ಲಂಡನ್: ವಿಕಿಲೀಕ್ಸ್ ಸಂಸ್ಥಾಪಕ ಜ್ಯೂಲಿಯನ್ ಅಸ್ಸಾಂಜೆ ಆರೋಗ್ಯ ತೀವ್ರ ಹದಗೆಟ್ಟಿದ್ದು, ಬ್ರಿಟಿಷ್ ಜೈಲಿನಲ್ಲಿಯೇ ಸಾವನ್ನಪ್ಪುವ ಸಾಧ್ಯತೆ ಇದ್ದಿರುವುದಾಗಿ ಸುಮಾರು 60ಕ್ಕೂ ಅಧಿಕ ವೈದ್ಯರು ಬರೆದಿರುವ ಬಹಿರಂಗ ಪತ್ರ ಸೋಮವಾರ ವರದಿಯಾಗಿದೆ.
ಸೇನೆ ಹಾಗೂ ರಾಜತಾಂತ್ರಿಕಕ್ಕೆ ಸಂಬಂಧಪಟ್ಟ ರಹಸ್ಯ ಮಾಹಿತಿಯನ್ನು ಬಹಿರಂಗಗೊಳಿಸಿದ್ದ ಆರೋಪದ ಮೇಲೆ ಅಮೆರಿಕ ಬೇಹುಗಾರಿಕೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಒಂದು ವೇಳೆ ಬ್ರಿಟನ್ 48ವರ್ಷದ ಅಸ್ಸಾಂಜ್ ಅವರನ್ನು ಅಮೆರಿಕಕ್ಕೆ ಗಡಿಪಾರು ಮಾಡಿದರೆ, ಸುಮಾರು 175 ವರ್ಷಗಳ ಕಾರಾಗೃಹ (ಜೀವಾವಧಿ) ಶಿಕ್ಷೆಗೆ ಒಳಗಾಗಬಹುದು ಎಂದು ವರದಿ ವಿವರಿಸಿದೆ.
ಬ್ರಿಟನ್ ಗೃಹ ಕಾರ್ಯದರ್ಶಿ ಭಾರತೀಯ ಮೂಲದ ಪ್ರೀತಿ ಪಟೇಲ್ ಅವರಿಗೆ ವೈದ್ಯರು ಬರೆದಿರುವ ಪತ್ರದಲ್ಲಿ, ಆಗ್ನೇಯ ಲಂಡನ್ ನ ಬೆಲ್ಮಾರ್ಶ್ ಜೈಲಿನಲ್ಲಿರುವ ಜ್ಯೂಲಿಯನ್ ಅಸ್ಸಾಂಜೆ ನನ್ನು ಯೂನಿರ್ವಸಿಟಿ ಟೀಚಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಿಗಿ ಭದ್ರತೆಯ ಜೈಲಿನಲ್ಲಿ ಕೈದಿಯಾಗಿರುವ ಜೂಲಿಯನ್ ಅಸ್ಸಾಂಜೆ ನೀಡಲಾಗುತ್ತಿರುವ ಹಿಂಸೆ ಆತನ ಜೀವಕ್ಕೆ ಮಾರಕವಾಗಬಹುದು ಎಂದು ವಿಶ್ವಸಂಸ್ಥೆ ಸ್ವಾಯತ್ತೆಯ ಹಕ್ಕುಗಳ ತಜ್ಞರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಬಹಿರಂಗ ಪತ್ರ ಬರೆದಿದ್ದೇವೆ. ವೈದ್ಯರುಗಳಾಗಿ ನಾವು ನಮ್ಮ ಗಂಭೀರ ಕಳವಳವನ್ನು ವ್ಯಕ್ತಪಡಿಸಲೆಬೇಕಾಗಿದೆ. ಜ್ಯೂಲಿಯನ್ ಅಸ್ಸಾಂಜೆಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ನಮ್ಮ ಆತಂಕ ವ್ಯಕ್ತಪಡಿಸಿರುವುದಾಗಿ ವೈದ್ಯರು ಬರೆದಿರುವ 16 ಪುಟಗಳ ಬಹಿರಂಗ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ತಕ್ಷಣವೇ ವೈದ್ಯಕೀಯ ನೆರವು ನೀಡಬೇಕಾಗಿದೆ:
ಜ್ಯೂಲಿಯನ್ ಅಸ್ಸಾಂಜೆಯ ಗಡಿಪಾರು ಕುರಿತ ಪೂರ್ಣ ವಿಚಾರಣೆ ಫೆಬ್ರುವರಿಯಲ್ಲಿ ನಡೆಯಲಿದೆ. ಆದರೆ ಅಸ್ಸಾಂಜೆಯ ದೈಹಿಕ ಸ್ಥಿತಿ ತುಂಬಾ ಹದಗೆಟ್ಟಿದೆ. ಈ ನಿಟ್ಟಿನಲ್ಲಿ ಅಸ್ಸಾಂಜೆಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೆರವು ನೀಡಬೇಕಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.