ಬೆಂಗಳೂರು: ರಾಜ್ಯದ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಆಡಳಿತ ಮಂಡಳಿ ಕೋಟಾದ ಸೀಟುಗಳ ಪ್ರವೇಶಕ್ಕೆ ಕರ್ನಾಟಕ ವೃತ್ತಿಪರ ಕಾಲೇಜುಗಳ ಒಕ್ಕೂಟ (ಕಾಮೆಡ್-ಕೆ) ಜೂ. 19ಕ್ಕೆ “ಯುಜಿಇಟಿ-2022′ ಪರೀಕ್ಷೆ ನಡೆಸಲಿದೆ.
ದೇಶಾದ್ಯಂತ 154 ನಗರಗಳ 230 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಜೂ. 19ರಂದು ಬೆಳಗ್ಗೆ 9ರಿಂದ 12 ಮತ್ತು ಮಧ್ಯಾಹ್ನ 2.30ರಿಂದ 5.30ರ ವರೆಗೆ ಪರೀಕ್ಷೆ ನಡೆಯಲಿದೆ. ದೇಶಾದ್ಯಂತ 61,635 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ 66 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದರು.
ನೋಂದಾಯಿತ ಅಭ್ಯರ್ಥಿಗಳು ಪರೀಕ್ಷಾ ಪ್ರವೇಶ ಪತ್ರಗಳನ್ನು ಕಾಮೆಡ್-ಕೆ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಪ್ರವೇಶ ಪತ್ರದ ಜತೆಗೆ ಮಾನ್ಯತೆ ಹೊಂದಿರುವ ಗುರುತಿನ ಚೀಟಿ, ಪಾಸ್‌ಪೋರ್ಟ್ ಅಳತೆಯೆ ಎರಡು ಕಲರ್ ಫೋಟೋವನ್ನು ತರಬೇಕು.
ಕೋವಿಡ್ ಮಾರ್ಗಸೂಚಿ ಅನುಸರಿಸುವಂತೆ ಸೂಚಿಸಲಾಗಿದೆ. ಮಾಸ್ಕ್, ಗ್ಲೌಸ್, ಪಾರದರ್ಶಕ ನೀರಿನ ಬಾಟಲ್, ಸ್ಯಾನಿಟೈಸರ್ ಹಾಗೂ ಪರೀಕ್ಷಾ ಪರಿಕರಗಳನ್ನು ಕೊಂಡೊಯ್ಯಲು ಅವಕಾಶ ನೀಡಿದೆ. ಇನ್ನು ವಸ್ತ್ರ ಸಂಹಿತೆ ಕುರಿತು ಆಯಾ ರಾಜ್ಯ ಸರಕಾರ ನಿರ್ಧರಿಸುವ ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ. ರಾಜ್ಯದಲ್ಲಿ ನೀಟ್, ಸಿಇಟಿ ಮಾದರಿಯಲ್ಲೇ ಪರೀಕ್ಷೆ ನಡೆಯಲಿದೆ.
ತಲೆ, ಕಿವಿ ಮುಚ್ಚುವಂತಹ, ಪೂರ್ಣ ತೋಳಿನ ಉಡುಪು ಧರಿಸಿ ಬರುವುದನ್ನು ನಿಷೇಧಿಸಲಾಗಿದೆ ಎಂದು ಕಾಮೆಡ್-ಕೆ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಸ್. ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.