Advertisement
ಜೋಗತಿ ಮಂಜಮ್ಮ ಇಂದು ಹೆಸರಾಂತ ಜಾನಪದ ನೃತ್ಯಗಾರ್ತಿ, ಹಾಡುಗಾರ್ತಿ, ರಂಗಭೂಮಿ ಕಲಾವಿದೆ, ವಾದ್ಯಗಾರ್ತಿ. ಆದರೆ, ಇದಕ್ಕೂ ಮೊದಲು ಮಂಜುನಾಥ ಶೆಟ್ಟಿ. ಹನುಮಂತಯ್ಯ ಶೆಟ್ಟಿ ಮತ್ತು ಜಯಲಕ್ಷ್ಮೀ ದಂಪತಿ ಸುಪುತ್ರ. ಬಾಲ್ಯದಲ್ಲಿ ಎಲ್ಲರಂತೆಯೇ ಇದ್ದ ಮಂಜುನಾಥ 7ನೇ ತರಗತಿಯ ವೇಳೆಗೆ ದೇಹದಲ್ಲಿ ವಿಚಿತ್ರ ಬದಲಾವಣೆಯಿಂದ ದೇಹದಲ್ಲಿ ಹೆಣ್ಣಿನ ಲಕ್ಷಣಗಳು ಗೋಚರಿಸಿದಾಗ ಹೆಣ್ಣಾಗಿ ಬದುಕಬೇಕೆಂಬ ಹಂಬಲ ಮೂಡಿತು. ಆದರೆ, ಇದು ಅವರ ಕುಟುಂಬಕ್ಕೆ ಅಸಹಜ ಸ್ಥಿತಿಗೆ ತಂದು ನಿಲ್ಲಿಸಿ ಮಂಜುನಾಥರವರ ತಂದೆ ಸಭೆಯೊಂದರಲ್ಲಿ ಸಾಮಾಜಿಕವಾಗಿ ಮತ್ತು ಕೌಟುಂಬಿಕವಾಗಿ ಹಾಕಿರುವ ಬಹಿಷ್ಕಾರ ಬರಸಿಡಿಲಿನಂತೆ ಬಡೆಯಿತು. ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಬದುಕುಳಿದ ಮೇಲೆ ಜೀವ ಮತ್ತು ಜೀವನ ಅತಂತ್ರವಾಯಿತು. ನೊಂದ ಹೃದಯ ಮಂಜುನಾಥನಿಂದ ಮಂಜಮ್ಮಳಾಗಿ ರೂಪಾಂತರವಾದರು.
Related Articles
Advertisement
ಜೋಗತಿ ಸಂಪ್ರದಾಯದ ಸಾಮಾಜಿಕ ಸಂಕಟಗಳನ್ನು ಅನುಭವಿಸುತ್ತಲೇ ದೊಡ್ಡ ಮಟ್ಟಕ್ಕೆ ಬೆಳೆದು ಮಂಜಮ್ಮ ಜೋಗತಿ ಅವರ ಸಾಧನೆ ಅಸಾಧಾರಣ. ಕಾಳವ್ವ ಜೋಗತಿ ಅವರಿಂದ ಜಾನಪದ ನೃತ್ಯ, ಹಾಡುಗಾರಿಕೆ ಮತ್ತಿತರ ಕಲೆಗಳಲ್ಲಿ ತರಬೇತಿ ಪಡೆದರು. ತುಮಕೂರಿನಲ್ಲಿ ನಡೆದ ಅಖೀಲ ಕರ್ನಾಟಕ ಮಹಿಳಾ ಜಾನಪದ ಸಮ್ಮೇಳನದಲ್ಲಿ ಕಲಾ ಪ್ರದರ್ಶನ ನೀಡುವುದರೊಂದಿಗೆ ಕಲೆಯಾನಕ್ಕೆ ಮುನ್ನುಡಿ ಬರೆದರು. ಆರಂಭಿಕ ಹಂತದಲ್ಲಿ ಜೋಗತಿ ಅವರನ್ನು ಕಲಾವಿದರೆಂದು ಪರಿಗಣಿಸಿರಲಿಲ್ಲ. ಸಾಂಸ್ಕೃತಿಕ ಇಲಾಖೆಯು ಜೋಗತಿ ಅವರಿಗೆಂದೇ ಒಂದು ವೇದಿಕೆಯನ್ನು ಸೃಷ್ಟಿಸಿತು. ಈ ವೇದಿಕೆಯಲ್ಲಿ ಕಲಾವಿದರಲ್ಲದವರು ಕಲಾವಿದರಾದರು, ಇದು ಕಲೆಯಲ್ಲ ಎಂದದ್ದು ಕಲೆಯಾಯಿತು. ಅಂತಹ ಕಲಾವಿದರನ್ನು ಗುರುತಿಸುವ ಜಾನಪದ ಅಕಾಡೆಮಿಯು ಅಧ್ಯಕ್ಷೆಯಾಗಿದ್ದು ಒಂದು ದೊಡ್ಡ ಸ್ಥಿತಿ. ಮಂಜಮ್ಮ ಜೋಗತಿ ಅವರು ಆತ್ಮವಿಶ್ವಾಸ ವಿಕಾಸದ ಮೂಲಕ ಸಾಧನೆಯ ಮೆಟ್ಟಿಲನ್ನು ಕಷ್ಟದೊಂದಿಗೆ ಏರುತ್ತಾರೆ.
