Advertisement

ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿಗೆ ಮತ್ತೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

09:10 PM Sep 02, 2022 | Team Udayavani |

ಉಡುಪಿ: ನಾಲ್ಕು ವರ್ಷಗಳ ಹಿಂದೆ 21 ಶಾಲಾ ಬಾಲಕರಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪೋಕ್ಸೋ ಪ್ರಕರಣಗಳ ಆರೋಪಿ ಕುಂದಾಪುರದ ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ (40)ಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯವು ಮತ್ತೆ ಎರಡು ಪ್ರಕರಣಗಳಲ್ಲಿ 10 ವರ್ಷ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

Advertisement

2018ರ ಜೂನ್‌ ತಿಂಗಳಲ್ಲಿ 14 ವರ್ಷ ಪ್ರಾಯದ ಬಾಲಕನನ್ನು ಚಂದ್ರ ಹೆಮ್ಮಾಡಿ, ಜಲಪಾತದ ಫೋಟೋ ತೆಗೆಯಲು ಇದೆ ಎಂದು ಹೇಳಿ ಕಾಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಆರೋಪದಲ್ಲಿ ಚಂದ್ರ ಹೆಮ್ಮಾಡಿಯನ್ನು ಬೈಂದೂರು ಪೊಲೀಸರು 2018ರ ನ. 28ರಂದು ಬಂಧಿಸಿದ್ದರು. ಆಗಿನ ಬೈಂದೂರು ಪೊಲೀಸ್‌ ನಿರೀಕ್ಷಕ ಪರಮೇಶ್ವರ್‌ ಆರ್‌. ಗುನಗ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಒಟ್ಟು 21 ಸಾಕ್ಷಿಗಳ ಪೈಕಿ 14 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ನೊಂದ ಬಾಲಕರು ಮತ್ತು ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗೆ ನ್ಯಾಯಾಧೀಶ ಶ್ರೀನಿವಾಸ ಸುವರ್ಣ 10 ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಲೈಂಗಿಕ ಕಿರುಕುಳ ನೀಡಿರುವುದಕ್ಕೆ ಮೂರು ವರ್ಷ ಕಠಿನ ಶಿಕ್ಷೆ ಮತ್ತು ಒಂದು ಸಾವಿರ ರೂ. ದಂಡ ವಿಧಿಸಲಾಗಿದೆ. ಪ್ರಾಸಿಕ್ಯೂಶನ್‌ ಪರ ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.

ಸುದ್ದಿ ಸಂಬಂಧ ದಾರಿ ತೋರಿಸುವ ನೆಪದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕಾಡಿಗೆ ಕರೆದುಕೊಂಡು ಹೋಗುತ್ತಿದ್ದ ಚಂದ್ರ ಹೆಮ್ಮಾಡಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಒಟ್ಟು 21 ಬಾಲಕರು ನೀಡಿದ ದೂರಿನಂತೆ ಆರೋಪಿ ವಿರುದ್ಧ ಬೈಂದೂರು ಪೊಲೀಸ್‌ ಠಾಣೆಯಲ್ಲಿ 16, ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ 3 ಹಾಗೂ ಕುಂದಾಪುರ ಗ್ರಾಮಾಂತರ ಮತ್ತು ಕೊಲ್ಲೂರು ಪೊಲೀಸ್‌ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ಪೋಕ್ಸೋ ಕಾಯ್ದೆಯಡಿ ದಾಖಲಾಗಿತ್ತು.

ಆರೋಪಿ ಚಂದ್ರ ಹೆಮ್ಮಾಡಿ ವಿರುದ್ಧ ದಾಖಲಾದ ಒಟ್ಟು 21 ಪೋಕ್ಸೋ ಪ್ರಕರಣಗಳಲ್ಲಿ ಈವರೆಗೆ 11 ಪ್ರಕರಣಗಳಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಎಂಟು ಪ್ರಕರಣಗಳಲ್ಲಿ ಆರೋಪಿ ಸಾಕ್ಷ್ಯಗಳ ಕೊರತೆಯಿಂದ ಖುಲಾಸೆಗೊಂಡಿದ್ದಾನೆ. ಉಳಿದ ಎರಡು ಪ್ರಕರಣಗಳ ತೀರ್ಪು ಶೀಘ್ರದಲ್ಲಿ ಪ್ರಕಟಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next