Advertisement

ನಾಳೆ ಜೆಡಿಎಸ್‌ ಸೇರ್ಪಡೆ: ಎಚ್‌.ವಿಶ್ವನಾಥ್‌

03:45 AM Jul 03, 2017 | Team Udayavani |

ಮೈಸೂರು: ಮಂಗಳವಾರ ಬೆಂಗಳೂರಿನ ಜೆಡಿಎಸ್‌ ಪಕ್ಷದ ಕಚೇರಿಯಲ್ಲಿ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ, ಪಕ್ಷದ ಎಚ್‌.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆ ಆಗುವುದಾಗಿ ಮಾಜಿ ಸಂಸದ ಎಚ್‌.ವಿಶ್ವನಾಥ್‌ ಹೇಳಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 40 ವರ್ಷಗಳಿಂದ ರಾಜಕೀಯಮಾಡಿದ ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸಿ ಬೇರೆ ಪಕ್ಷದ ನೆರಳು ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ.  ಜೆಡಿಎಸ್‌ ಪಕ್ಷ ಸೇರ್ಪಡೆ ನಂತರ ಆ ಪಕ್ಷದ ಸಂಘಟನೆಗೆ ಶ್ರಮಿಸುವೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ಹೇಳಿದರು.

ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸಿದ್ದರೂ ಆ ಪಕ್ಷಕ್ಕೆ ನಾನು ಎಂದಿಗೂ ಋಣಿಯಾಗಿರುತ್ತೇನೆ. ನಾನು ಕಾಂಗ್ರೆಸ್‌ನ ನೆರಳು ಮಾತ್ರ ಬಿಡುತ್ತಿದ್ದೇನೆ. ರಾಜಕೀಯದಲ್ಲಿ ಇಂತಹ ಧ್ರುವೀಕರಣಗಳು ಹೊಸದೇನಲ್ಲ. ಆದರೂ ನನ್ನ ಜಾತ್ಯತೀತ ಸಿದ್ಧಾಂತಗಳಿಗೆ ಬದ್ಧವಾದ ಅಜೆಂಡಾ ಬದಲಾಗುವುದಿಲ್ಲ ಎಂದರು.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಹಳ್ಳಿಯಿಂದ ಬಂದರೂ ಭಾರತದ ಪರಮೋಚ್ಚ ಸ್ಥಾನ ಪ್ರಧಾನಿ ಪಟ್ಟ ಅಲಂಕರಿಸುವ ಮೂಲಕ ಇಡೀ ಭಾರತವೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ ಎಂದು ಗುಣಗಾನ ಮಾಡಿದರು.

ಜೆಡಿಎಸ್‌ ಸೇರುವಂತೆ ಸಲಹೆ: ಕಾಂಗ್ರೆಸ್‌ ತ್ಯಜಿಸುವುದು ಅನಿವಾರ್ಯವಾದಾಗ ನನ್ನ ಮನಸ್ಸು ಪ್ರಾದೇಶಿಕ ಪಕ್ಷ ಜೆಡಿಎಸ್‌ ನತ್ತ ಒಲವು ತೋರಿದೆ. ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಮಾಡಿದ ನನ್ನ ಸಮಾಜದ ಜನರೂ ಸಹ ಜೆಡಿಎಸ್‌ ಸೇರುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಎಲ್ಲರ ಸಲಹೆ ಪಡೆದೇ ಜೆಡಿಎಸ್‌ ಸೇರುತ್ತಿದ್ದೇನೆ. ನನ್ನ ಬೆಂಬಲಿಗರು, ಹಿತೈಷಿಗಳೆಲ್ಲ ರಾಜೀನಾಮೆ ನೀಡಿ ನನ್ನ ಜೊತೆ ಬರಬೇಕು ಎಂದು ಒತ್ತಾಯ ಮಾಡುವುದಿಲ್ಲ.