ಶ್ರೀ ರೇಣುಕಾ ಚರಿತ್ರೆ ನಾಟಕದಲ್ಲಿ ಮುಖ್ಯ ಹಾಡುಗಾರ್ತಿ, ಗೌಡಶಾನಿ, ಕಾಮಧೇನು, ಪರಶುರಾಮ ಸಹಿತ ಏಳು ಪಾತ್ರಗಳ ನಿರ್ವಹಣೆಯೊಂದಿಗೆ ಸಾವಿರಾರು ಪ್ರದರ್ಶನದಲ್ಲಿ ಕಲಾಪ್ರೇಮಿಗಳನ್ನು ಸೆಳೆದ ಕಲಾಗಾರ್ತಿ. ರಂಗ ಕಲಾವಿದೆ, ವಾದ್ಯಗಾರ್ತಿಯಾಗಿ ಹಂಪಿ ಉತ್ಸವ, ಬೀದರ್ ಉತ್ಸವ, ಜಾನಪದ ಕಲಾತ್ಸೋವ, ಜಾನಪದ ಜಾತ್ರೆ, ಇಷ್ಟೇ ಅಲ್ಲದೇ ರಸಋಷಿ, ಕುಂದಾಪುರದ ಕಲಾ ಚಿಗುರು ಕ್ರಿಯೇಶನ್‌ನ ಚೇತನ್ ನೈಲಾಡಿ ನಿರ್ದೇಶಿಸಿದ ನಿರ್ಣಯ ಸಾಕ್ಷ್ಯ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕೆಂಗುಲಾಬಿ ಮತ್ತು ದಂತ ಪುರಾಣದಲ್ಲಿ ಅಭಿನಯಿಸಿದ್ದಾರೆ. ಮುಂತಾದ ಉತ್ಸವಗಳಲ್ಲಿ ಕಲಾ ಪ್ರದರ್ಶನ ಮಾಡಿ ಮೆಚ್ಚಿಗೆ ಪಡೆದರು.
2019ರಲ್ಲಿ ಕರ್ನಾಟಕ ಸರಕಾರ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಿತು. ರಂಗಯೋಗಿ ಪ್ರಶಸ್ತಿ, ಆರ್ಯ ವೈಶ್ಯ ಸಮಾಜದವರು ವಾರ್ರೆ ವಾಹ್ ಪ್ರಶಸ್ತಿ, ಕರ್ನಾಟಕ ಜಾನಪದ ಯಕ್ಷಗಾನ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ, ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗಳು ಮತ್ತು ಗೌರವಗಳು ಎಲ್ಲವೂ ಕಲೆಯ ಕೈಹಿಡಿದು ಗೆದ್ದ ಮಂಜಮ್ಮ ಅವರಿಗೆ ದೊರೆತ ಫಲಗಳು. ಮಂಜಮ್ಮ ಜೋಗತಿಯವರಿಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗುವ ಮೂಲಕ ಸಾವಿರಾರು ಜೋಗತಿಯರಿಗೆ ಸ್ಫೂರ್ತಿದಾಯಕರಾಗಿದ್ದಾರೆ.
