಾವುದಕ್ಕೂ ಜಗ್ಗಲಿಲ್ಲ ಕೊನೆಗೆ ಸೋತು ಪಕ್ಕದಲ್ಲಿದ್ದ ನನ್ನ ಸಂಬಂಧಿಯೊಬ್ಬರ ಮನೆಯಲ್ಲಿ ಕೂತೆವು. ಸುಮಾರು ಹನ್ನೆರಡು ಮೂವತ್ತರ ವೇಳೆಗೆ ತಂದೆ ಬಾಗಿಲು ತೆಗೆದರು ಇವತ್ತೇ ಕೊನೆ ಇನ್ನೆಂದಿಗೂ ಇಂಥ ಘಟನೆ ನಡೆಯಕೂಡದು ಎಂದು ಹೇಳಿದರು ಆಯಿತು ಅಂತ ತಲೆ ತಗ್ಗಿಸಿಕೊಂಡು ಒಳಗೆ ನಡೆದೆವು.
ಆ ಸಮಯದಲ್ಲಿ ಅವರ ವರ್ತನೆ ನೋಡಿ ನನಗೆ ಕೋಪ ಬಂದಿತ್ತು. ಛೆ ಏನು ಅಂಥ ತಪ್ಪು ಮಾಡಿದ್ದು ಅಂತ ಆದರೆ ಈಗ ನನಗೆ ಅನ್ನಿಸುತ್ತದೆ, ಹೌದು ಹೆಣ್ಣುಮಕ್ಕಳು ಕತ್ತಲು ಆಗುವ ಮುಂಚೆ ಮನೆ ಸೇರಿಕೊಳ್ಳಬೇಕೆಂಬ ಅವರ ದೂರಾಲೋಚನೆ ಸರಿ ಇತ್ತೆಂದು. ಸಮಯದ ಮಹತ್ವ, ಮನುಷ್ಯನಿಗೆ ಶಿಸ್ತು ಎಷ್ಟು ಮುಖ್ಯ ಅಂತ ನನಗೆ ಈಗ ಅದರ ಅರಿವಾಗುತ್ತಿದೆ. ಈಗ ಅವರು ನಮ್ಮೊಂದಿಗೆ ಇಲ್ಲದಿರಬಹುದು, ಆದರೆ ಅವರು ಕಲಿಸಿದ ಶಿಸ್ತಿನ ಪಾಠಗಳು ಸದಾಕಾಲ ನಮ್ಮ ಜೊತೆಗಿರುತ್ತವೆ.
ಗೀತಾ ವಿ.