Advertisement

ಕಾರ್ಮಿಕ ಇಲಾಖೆ ಸೌಲಭ್ಯ ಪತ್ರಕರ್ತರಿಗೂ ಸಿಗಲಿ: ಶಾಸಕ ತಿಪ್ಪಾ ರೆಡ್ಡಿ

03:57 PM May 16, 2022 | Team Udayavani |

ಚಿತ್ರದುರ್ಗ: ಕಾರ್ಮಿಕ ಇಲಾಖೆಯ ಸೌಲಭ್ಯ ಪತ್ರಕರ್ತರಿಗೂ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌ ಅವರ ಮೇಲೆ ಒತ್ತಡ ತರುತ್ತೇನೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಹೇಳಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಈಗಾಗಲೇ ಪತ್ರಿಕಾ ವಿತರಕರ ಹೆಸರನ್ನು ನೋಂದಾಯಿಸಲಾಗುತ್ತಿದೆ. ಕಾರ್ಮಿಕ ಕಾಯ್ದೆಯಡಿ ನೋಂದಣಿ ಆಗಿರುವ ಪತ್ರಕರ್ತರ ಸಂಘದ ಸದಸ್ಯರಿಗೂ ಅವಕಾಶ ಕಲ್ಪಿಸಬೇಕು. ಮಂಡಳಿಯ ಸೌಲಭ್ಯಗಳನ್ನು ಪತ್ರಕರ್ತರಿಗೂ ವಿಸ್ತರಿಸಬೇಕು ಎಂಬ ಬೇಡಿಕೆಯನ್ನು ಸಚಿವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರು ಮಂಡಿಸಲಾಗುವುದು ಎಂದು ತಿಳಿಸಿದರು.

ಪತ್ರಕರ್ತರು ಜೀವನ ನಡೆಸುವುದು ಹಾಗೂ ಅವರ ಜೀವ ರಕ್ಷಣೆ ಕಷ್ಟಕರವಾಗಿದೆ. ಮಾಧ್ಯಮದವರ ಸಂಕಷ್ಟಗಳಿಗೆ ಸ್ಪಂದಿಸಲು ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ ಹಣ ಸಂಗ್ರಹಿಸಲು ಪಕ್ಷಾತೀತವಾಗಿ ಎಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಸ್ಪಂದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದ ಆಧುನೀಕರಣಕ್ಕಾಗಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ರಾಜ್ಯಸಭೆ ಹಾಗೂ ಸಂಸದರಿಂದ ಅನುದಾನ ಪಡೆಯಬೇಕು. ನಿವೇಶನ, ವಸತಿ ರಹಿತರಿಗೆ ವಸತಿ ಸೌಕರ್ಯ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕಾ ವೃತ್ತಿ ಶೋಕಿ ಅಲ್ಲ. ಬದ್ಧತೆ, ಪ್ರಾಮಾಣಿಕತೆ, ನಿಷ್ಠುರತೆ ಮತ್ತು ಸತ್ಯವನ್ನೇ ಹೇಳುವ ಧೈರ್ಯವಂತಿಕೆ ಬೇಕು. ಮಾಧ್ಯಮ ರಂಗದಲ್ಲಾಗುತ್ತಿರುವ ಬದಲಾವಣೆಗಳಿಂದಾಗಿ ಅನೇಕ ಸವಾಲುಗಳನ್ನು ಜಾಣ್ಮೆ ಮತ್ತು ಸ್ಥೆರ್ಯದಿಂದ ಎದುರಿಸಬೇಕಿದೆ. ಸಾಮಾಜಿಕ ಜಾಲ ತಾಣಗಳಿಂದಾಗಿ ಅತೀ ವೇಗವಾಗಿ ಹರಡುವ ಸುಳ್ಳು-ತಪ್ಪು ಮಾಹಿತಿಯಿಂದ ಕೂಡಿರುವ ಸುದ್ದಿಗಳೆಡೆ ಎಚ್ಚರ ವಹಿಸಬೇಕಿದೆ ಎಂದರು.

