ದಾರಿಹೋಕರ ಹಾಗೂ ಸ್ಥಳೀಯರ ದಾಹ ಇಂಗಿಸುವ ಮಾನವೀಯ ಕಾರ್ಯವನ್ನು 34ನೇ ನೆಕ್ಕಿಲಾಡಿ ಗ್ರಾಮದ ನೆಕ್ಕಿಲ ನಿವಾಸಿ, ‘ನಮ್ಮೂರು- ನೆಕ್ಕಿಲಾಡಿ’ಯ ಉಪಾಧ್ಯಕ್ಷ ಜಾನ್ ಕೆನ್ಯೂಟ್ ನಾಲ್ಕು ವರ್ಷದಿಂದ ಮಾಡುತ್ತಿದ್ದಾರೆ.
Advertisement
34ನೇ ನೆಕ್ಕಿಲಾಡಿ ಗ್ರಾಮದ ಆದರ್ಶ ನಗರದಲ್ಲಿ ನೀರು ಶುದ್ಧೀಕರಣವಾಗುವ ಸೌಲಭ್ಯವುಳ್ಳ ಕುಡಿಯುವ ನೀರಿನಟ್ಯಾಂಕನ್ನು ಜಿಲ್ಲಾ ಪಂಚಾಯತ್ ಅಳವಡಿಸಿತ್ತು. ಆದರೆ ಅದು ಉಪಯೋಗ ಶೂನ್ಯವಾಗಿತ್ತು. ಸುಜಾತಾ ರೈ ಅಲಿಮಾರ್ ಅವರು 34ನೇ ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಆ ಟ್ಯಾಂಕನ್ನು ಜಾನ್ ಕೆನ್ಯೂಟ್ ಅವರ ಮನೆ ಬಳಿ ಇರುವ ಬೀತಲಪ್ಪುಗೆ ಹೋಗುವ ಸಾರ್ವಜನಿಕ ದಾರಿ ಬದಿ ತಂದಿಡಲಾಗಿತ್ತು. ಜಾನ್ ಅವರು ತಮ್ಮ ಕೊಳವೆ ಬಾವಿಯಿಂದಲೇ ನೀರು ತುಂಬಿ, ಟ್ಯಾಂಕ್‌ಗೆ ಒಂದು ನಳ ಅಳವಡಿಸಿ, ಸಾರ್ವಜನಿಕರಿಗೆ ಉಪಯೋಗವಾಗುವಂತೆ ಮಾಡಿದ್ದರು. ಬೀತಲಪ್ಪುವಿನಲ್ಲಿರುವ ಸಾರ್ವಜನಿಕ ಕುಡಿಯುವ ನೀರಿನ ಸ್ಥಾವರ ಕೈಕೊಟ್ಟರೆ ಜನ ಈ ಟ್ಯಾಂಕ್‌ನಿಂದಲೇ ನೀರು ಒಯ್ದು, ಬಳಸುತ್ತಾರೆ.
ದಾರಿಹೋಕರಿಗೆ ಅನುಕೂಲವಾಗಿದೆ. ಪಂಚಾಯತ್‌ನ ಕುಡಿಯುವ ನೀರಿನ ಸ್ಥಾವರ ಕೈಕೊಟ್ಟಾಗಲೂ ನಾವು ಈ ಟ್ಯಾಂಕನ್ನೇ ಅವಲಂಬಿಸುತ್ತೇವೆ ಎಂದು ಸ್ಥಳೀಯರಾದ ಗಿರಿಜಾ ನಾಯಕ್ ಅವರು ವಿವರಿಸಿದರು. ಸಣ್ಣ ಪ್ರಯತ್ನ
ಕೊಳವೆ ಬಾವಿಯಲ್ಲಿ ನಮಗೆ ಬೇಕಾಗುವಷ್ಟು ನೀರಿದೆ. ಸಾರ್ವಜನಿಕರಿಗೂ ಸ್ವಲ್ಪ ಸಹಾಯವಾಗಲಿ ಎಂಬ ಭಾವನೆಯಿಂದ ನಿತ್ಯ ಈ ಟ್ಯಾಂಕ್‌ಗೆ ನೀರು ತುಂಬಿಸುತ್ತೇನೆ. ಇದರಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲ. ಶಾಲೆ ಮಕ್ಕಳಿಗೆ, ಪಾದಚಾರಿಗಳಿಗೆ ಬೇಸಿಗೆ ಸಂದರ್ಭದಲ್ಲಿ ಇದು ಬಹಳ ಅಗತ್ಯವಾಗಿತ್ತು. ಪಂಚಾಯತ್‌ನ ನೀರು ಪೂರೈಕೆ ಪೈಪ್ ತುಂಡಾದಾಗ, ನಳ ಮುರಿದಾಗ ನಾನು ಹಾಗೂ ಗಿರಿಜಾ ನಾಯಕ್ ಅವರ ಪುತ್ರ ಸೇರಿ ಸರಿಪಡಿಸಿದ್ದೇವೆ. ಟ್ಯಾಂಕ್ ಶುದ್ಧೀಕರಣವನ್ನೂ ನಾವೇ ಮಾಡುತ್ತೇವೆ ಎಂದು ಜಾನ್ ಕೆನ್ಯೂಟ್ ಹೇಳಿದರು.