Advertisement

ಜೂ. 2-4: ಕಾಳಿ ನದಿಯಲ್ಲಿ ಕಯಾಕಿಂಗ್‌ ಉತ್ಸವ: ಪ್ರಮೋದ್‌

10:35 AM Jun 01, 2017 | |

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಆಕಾಡೆಮಿಗಳ ಸಂಯುಕ್ತ ಆಶ್ರಯದಲ್ಲಿ ಜೂ. 2ರಿಂದ 4ರ ವರೆಗೆ ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲೂಕಿನ, ಅವೆಡಾ ಗ್ರಾಮದ ಕಾಳಿ ನದಿಯಲ್ಲಿ ಕಯಾಕಿಂಗ್‌ ಉತ್ಸವ, ಅಂತಾರಾಷ್ಟ್ರೀಯ ಜಲಕ್ರೀಡೆಯನ್ನು ಆಯೋಜಿಸಲಾಗಿದೆ ಎಂದು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.
 
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಕರಲ್ಲಿ ಸಾಹಸ ಪ್ರವೃತ್ತಿ ಬೆಳೆಸುವ ಹಾಗೂ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಆ ನಿಟ್ಟಿನಲ್ಲಿ ರಾಜ್ಯದ 10 ಕಡೆಗಳಲ್ಲಿ ಸಾಹಸ ಕ್ರೀಡೆಯನ್ನು ಆಯೋ ಜಿಸಲಾಗುತ್ತಿದೆ. 

Advertisement

ಉಡುಪಿಯಲ್ಲಿ ಸಾಹಸ ಹಬ್ಬ: ಡಿಸೆಂಬರ್‌ ತಿಂಗಳಲ್ಲಿ ಉಡುಪಿಯಲ್ಲಿ ಅಡ್ವೆಂಚರ್‌ ಫೆಸ್ಟಿವಲ್‌ ನಡೆಯಲಿದೆ.  ರಾಜ್ಯ ದಲ್ಲಿಯೇ ಮೊದಲ ಬಾರಿಗೆ ಕಾಳಿ ನದಿ ಯಲ್ಲಿ ಕಯಾಕಿಂಗ್‌ ಎನ್ನುವ ಜಲ ಕ್ರೀಡೆ ಆಯೋಜಿಸಲಾಗುತ್ತಿದೆ. ದೇಶದ 4ನೇ ಸ್ಥಳವಾಗಿದ್ದು, ಮೇಘಾಲಯ, ಕೇರಳದ ಮಲಬಾರ್‌ ಹಾಗೂ ಗಂಗಾನದಿಯಲ್ಲಿ ಈ ಕ್ರೀಡೆಗಳು ನಡೆಯುತ್ತಿವೆ ಎಂದರು. 

ನದಿಯ ಡ್ಯಾಂನಿಂದ ಹರಿವು ನಿಯಂತ್ರಣದಲ್ಲಿರುವುದು ಹಾಗೂ 10 ಕಿ.ಮೀ. ಉದ್ದವಾಗಿರುವುದರಿಂದ ಕಾಳಿ ನದಿ ಕಯಾಕಿಂಗ್‌ ಜಲಕ್ರೀಡೆಗೆ ಸೂಕ್ತವಾಗಿದೆ. ಸ್ಪರ್ಧೆಗಳನ್ನು 3 ವಿಭಾಗದಲ್ಲಿ ವಿಂಗಡಿ ಸಲಾಗಿದ್ದು, ವೃತ್ತಿಪರರು, ಕಲಿಕಾ ಸ್ಪರ್ಧಿ, ಮಧ್ಯಕಾಲಿಕ ಸ್ಪರ್ಧಿಗಳಿಗೆ ಆಯೋಜಿಸಲಾಗಿದ್ದು, 500 ರೂ. ಪ್ರವೇಶ ಶುಲ್ಕ ಪಾವತಿಸಬೇಕು ಎಂದರು. ಬಡವರಿಗೆ ಉಚಿತ ಪ್ರವೇಶ ನೀಡಲಾಗುವುದು. ಈಗಾಗಲೇ ನ್ಯೂಜಿಲ್ಯಾಂಡ್‌, ನೇಪಾಲ, ಆಸ್ಟ್ರೇಲಿಯ, ಇಂಗ್ಲೆಂಡ್‌, ಅಮೆರಿಕದಿಂದ ವೃತ್ತಿಪರರೂ ಸಹಿತ ಒಟ್ಟು 126 ಮಂದಿ ನೋಂದಣಿ ಮಾಡಿದ್ದಾರೆ ಎಂದರು.
 