Advertisement

ಖ್ಯಾತ ಪತ್ರಕರ್ತರಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಡಾ| ಬಿ.ಆರ್. ಅಂಬೇಡ್ಕರ್‌ ಅವರ ಆದರ್ಶಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕಿದೆ. ಸಮಾಜ ಇವತ್ತಿಗೂ ಪತ್ರಕರ್ತರಲ್ಲಿ ನಂಬಿಕೆ ಇಟ್ಟಿದೆ. ಸುದ್ದಿ ಹೆಸರಲ್ಲಿ ಚಾರಿತ್ರ ವಧೆ ಸಲ್ಲದು. ಸುದ್ದಿ ವಿವೇಚನೆ ಹಾಗೂ ಸಮಷ್ಠಿ ದೃಷ್ಟಿಯಿಂದ ಕೂಡಿರಬೇಕು. ಒಳ್ಳೆಯ ಪತ್ರಕರ್ತ ಎಂದು ಕರೆಸಿಕೊಳ್ಳುವುದು ಪದ್ಮಶ್ರೀ ಪ್ರಶಸ್ತಿಗಿಂತ ಶ್ರೇಷ್ಠ ಎಂದು ತಿಳಿಸಿದರು. ಬ್ಲಾಕ್‌ಮೇಲ್‌ಗೆ ಕಡಿವಾಣ ಹಾಕಬೇಕಿದೆ. ಎಲ್ಲ ತಾಲೂಕುಗಳಲ್ಲೂ ಪತ್ರಿಕಾ ಭವನಗಳು ನಿರ್ಮಾಣವಾಗಬೇಕು. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್‌ ವಿತರಣೆ ಬೇಡಿಕೆ ಸರ್ಕಾರದ ಮುಂದಿದೆ. ಈಗಾಗಲೇ ಪತ್ರಕರ್ತರಿಗೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.

ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಚಾಲನೆ ನೀಡಿದ ಚಳ್ಳಕೆರೆ ಶಾಸಕ ಟಿ.ರಘಮೂರ್ತಿ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್‌ ಮಾತನಾಡಿದರು.

ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ದಿನೇಶ್‌ ಗೌಡಗೆರೆ, ಪ್ರಧಾನ ಕಾರ್ಯದರ್ಶಿ ಎಸ್‌.ಸಿದ್ದರಾಜು, ಖಜಾಂಜಿ ಡಿ.ಕುಮಾರಸ್ವಾಮಿ, ರಾಜ್ಯ ಸಮಿತಿ ಸದಸ್ಯ ಎಂ.ಯೋಗೇಶ್‌, ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ ನಾಕೀಕೆರೆ, ಸಿ.ಪಿ. ಮಾರುತಿ, ಡಿ.ಈಶ್ವರಪ್ಪ, ಕಾರ್ಯದರ್ಶಿಗಳಾದ ವಿ.ವೀರೇಶ್‌, ನಾಗರಾಜಕಟ್ಟೆ, ಜಿಲ್ಲಾ ಕಾರ್ಯಧಿಕಾರಿ ಸಮಿತಿ ಸದಸ್ಯರಾದ ಬಿ.ಎಸ್‌. ವಿನಾಯಕ, ಎಸ್‌.ಜೆ. ದ್ವಾರಕನಾಥ್‌, ಬಿ.ಆರ್.ನಾಗೇಶ್‌, ಒ.ರಾಮಸ್ವಾಮಿ, ಕೆ.ಎಂ. ಮುತ್ತುಸ್ವಾಮಿ, ಎಂ.ಹನೀಫ್, ಪಿ.ಅಂಜಿನಪ್ಪ, ಎಚ್‌.ತಿಪ್ಪೇಸ್ವಾಮಿ, ಎಂ.ರಾಜು, ನಾಗತಿಹಳ್ಳಿ ಮಂಜುನಾಥ್‌, ಜೆ.ತಿಮ್ಮಣ್ಣ, ಈರಣ್ಣ ಯಾದವ್‌, ಎನ್‌.ಮಾರುತಿ, ಬಿ.ಎಸ್‌. ಲಕ್ಷ್ಮಣ್‌, ಎಂ.ಎನ್. ಅಹೋಬಲಪತಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪತ್ರಕರ್ತ ರವಿ ಉ್ರಗಾಣ ಕಾರ್ಯಕ್ರಮ ನಿರ್ವಹಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next