ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲವೂ ಸ್ಥಗಿತಗೊಂಡಿದ್ದು ಗೊತ್ತೇ ಇದೆ. ಈಗ ಒಂದಷ್ಟು ಸಡಿಲಗೊಂಡಿರುವುದರಿಂದ ಕನ್ನಡ ಚಿತ್ರರಂಗದಲ್ಲೂ ಕೂಡ ಚಟುವಟಿಕೆಗಳು ಶುರುವಾಗಿವೆ. ಹೌದು, ಹಲವು ಚಿತ್ರಗಳು ತಮ್ಮ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಶುರುಮಾಡಿವೆ. ಆ ನಿಟ್ಟಿನಲ್ಲೀಗ ಕನ್ನಡದಲ್ಲಿ ಹೊಸ ಬಗೆಯ ಥ್ರಿಲ್ಲರ್ ಕಥಾಹಂದರ ಕಟ್ಟಿಕೊಟ್ಟಿರುವ “ರಮೇಶ್ ಸುರೇಶ್ ‘ ಚಿತ್ರ ಕೂಡ ಸದ್ಯಕ್ಕೆ ಚಿತ್ರೀಕರಣ ಮುಗಿಸುವ ಹಂತದಲ್ಲಿದ್ದು, ಇದೀಗ ಡಬ್ಬಿಂಗ್‌ಗೆ ಅಣಿಯಾಗುತ್ತಿದೆ.
“ರಮೇಶ್ ಸುರೇಶ್ ‘ ಈಗಾಗಲೇ ಕನ್ನಡದ ಮಟ್ಟಿಗೆ ಗಾಂಧಿನಗರದಲ್ಲಿ ಸುದ್ದಿಯಾಗಿರುವ ಹೆಸರಿದು. ಈ ಚಿತ್ರದ ಮೂಲಕ ಬಹುತೇಕ ಹೊಸಬರೇ ಗಾಂಧಿನಗರವನ್ನು ಸ್ಪರ್ಶಿಸಿದ್ದಾರೆ. ನಾಗರಾಜ್ ಮಲ್ಲಿಗೇನಹಳ್ಳಿ ಮತ್ತು ರಘುರಾಜ್ ಈ ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ಅನುಭವ. ಇನ್ನು, ಬೆನಕ ಮತ್ತು ಯಶ್‌ರಾಜ್ ಇವರಿಬ್ಬರಿಗೂ ಇದು ಮೊದಲ ಸಿನಿಮಾ. ಈ ಪ್ರತಿಭೆಗಳ ಕಥೆ ನಂಬಿಕೊಂಡು ಆರ್. ಕೆ.ಟಾಕೀಸ್ ಬ್ಯಾನರ್‌ನಡಿ ಕೃಷ್ಣ ಹಾಗೂ ಶಂಕರ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಸದ್ಯಕ್ಕೆ ಒಂದು ಹಾಡು, ಫೈಟ್ಸ್ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ, ಲಾಕ್‌ಡೌನ್ ನಂತರ ಅನುಮತಿ ಸಿಕ್ಕರೆ ಅದನ್ನು ಪೂರೈಸಿ, ಪ್ರೇಕ್ಷಕರ ಮುಂದೆ ಬರಲು ತಯಾರಾಗುತ್ತಿದೆ. ಒಂದು ಹಂತದ ಸಂಕಲನ ಕೆಲಸ ಮುಗಿದಿದ್ದು, ಡಬ್ಬಿಂಗ್‌ಗೆ ರೆಡಿಯಾಗಿದೆ. “ರಮೇಶ್ ಸುರೇಶ್ ‘ ಅಂದಾಕ್ಷಣ, ಟಿವಿಯಲ್ಲಿ ಜನಪ್ರಿಯಗೊಂಡ ಚಾಕೋಲೇಟ್ ಜಾಹಿರಾತುವೊಂದು ನೆನಪಾಗುತ್ತೆ. ಹಾಯ್ ರಮೇಶ್, ಹಾಯ್ ಸುರೇಶ್ ದು ಹೇಳುವ ಅವಳಿ-ಜವಳಿ ಸಹೋದರರ ನೆನಪಾಗುತ್ತೆ.
ಈ ಚಿತ್ರದಲ್ಲೂ ಇಬ್ಬರ ಹೆಸರು ಕೂಡ “ರಮೇಶ್ ಸುರೇಶ್ ‘. ಇಬ್ಬರೂ ಆ ಹೆಸರ ಮೂಲಕ ಮಜ ಕೊಡಲು ರೆಡಿಯಾಗಿದ್ದಾರೆ. ಇದೊಂದು ಪಕ್ಕಾ ಹಾಸ್ಯಮಯ ಸಿನಿಮಾ. ಇಬ್ಬರು ಹೀರೋಗಳ ಸುತ್ತವೇ ಸಾಗುವ ಕಥೆಯಲ್ಲಿ ಹಾಸ್ಯದ ಜೊತೆ ಗಂಭೀರ ವಿಷ ಯವೂ ಇದೆ. ಚಿತ್ರದಲ್ಲಿ ತೆಲುಗು ನಟ ಸತ್ಯಪ್ರಕಾಶ್, ಚಂದನಾ ಸೇಗು, ಸಾಧುಕೋಕಿಲ, ಮೋಹನ್ ಜುನೇಜ ಇತರರು ಇದ್ದಾರೆ.
ಮಾಸ್ಟರ್ ರಕ್ಷಿತ್, ವನಿತಾ, ನಿರ್ಮಾಪಕ ಕೃಷ್ಣ ಹಾಗು ಶಂಕರ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಇಲ್ಲೊಂದು ವಿಶೇಷತೆ ಇದೆ. ಅದೇನೆಂದರೆ, ಕತ್ತಲೆ ಗುಡ್ಡದ ಗೂಢಚಾರಿಗಳು ಎಂಬ ಅಡಿಬರಹವಿದೆ. ಅಲ್ಲೇ ಸಸ್ಪೆನ್ಸ್ ಕೂಡ ಇದೆ. ಒಟ್ಟಾರೆ ಇಬ್ಬರು ಸೋಮಾರಿ ಹುಡುಗರ ಲೈಫಲ್ಲಿ ಒಂದು ಘಟನೆ ನಡೆಯುತ್ತೆ. ಅದೇನೆಂಬುದೇ ಚಿತ್ರದ ಹೈಲೈಟ್.