ಮೈಸೂರು: ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ ಹಾಗೂ ಮೈಸೂರನ್ನು ಬಾಲಕಾರ್ಮಿಕ ಮುಕ್ತ ನಗರವನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ, ಮಕ್ಕಳ ಸಹಾಯವಾಣಿ 1098, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಒಡಿಪಿ ಸಂಸ್ಥೆ ಮತ್ತು ನಿಸರ್ಗ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಾಲ ಕಾರ್ಮಿಕ ಪದ್ಧತಿಯೇ ಕೆಟ್ಟದ್ದು. ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಅಪರಾಧ ಎಂದು ತಿಳಿದಿದ್ದರೂ ಅನೇಕ ಕಡೆ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುತ್ತಿದ್ದಾರೆ. ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ ಹಾಗೂ ಮೈಸೂರನ್ನು ಬಾಲಕಾರ್ಮಿಕ ಮುಕ್ತ ನಗರವನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದರು.
ಮಕ್ಕಳು ಕೂಲಿಗಲ್ಲ ಶಾಲೆಗೆ, ಮಕ್ಕಳನ್ನು ದುಡಿಸಿಕೊಳ್ಳುವ ಮಾಲೀಕರಿಗೆ ಧಿಕ್ಕಾರ ಹೀಗೆ ಅನೇಕ ಘೋಷಣೆ ಫಲಕಗಳನ್ನು ಹಿಡಿದ ಶಾಲಾ ಮಕ್ಕಳು ಜಾಗೃತಿ ಜಾಥಾ ನಡೆಸಿ ಬಾಲಕಾರ್ಮಿಕ ಪದ್ಧತಿ ವಿರೋಧಿಸಿದರಲ್ಲದೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ತಿಲಕ್‌ನಗರದ ಫಾರೂಖೀಯ ಪ್ರೌಢಶಾಲೆಯ ಬಳಿ ಇರುವ ಈದ್ಗಾ ಮೈದಾನದ ಹತ್ತಿರದಿಂದ ಪ್ರಾರಂಭವಾದ ಜಾಗೃತಿ ಜಾಥಾ ಪುಲಕೇಶಿ ರಸ್ತೆ, ಈದ್ಗಾ ಮೈದಾನದ ಸುತ್ತ ಮುತ್ತ, ಸಿ.ವಿ.ರಸ್ತೆ ಮುಖಾಂತರ ಫಾರೂಖೀಯ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕೊನೆಗೊಂಡಿತು.
ಜಾಥಾದಲ್ಲಿ ಒಡಿಪಿ ನಿರ್ದೇಶಕ ವಂ.ಸ್ವಾಮಿ, ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ನಿರ್ದೇಶಕಿ ಸರಸ್ವತಿ, ನಿಸರ್ಗ ಫೌಂಡೇಷನ್ ನಿರ್ದೇಶಕ ನಂಜುಂಡಯ್ಯ ಹಾಜರಿದ್ದರು.