ಜೂ. 2ರ ಬೆಳಗ್ಗೆ 9.30ಕ್ಕೆ ಬೃಹತ್‌ ಮತ್ತು ಮಾಧ್ಯಮ ಕೈಗಾರಿಕೆ ಸಚಿವ ಆರ್‌.ವಿ. ದೇಶಪಾಂಡೆ ಕಾಳಿ ಕಯಾಕಿಂಗ್‌ ಉತ್ಸವಕ್ಕೆ ಚಾಲನೆ ನೀಡಲಿದ್ದು, ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌, ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ, ಕುಮಟಾ ಶಾಸಕಿ ಶಾರದಾ ಮೋದನ ಶೆಟ್ಟಿ, ಸಂಸದ ಅನಂತ್‌ ಕುಮಾರ್‌ ಹೆಗಡೆ ಪಾಲ್ಗೊಳ್ಳಲಿದ್ದಾರೆ ಎಂದು ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ನಿರ್ದೇಶಕ ಕೀರ್ತಿ ಪಯಾಸ್‌ ಹೇಳಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಶನ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

10 ಕಡೆಗಳಲ್ಲಿ ಸಾಹಸ ಕ್ರೀಡೆ  
ಆ. 4-5ಕ್ಕೆ ಬೆಂಗಳೂರು ಬೌಲ್ಡಿಂಗ್‌, ಆ. 26-27ಕ್ಕೆ ಚಿತ್ರದುರ್ಗದ ವಾಣಿ ವಿಲಾಸದಲ್ಲಿ ಸೈಲಿಂಗ್‌ ರೆಗ್ಗಾಟ, ಸೆ. 19-30ಕ್ಕೆ ಮೈಸೂರಿನಲ್ಲಿ ದಸರಾ ಸಾಹಸೋತ್ಸವ, ಅ. 27-29ಕ್ಕೆ ಬಾದಾಮಿ ರಾಕ್‌ ಫೆಸ್ಟಿವಲ್‌, ನವೆಂಬರ್‌ನಲ್ಲಿ ಚಿಕ್ಕ ಬಳ್ಳಾಪುರದಲ್ಲಿ ನಂದಿ ಅಡ್ವೆಂಚರ್‌ ಫೆಸ್ಟಿವಲ್‌, ಡಿ. 16-17ಕ್ಕೆ ಉಡುಪಿ ಅಡ್ವೆಂಚರ್‌ ಫೆಸ್ಟಿವಲ್‌, 2018ರ ಜ. 6-7ಕ್ಕೆ  ಯಾದ ಗಿರಿ ಅಡ್ವೆಂಚರ್‌, ಜ. 20- 21ಕ್ಕೆ ಚಿಕ್ಕಬಳ್ಳಾಪುರದಲ್ಲಿ ಅವಥಿ ಬೌಲ್ಡಿಂಗ್‌ ಫೆಸ್ಟಿವಲ್‌, ಫೆ. 9-10ಕ್ಕೆ ಏಶ್ಯಕಪ್‌ ನ್ಪೋರ್ಟ್‌ ಕ್ಲೈಂಬಿಂಗ್‌ ಸ್ಪರ್ಧೆ ನಡೆಯಲಿದೆ.
ಮಣ್ಣಪಳ್ಳ-ಮಲ್ಪೆಯಲ್ಲಿ ಸಾಹಸ ಕ್ರೀಡೆ: ಉಡುಪಿಯಲ್ಲೂ ಜಲ ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮಣಿಪಾಲದ ಮಣ್ಣಪಳ್ಳ ಕೆರೆಯಲ್ಲಿ ಇತರ ಸಾಹಸ ಕ್ರೀಡೆ ನಡೆಸಲು ಚಿಂತನೆ ನಡೆಸಲಾಗುವುದು. ಮಲ್ಪೆಯನ್ನು ಪ್ರವಾಸಿಗರ ಅನುಕೂಲಕ್ಕೆ ಬಳಕೆ ಮಾಡಿದರೆ, ಪಡುಕೆರೆ ಬೀಚ್‌ ಅನ್ನು ಕ್ಯಾಂಪ್ಸ್‌, ಸಾಹಸ ಕ್ರೀಡೆ ತರಬೇತಿಗಳಿಗೆ ಬಳಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next