ಕೊಪ್ಪಳ: ಮಾಜಿ ಸಿಎಂ ಜಗದೀಶ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆಯಾದ ನಂತರ ಕಾಂಗ್ರೆಸ್‌ಗೇನು ಆಗಿಲ್ಲ. ಆದರೆ ಶೆಟ್ಟರ ಗೌರವ ಕಡಿಮೆಯಾಗಿದೆ ಎಂದು ನನ್ನ ಅನಿಸಿಕೆ. ಮಾಜಿ ಸಿಎಂ ಆಗಿದ್ದವರು ಈ ರೀತಿ ನಡೆದುಕೊಳ್ಳಬಾರದಿತ್ತು ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಶೆಟ್ಟರ್ ಅವರಂಥ ಹಿರಿಯರು ಈ ರೀತಿ ಮಾಡಬಾರದಿತ್ತು ಎನ್ನುವ ನೋವು ನಮ್ಮನ್ನು ಕಾಡುತ್ತದೆ. ನಮ್ಮಂಥವರು ಮಾಡಬೇಕಾಗಿತ್ತು. ಆದರೆ ಅವರು ಹೋಗಿದ್ದು ನೋವಾಗಿದೆ ಎಂದರು.
ಬರ ಪರಿಹಾರ ಹಣವನ್ನು ಈಗ ರೈತರ ಖಾತೆಗೆ ಹಾಕುತ್ತೇವೆ. ಆದರೆ ಕೇಂದ್ರ ಸರಕಾರವು ಬರ ಪರಿಹಾರ ನೀಡಬೇಕು. ಈ ಕುರಿತು ಸಂಸದರು ಮಾತನಾಡುತ್ತಿಲ್ಲ. ಇದು ನೋವಿನ ಸಂಗತಿ. ಕೇಂದ್ರ ಸರಕಾರಕ್ಕೆ ಬಡವರ ಬಗ್ಗೆ ಕಾಳಜಿಯಲ್ಲ. ಬಡವರಿಗೆ ಅಕ್ಕಿ ಕೊಡಿ ಎಂದರೆ ಕೊಡಲಿಲ್ಲ. ಆದರೆ ಮನೆ ಮನೆಗೆ ಮಂತ್ರಾಕ್ಷತೆ ಕೊಟ್ಟರು. ಸಿಎಂ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದಾಗ ಬರ ಕುರಿತು ಮಾತನಾಡಲು ಅವಕಾಶ ನೀಡಿಲ್ಲ. ಮೋದಿ ಕೇವಲ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಅವರಿಗೆ ರೋಡ್ ಶೋಗೆ ಟೈಂ ಇದೆ. ಆದರೆ ಜನರ, ರೈತರ ಸಮಸ್ಯೆ ಕೇಳಲು ಸಮಯವಿಲ್ಲ ಎಂದರು.
ಸಚಿವ ರಾಜಣ್ಣನವರ “ನಾವೇನು ಹೈಕಮಾಂಡ್ ಗುಲಾಮರಾ’ ಎಂಬ ಹೇಳಿಕೆ ಬಗ್ಗೆ ಗೊತ್ತಿಲ್ಲ. ಪ್ರಜಾಪ್ರಭುತ್ವ ಏನಾದರೂ ಇದ್ದರೆ ಅದು ಕಾಂಗ್ರೆಸ್ಸಿನಲ್ಲಿ ಮಾತ್ರ. ಕೇಂದ್ರದಲ್ಲಿ 10 ವರ್ಷದ ಆಡಳಿತ ಮಾಡಿದ ಮೋದಿ ತಮ್ಮ ಸಂಸದರೊಂದಿಗೆ ಮಾತನಾಡಿ, ಸಮಸ್ಯೆ ಏನು ಎಂದು ಒಮ್ಮೆಯಾದರೂ ಕೇಳಿದ್ದಾರಾ? ಎಂದು ಪ್ರಶ್ನಿಸಿದರು.
ರಾಹುಲ್ ಯಾತ್ರೆಯಿಂದ ಬಿಜೆಪಿಗೆ ನಡುಕ ಹುಟ್ಟುತ್ತಿದೆ. ಅದಕ್ಕಾಗಿ ತಡೆಯುವ ಯತ್ನ ಮಾಡಿದ್ದಾರೆ. ಜನತೆ ನಿಮಗೆ ಮತ ಹಾಕಿದ್ದು ಜನರ ಸೇವೆ ಮಾಡಲು. ಆದರೆ ನನ್ನ ಹೆಸರು ಹೇಳಿಕೊಂಡು ರಾಜಕಾರಣ ಮಾಡುವುದಲ್ಲ ಎಂದು ರಾಮ ಒಂದಿಲ್ಲ ಒಂದು ದಿನ ಬಿಜೆಪಿಯವರಿಗೆ ಕನಸಿನಲ್ಲಾದರೂ ಬಂದು ಶಾಪ ಕೊಡಬಹುದು ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರು ತಮ್ಮೂರಿನಲ್ಲಿ ರಾಮ ಮಂದಿರ ನಿರ್ಮಿಸಿದ್ದಾರೆ. ರಾಮನ ಬಗ್ಗೆ ಅವರು ವಿರೋಧ ಮಾಡಿಲ್ಲ. ನಾವು ಕೆಲಸ ಮಾಡಿದ್ದೇವೆ. ಪ್ರಚಾರ ತೆಗೆದುಕೊಂಡಿಲ್ಲ. ಆನೆಗೊಂದಿ ಹಾಗೂ ಕನಕಗಿರಿ ಉತ್ಸವಕ್ಕೆ ಪ್ರಸ್ತಾವನೆ ತರಿಸಿಕೊಂಡಿದ್ದೇನೆ. ಈಗಾಗಲೇ 3.50 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಅಂಜನಾದ್ರಿಗೆ ಈಗಾಗಲೇ 100 ಕೋಟಿ ರೂ. ನೀಡಲಾಗಿದೆ. ಇನ್ನೂ 100 ಕೋಟಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.