Advertisement

ಜ್ಯಾಂಟಿ ರೋಡ್ಸ್ ಪ್ರಕಾರ ಈ ಭಾರತೀಯ ವಿಶ್ವದ ಬೆಸ್ಟ್ ಫೀಲ್ಡರ್ 

07:54 AM Feb 14, 2019 | |

ಜೋಹಾನ್ಸ್ ಬರ್ಗ್: ತನ್ನ ಕ್ಷೇತ್ರ ರಕ್ಷಣೆಯಿಂದಲೇ ಹಲವಾರು ಪಂದ್ಯಗಳನ್ನು ಗೆಲ್ಲಿಸಿದ ದಕ್ಷಿಣ ಆಫ್ರಿಕಾದ ಜ್ಯಾಂಟಿ ರೋಡ್ಸ್ ಈಗ ತಾನು ಕಂಡ ವಿಶ್ವದ ಶ್ರೇಷ್ಠಫೀಲ್ಡರ್ ಗಳನ್ನು ಹೆಸರಿಸಿದ್ದಾರೆ. ಅದರಲ್ಲಿ ಭಾರತೀಯ ಮೊದಲ ಸ್ಥಾನ ಪಡೆದಿದ್ದಾರೆ.

Advertisement

ಜ್ಯಾಂಟಿ ರೋಡ್ಸ್ 30 ಗಜಗಳ ಅಂತರದೊಳಗೆ ಹೆಚ್ಚಾಗಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಕಾರಣ ಅಂತಹ ಫೀಲ್ಡರ್ ಗಳ ಮೇಲೆ ಜ್ಯಾಂಟಿ ಒಲವು ತೋರಿಸಿದ್ದಾರೆ. ಜ್ಯಾಂಟಿ ಹೆಸರಿಸಿದ ಟಾಪ್ ಐದು ಫೀಲ್ಡರ್ ಗಳಲ್ಲಿ ಐದನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಆಂಡ್ರೂ ಸೈಮಂಡ್ಸ್ ಗೆ ದಕ್ಕಿದೆ. ಸೈಮಂಡ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು 109 ಕ್ಯಾಚ್ ಪಡೆದಿದ್ದರು.

ಜ್ಯಾಂಟಿ ರೋಡ್ಸ್ ಪ್ರಕಟಿಸಿದ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ತನ್ನದೇ ನೆಲದ ಆಟಗಾರ ಹರ್ಷಲ್ ಗಿಬ್ಸ್ ಅವರಿಗಿದೆ. ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರನಾಗಿದ್ದ ಗಿಬ್ಸ್ ಈಗ ವೀಕ್ಷಕ ವಿವರಣೆಕಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಗಿಬ್ಸ್ ಹಿಡಿದಿರುವ ಕ್ಯಾಚ್ ಗಳ ಸಂಖ್ಯೆ 210. ಆದರೆ 1999ರ ವಿಶ್ವಕಪ್ ಕ್ವಾಟರ್ ಫೈನಲ್ ನಲ್ಲಿ ಆಸೀಸ್ ನಾಯಕ ಸ್ಟೀವ್ ವಾ ಕ್ಯಾಚ್ ಕೈ ಚೆಲ್ಲಿ ಪಂದ್ಯ ಚೆಲ್ಲಬೇಕಾಯಿತು.


ರೋಡ್ಸ್ ಫೀಲ್ಡರ್ ಪಟ್ಟಿಯ ಮೂರನೇ ಸ್ಥಾನ ಇಂಗ್ಲೆಂಡ್ ಆಟಗಾರ ಪೌಲ್ ಕಾಲಿಂಗ್ ವುಡ್ ಗೆ. ಇಂಗ್ಲೆಂಡ್ ಮಾಜಿ ನಾಯಕ ಕಾಲಿಂಗ್ ವುಡ್ ಗಲ್ಲಿಯಲ್ಲಿ ಉತ್ತಮ ಕ್ಷೇತ್ರರಕ್ಷಣೆ ಮಾಡುತ್ತಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 204 ಕ್ಯಾಚ್ ಗಳು ಕಾಲಿಂಗ್ ವುಡ್ ಬೊಗಸೆ ಸೇರಿವೆ.


ರೋಡ್ಸ್ ಪ್ರಕಾರ ವಿಶ್ವದ ಎರಡನೇ ಅತ್ಯುತ್ತಮ ಫೀಲ್ಡರ್ ದಕ್ಷಿಣ ಆಫ್ರಿಕಾದ ಅದ್ಭುತ ಆಟಗಾರ ಎ.ಬಿ. ಡಿವಿಲಿಯರ್ಸ್. ಡಿವಿಲಿಯರ್ಸ್ ಮೈದಾನದ ಯಾವುದೇ ಸ್ಥಲದಲ್ಲಿ ಫೀಲ್ಡಿಂಗ್ ಮಾಡಿದರೂ ಅದ್ಭುತ ಫೀಲ್ಡಿಂಗ್ ಮಾಡುವ ಆಟಗಾರ. ಕಳೆದ ಸಾಲಿನ ಐಪಿಎಲ್ ನಲ್ಲಿ ಡಿವಿಲಿರ‍್ಸ್ ಹಾರಿ ಹಿಡಿದ ಕ್ಯಾಚ್ ಎಲ್ಲರ ಮನ ಸೆಳೆದಿತ್ತು. ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಡಿವಿಲಿಯರ್ಸ್  ಹಿಡಿದಿರುವ ಕ್ಯಾಚ್ ಗಳು ಬರೋಬ್ಬರಿ 423.


ಜ್ಯಾಂಟಿ ರೋಡ್ಸ್ ಪ್ರಕಾರ ವಿಶ್ವದ ಬೆಸ್ಟ್ ಫೀಲ್ಡರ್ ಭಾರತೀಯ ಆಟಗಾರ ಸುರೇಶ್ ರೈನಾ. ಸುರೇಶ್ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಬಂದಾಗಿನಿಂದ ನೋಡುತ್ತಿದ್ದೇನೆ. ಆತ ಯಾವತ್ತಿಗೂ ನನ್ನ ನೆಚ್ಚಿನ ಫೀಲ್ಡರ್ ಎಂದಿದ್ದಾರೆ. ಆತ ಯಾವುದೇ ಮೈದಾನದಲ್ಲಿ ಯಾವುದೇ ಕ್ಷಣದಲ್ಲಿ ಡೈವ್ ಹೊಡೆಯಲು ಹಿಂಜರೆಯುವುದಿಲ್ಲ ಎಂದು ರೈನಾರನ್ನು ಹಾಡಿ ಹೊಗಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ರೈನಾ ಇದುವರೆಗೆ 159 ಕ್ಯಾಚ್ ಗಳನ್ನು ಹಿಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರೈನಾ ನನ್ನನ್ನು ಈ ಸ್ಥಾನಕ್ಕೆ ಹೆಸರಿಸಿದ್ದಕ್ಕೆ ಧನ್ಯವಾದಗಳು. ನಾನು ಯಾವಾಗಲೂ ನಿಮ್ಮಿಂದ ಪ್ರಭಾವಿತನಾಗಿದ್ದೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next