Advertisement

ರಾಜಕೀಯವನ್ನು ನಾನು ಯಾವತ್ತೂ ವೃತ್ತಿಯಾಗಿ ಮಾಡಿಕೊಂಡಿರಲಿಲ್ಲ. ನನ್ನ ಬದುಕಿನ ಎರಡನೇ ಪ್ರಮುಖ ಘಟ್ಟಕ್ಕೆ ಕಾಲಿಡುತ್ತಿದ್ದೇನೆ. ಜೆಡಿಎಸ್‌ನಲ್ಲಿ ನನಗೆ ಯಾರೂ ಹೊಸಬರಿಲ್ಲ. ಆ ಪಕ್ಷದಲ್ಲಿರುವ ಎಲ್ಲರೂ ನನಗೆ ಪರಿಚಿತರೆ, ಹೀಗಾಗಿ ಅವರೆಲ್ಲರ ಜತೆ ಸೇರಿಕೊಂಡು ಪಕ್ಷ ಸಂಘಟನೆಯ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ಹೊಸ ಸಂದೇಶದೊಂದಿಗೆ ಜೆಡಿಎಸ್‌ಗೆ: ಜೆಡಿಎಸ್‌ ಸೇರಿದ ಮಾತ್ರಕ್ಕೆ ನನ್ನ ಆಟ ಬದಲಾವಣೆ ಆಗುವುದಿಲ್ಲ. ನನ್ನ ಕ್ರೀಡಾಂಗಣ ಮಾತ್ರ ಬದಲಾಗುತ್ತಿದೆ. ನನ್ನ ರಾಜಕೀಯ, ನನ್ನ ರಾಜಕಾರಣ ಎರಡೂ ಸಹ ಹಾಗೆಯೇ ಇರುತ್ತದೆ. ಹೊಸ ಪಕ್ಷ, ಹೊಸ ವಿಷಯ, ಹೊಸ ಸಂದೇಶದೊಂದಿಗೆ ಜೆಡಿಎಸ್‌ಗೆ ಹೋಗುತ್ತಿದ್ದೇನೆ. ನಾನೇನು ಕಮಂಡಲ ಹಿಡಿದುಕೊಂಡು ಜೆಡಿಎಸ್‌ಗೆ ಹೋಗುತ್ತಿಲ್ಲ. ಒಬ್ಬ ರಾಜಕಾರಣಿಗೆ ಇರಬೇಕಾದ ಕನಿಷ್ಠ ಆಸೆಗಳು ನನಗೂ ಇವೆ ಎನ್ನುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್‌ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ಹೇಳಿದರು.

ಮುಖಂಡರಾದ ಎ.ಎಸ್‌.ಚನ್ನಬಸಪ್ಪ, ರೇವಣ್ಣ, ನಗರಪಾಲಿಕೆ ಮಾಜಿ ಸದಸ್ಯ ಆರ್‌.ಸೋಮಸುಂದರ್‌ ಇತರರು ಇದ್ದರು.

ತಾರಾ ಪ್ರಚಾರಕ !
ವಿದ್ಯಾರ್ಥಿಯಾಗಿದ್ದಾಗಲೇ ನಾನು ಸ್ಟಾರ್‌ ಕ್ಯಾಂಪೇನರ್‌ ಆಗಿದ್ದೆ. 1970ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾಗಿದ್ದ ನಾನು ಹಿರಿಯ ರಾಜಕಾರಣಿಗಳಾದ ತುಳಸೀದಾಸ್‌ ದಾಸಪ್ಪ, ಎಸ್‌.ಎಂ.ಕೃಷ್ಣ ರ ಪರವಾಗಿ ಲೋಕಸಭಾ ಚುನಾವಣೆಯಲ್ಲಿ ಮತ ಯಾಚನೆ ಮಾಡಿದ್ದೆ, ಶಾಸಕ, ಸಂಸದ ಆಗುವ ಮೊದಲೇ ನಾನು ಸ್ಟಾರ್‌ ಆಗಿದ್ದೆ ಎನ್ನುವ ಮೂಲಕ ತಮ್ಮ ವಿದ್ಯಾರ್ಥಿ ಜೀವನ, ಹೋರಾಟ, ವಕೀಲಿಕೆ, ರಾಜಕೀಯ ಪ್ರವೇಶದ ದಿನಗಳನ್ನು ಎಚ್‌.ವಿಶ್ವನಾಥ್‌ ಮೆಲಕು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next