ಈ ಹಿಂದೆ “ನಾನೊಂಥರ’ ಎಂಬ ಸಿನಿಮಾ ನಿರ್ಮಿಸಿದ್ದ ಡಾ.ಜಾಕ್ವೆಲಿನ್ ಫ್ರಾನ್ಸಿಸ್ ಈಗ ಮತ್ತೂಂದು ಹೊಸ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಜೆ.ಜೆ.ಮೂವೀಸ್ ನಡಿ ಈ ಬಾರಿ ತಮ್ಮ ಪುತ್ರನನ್ನು ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಲಾಂಚ್ ಮಾಡುತ್ತಿದ್ದಾರೆ. ಇನ್ನೂ ಹೆಸರಿಡದ ಚಿತ್ರದಲ್ಲಿ ಜಾಯ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಆರ್ಯನ್ ಈ ಸಿನಿಮಾದ ನಿರ್ದೇಶಕರು. ಇತ್ತೀಚೆಗೆ ಚಿತ್ರದ “ಜೊತೆಯಲೇ ಇರಲೇ..’ ಎಂಬ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ. ಹಾಡಿನಲ್ಲಿ ನಾಯಕ ಜಾಯ್ ಹಾಗೂ ನಾಯಕಿ ಸ್ನಿಗ್ದಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಹಾಡಿನ ಬಿಡುಗಡೆ ವೇಳೆ ಮಾತನಾಡಿದ ಆರ್ಯನ್, “ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಈ ಚಿತ್ರದ ಮೂಲಕ ಜಾಯ್ ಅವರನ್ನು ನಾಯಕನಾಗಿ ಪರಿಚಯಿಸುತ್ತಿದ್ದೇವೆ. ಅವರು ಆ್ಯಕ್ಷನ್, ಡ್ಯಾನ್ಸ್, ಆ್ಯಕ್ಟಿಂಗ್ ಎಲ್ಲಾ ಕಲಿತು ಫಿಟ್ ನೆಸ್‌ನೊಂದಿಗೆ ಬಂದಿದ್ದಾರೆ. ಇದೊಂದು ರೊಮ್ಯಾಂಟಿಕ್ ಯೂತ್‌ಫುಲ್ ಸಬ್ಜೆಕ್ಟ್ ಆಗಿದ್ದು, ವ್ಯಾಲೆಂಟೆನ್ಸ್ ಡೇ ಪ್ರಯುಕ್ತ ಈ ರೊಮ್ಯಾಂಟಿಕ್ ಸಾಂಗ್‌ನ್ನು ರಿಲೀಸ್ ಮಾಡುತ್ತಿದ್ದೇವೆ. ಗೌಸ್‌ಪೀರ್‌ಅವರು ಸಾಹಿತ್ಯ ಬರೆದಿರುವ ಈ ಹಾಡನ್ನು ರೋಣದ ಬಕ್ಕೇಶ್ ಅವರು ಅದ್ಭುತವಾಗಿ ಕಂಪೋಸ್ ಹರಿಚರಣ್ ಅವರು ಹಾಡಿದ್ದಾರೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಮಾರ್ಚ್ ಕೊನೆಯ ವಾರದಿಂದ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಆರಂಭಿಸುತ್ತಿದ್ದೇವೆ. ಗೋವಾ, ಶಿರಸಿ, ಹೊನ್ನಾವರ, ಗೋಕರ್ಣ ಸುತ್ತಮುತ್ತ ಚಿತ್ರೀಕರಣ ನಡೆಸಲಿದ್ದೇವೆ. ಡಿಸೆಂಬರ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಚನೆ ಇದೆ’ ಎಂದರು.
ನಿರ್ಮಾಪಕಿ ಡಾ.ಜಾಕ್ವೆಲಿನ್ ಫ್ರಾನ್ಸಿಸ್ ಮಾತನಾಡಿ,”ಬೇರೆಯವರ ಮೇಲೆ ಬಂಡವಾಳ ಹಾಕುವ ಬದಲು ನಮ್ಮ ಮಗನ ಪ್ರತಿಭೆಯನ್ನು ಬೆಳಕಿಗೆ ತರಬೇಕೆಂದು ಈ ಸಿನಿಮಾ ಮಾಡುತ್ತಿದ್ದೇನೆ. ಈಗಿನ ಕಾಲದ ಯೂತ್ ಕಥೆ ಮಾಡಿಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ’ ಎಂದರು.
ನಾಯಕ ಜಾಯ್ ಕೂಡಾ ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡ ಬಗ್ಗೆ ಹೇಳಿದರು. ಚಿತ್ರಕ್ಕೆ ಹಾಡು ಬರೆದ ಗೌಸ್‌ಪೀರ್ ಕೂಡಾ ಚಿತ್ರದ ಬಗ್ಗೆ ಮಾತನಾಡಿದರು. “ಇದು ಟೀನೇಜರ್ ಕಥೆ. ಕಾಲೇಜಿನಲ್ಲಿ ಹುಡುಗ ಹುಡುಗಿ ಮಧ್ಯೆ ನಡೆಯೋ ಪ್ರೀತಿ, ಪ್ರೇಮದ ಕಥೆ ಇದೆ. ಚಿತ್ರದಲ್ಲಿ ಎಲ್ಲಾ ಬಾಂಡಿಂಗ್ ಬಗ್ಗೆ ಹೇಳಲಾಗಿದೆ. ರೋಣದ ಬಕ್ಕೇಶ್ ಅವರು 5 ಹಾಡುಗಳನ್ನು ಮಾಡುತ್ತಿದ್ದಾರೆ’ ಎಂದರು.