ಚಿತ್ರಕ್ಕೆ ಏನು ಹೆಸರಿಡಬೇಕೆಂದು ಯೋಚಿಸಿದ್ದಾಗ ಹೆಸರೇ ಜಾನ್ ಸೀನ. ಇದು ಡಬ್ಲ್ಯು.ಡಬ್ಲ್ಯು.ಇ
ಫೈಟರ್ ಹೆಸರಲ್ವಾ ಎಂಬ ಪ್ರಶ್ನೆ ಬರಬಹುದು. ಖಂಡಿತಾ ಇದು ಅವರ ಹೆಸರೇ.
“ನಾನು ಚಿಕ್ಕವನಿಂದಲೂ ಡಬ್ಲ್ಯು.ಡಬ್ಲ್ಯು.ಇ ನೋಡಲಾಗಿ ಅಂದಿನಿಂದಲೂ ನನಗಿಷ್ಟವಾದ ಹೆಸರು ಜಾನ್ ಸೀನ. ಅದರ ಪ್ರಭಾವದಿಂದಲೋ ಏನೋ ಜಾನ್ ಮತ್ತು ಸೀನರ ಕಥೆಗೆ “ಜಾನ್-ಸೀನ’ ಎಂಬ ಹೆಸರು ಇಡಬೇಕಾಯಿತು ಎನ್ನುತ್ತಾರೆ ನಿರ್ದೇಶಕ ಸುನಿ. ಕೆಲವು ತಿಂಗಳ ಹಿಂದೆ ಪ್ರಾರಂಭವಾದ ಈ ಚಿತ್ರ ಈಗ ಅರ್ಧ ಮುಗಿದಿದೆ.
ಈ ಚಿತ್ರದಲ್ಲಿ ಅವರು ಜಾನ್ ಮತ್ತು ಸೀನ ಎಂಬ ಇಬ್ಬರು ಯುವಕರ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದಾರಂತೆ. ಇದೊಂದು ಹ್ಯೂಮರ್ ಥ್ರಿಲ್ಲರ್ ಎನ್ನುವ ಸುನಿ, “ಇದೊಂದು ಹವಾಲ ಹಿನ್ನೆಲೆಯ ಚಿತ್ರ. ಕಾಮಿಡಿ ಜೊತೆಗೆ ಸಾಕಷ್ಟು ಥ್ರಿಲ್ಲಿಂಗ್ ಅಂಶಗಳೂ ಈ ಚಿತ್ರದಲ್ಲಿ ಇವೆ. ಈಗಾಗಲೇ ಶೇ 50ರಷ್ಟು ಚಿತ್ರೀಕರಣ ಮುಗಿದಿದೆ. ಗಣೇಶ್ ಅಭಿನಯದ “ಚಮಕ್’ ಮುಗಿಸಿ, ಈ ಚಿತ್ರವನ್ನು ಬಿಡುಗಡೆ ಮಾಡುತ್ತೀನಿ’ ಎನ್ನುತ್ತಾರೆ ಸುನಿ.
ಈ ಚಿತ್ರದಲ್ಲಿ ಜಾನ್ ಆಗಿ ಉತ್ಪಲ್ ಮತ್ತು ಸೀನನಾಗಿ ವಿದ್ಯುತ್ ಚಂದ್ರ ಎಂಬ ಹೊಸ ಹೀರೋ ನಟಿಸುತ್ತಿದ್ದಾರೆ. ಉತ್ಪಲ್‌ಗೆ ಪ್ರಿಯಾಂಕಾ ನಾಯಕಿಯಾದರೆ, ವಿದ್ಯುತ್ ಚಂದ್ರಗೆ ಶುಭ್ರ ಅಯ್ಯಪ್ಪ ನಾಯಕಿ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಅಡಿ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು ಸುನಿ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಹೊಣೆಯನ್ನೂ ಹೊತ್ತಿದ್ದಾರೆ. ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ ಸಂಯೋಜಿಸಿದರೆ, ಪ್ರೀತಮ್ ಅವರ ಛಾಯಾಗ್ರಹಣವಿದೆ.