ಜೊಯಿಡಾ: ಉಳವಿ ಗ್ರಾಪಂ ವ್ಯಾಪ್ತಿಯ ಸುಳಗೇರಿ ಗ್ರಾಮ ಯಾವಾಗ ಯಲ್ಲಾಪುರ ತಾಲೂಕಿಗೆ ಸೇರಿತು ಎನ್ನುವ ಪ್ರಶ್ನೆ ಈಗ ಸಾರ್ವಜನಿಕರನ್ನು ಕಾಡುತ್ತಿದೆ. ಉಳವಿ ಗ್ರಾಪಂಗೆ ಸುಳಗೆರಿ ಗ್ರಾಮದಿಂದ ಸದಸ್ಯರು ಆಯ್ಕೆಯಾಗಿದ್ದಾರೆ.
ಜತೆಗೆ ಕಾಳಿನದಿ ಈಚೆ ಇರುವ ಸುಳಗೆರಿ ಗ್ರಾಮ ಕದ್ರಾ ಗ್ರಾಪಂ ಅಥವಾ ಕಾರವಾರ ತಾಲೂಕಿಗೆ ಹತ್ತಿಕೊಂಡಿದೆ. ಹೀಗಿರುವಾಗ ಯಲ್ಲಾಪುರ ಹೇಗೆ ಬಂತು ಎಂಬ ಪ್ರಶ್ನೆ ಉದ್ಭವವಾಗಿದೆ.
ಅದೇ ರೀತಿ ತಾಲೂಕಿನ ಲಾಂಡೆ ಎಂಬ ಶಾಲೆಗೆ ಕಾರವಾರ ತಾಲೂಕಿನ ಶಿಕ್ಷಣ ಇಲಾಖೆ ಉಸ್ತುವಾರಿ ನೋಡುತ್ತಿದೆ. ಆದರೆ ಮಕ್ಕಳ ರೇಶನ್ ಜೊಯಿಡಾದಿಂದ ವಿತರಣೆ ಆಗುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಯಾವ ಧೋರಣೆಯಿಂದ ಹೀಗೆ ಮಾಡಿದೆ ಎಂಬ ಬಗ್ಗೆ ಯಾವ ಜನಪ್ರತಿನಿಧಿಗಳು ತಲೆ ಕೆಡಿಸಿಕೊಂಡಿಲ್ಲವೋ ಅಥವಾ ಅವರೇ ನಿರ್ಧರಿಸಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಜೊಯಿಡಾ ತಾಲೂಕಿನ ಒಂದು ಶಾಲೆಗೆ ಯಲ್ಲಾಪುರ ತಾಲೂಕು ಎಂದು, ಇನ್ನೊಂದು ಶಾಲೆಗೆ ಕಾರವಾರ ತಾಲೂಕು ಎಂದು ಬೋರ್ಡ್ ಬರೆಯುವುದು ಇಲಾಖೆಗೆ ಶೋಭೆ ತರಬಲ್ಲದೇ?
ಸುಳಗೇರಿ ಮತ್ತು ಲಾಂಡೆ ಗ್ರಾಮದ ಜನತೆ ಮತದಾನವನ್ನು ಜೊಯಿಡಾ ತಾಲೂಕಿನಲ್ಲೇ ಮಾಡುತ್ತಿದ್ದಾರೆ. ಕ್ಷೇತ್ರ ಕೂಡ ಜೊಯಿಡಾಕ್ಕೇ ಸೇರಿರುವಾಗ ಕೆಲ ಅಧಿಕಾರಿಗಳ ನಿರ್ಲಕ್ಷದಿಂದ ಈ ರೀತಿಯ ಬೆಳವಣಿಗೆ ಆಗುವುದು ಸರಿ ಅಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ಸುಳಗೆರಿ ಶಾಲೆಗೆ ಆಹಾರ ಪೂರೈಕೆ ಕಾರವಾರದಿಂದ, ಶಿಕ್ಷಕರ ನೇಮಕ ಯಲ್ಲಾಪುರದಿಂದ ಆಗುತ್ತಿರುವ ಬಗ್ಗೆ ತಿಳಿದು ಬಂದಿದೆ. ತಾಲೂಕಿನ ಶಾಲೆಗೆ ಎಲ್ಲ ನಿರ್ವಹಣೆ ತಾಲೂಕಿನಿಂದಲೇ ಆಗುವಂತೆ ನಾನು ಅಗತ್ಯ ಕ್ರಮ ಸಂಬಂಧ ಪಟ್ಟವರೊಂದಿಗೆ ಮಾತಾಡಿ ಮಾಡುತ್ತೇನೆ. ನಮ್ಮ ಗ್ರಾಪಂಗೆ ಅಲ್ಲಿಂದ ಆಯ್ಕೆಯಾದ ಸದಸ್ಯರಿದ್ದಾರೆ. –
ಮಂಜುನಾಥ ಮೋಕಾಶಿ, ಉಳವಿ ಗ್ರಾಪಂ ಉಪಾಧ್ಯಕ್ಷ
ಇದು ಹಿಂದಿನಿಂದ ನಡೆದು ಬಂದಿದೆ. ನಾವು ಬರುವ ಮೊದಲೇ ಈ ಪದ್ಧತಿ ಇದೆ. ಇದು ಆಡಳಿತಾತ್ಮಕ ತೊಂದರೆ. ಇದು ಸರಿ ಆಗಬೇಕು. –
ಬಶೀರ್ ಅಹ್ಮದ್, ಬಿಇಒ ಜೋಯಿಡಾ