ಸತತ ನಾಲ್ಕು ದಶಕದಿಂದಲೂ ನಿರಂತರ ಕಲಾ ಸೇವೆಗೈದಿರುವ ಮಂಜಮ್ಮ ತೃತೀಯ ಲಿಂಗಿಗಳಿಗೆ ಅಷ್ಟೇ ಸ್ಫೂರ್ತಿದಾಯಕರಾಗಿರದೇ ಸಮಾಜಕ್ಕೆ ಒಂದು ಮಾದರಿ ಹೆಣ್ಣಾಗಿ ಕನ್ನಡಿಯ ರೂಪದಲ್ಲಿ ನಿಂತಿದ್ದಾರೆ.
ಮಂಜಮ್ಮ ಅಂತೆಯೇ ಮನೆ ಬಿಟ್ಟು ಬಂದ ಮೇಘಾ, ಅನಾಥ ಮಕ್ಕಳು ಅಷ್ಟೇ ಅಲ್ಲದೇ ವೃದ್ಧರಿಗೂ ಸಹ ತಾಯಿಯ ಸ್ಥಾನದಲ್ಲಿ ನಿಂತು ಪೋಷಿಸುತ್ತಿದ್ದಾರೆ. ಕೈ ತಟ್ಟಿ ಬಂದಿರುವ ದುಡ್ಡಲ್ಲಿ ಮಕ್ಕಳನ್ನು ದತ್ತು ಪಡೆದು ಅನಾಥ ಮಕ್ಕಳ ಶಿಕ್ಷಣಕ್ಕೆ ಹಾಗೂ ವೃದ್ಧರ ಆರೋಗ್ಯಕ್ಕೆ ವಿನಿಯೋಗಿಸುತ್ತಿದ್ದಾರೆ.
ಮಂಗಳಮುಖೀ ಎಂದಾಗ ಮೈ ಮಾರಿಕೊಂಡು ಬದುಕುವವರು ಎನ್ನುವ ಸಮಾಜದಲ್ಲಿ ಮನೆ ಮನೆ ಪಾತ್ರೆ ತೊಳೆದು, ಭಿಕ್ಷೆ ಬೇಡಿ ಜೀವನ ಸಾಗಿಸುತ್ತಾ ಮತ್ತೇ ಬೆಂಗಳೂರಿಗೆ ಬರುತ್ತಾರೆ. ಇಲ್ಲಿ ಭಿಕ್ಷೆ ಬೇಡುವ ಸಂದರ್ಭದಲ್ಲಿ ಯಾರೋ ವೃದ್ಧರು, ಅನಾಥ ಮಕ್ಕಳಿಗೆ ಹಾಗೂ ಅಸಹಾಯಕರಿಗೆ ಭಿಕ್ಷೆ ಬೇಡಿರುವ ದುಡ್ಡಲ್ಲೇ ಅವರಿಗೂ ಕೊಟ್ಟು, ಖುಷಿ ಪಟ್ಟು ಅವರಲ್ಲೇ ತಮ್ಮ ಕುಟುಂಬ ಕಾಣುತ್ತಿದ್ದರು. ತಾವು ಅನುಭವಿಸಿದ ಕಷ್ಟಗಳು, ಒಂಟಿತನ, ಅನುಕಂಪವಿಲ್ಲದ ಜನರ ನಡುವೆ ಅವರು ಅನುಭವಿಸಿದ ಕಷ್ಟಗಳು ಈ ಅನಾಥ ಮಕ್ಕಳು ಅನುಭವಿಸಬಾರದು ಎಂದುಕೊಂಡು ತನ್ನ ಸ್ವಂತ ಮಕ್ಕಳು ಎಂದು ಜೀವನ ಕಟ್ಟಿಕೊಡುವಲ್ಲಿ ಸಾಕಷ್ಟು ಹೋರಾಡಿದ್ದಾರೆ.
ಮಂಗಳಮುಖೀಯರು ಈ ಹೆಸರು ಕಿವಿ ಮೇಲೆ ಬೀಳುತ್ತಲೇ ಅಮಂಗಳ ಅನ್ನೋ ಈ ಕಾಲದಲ್ಲಿ ಇವರ ಬವಣೆ, ಕಷ್ಟ ದುಮ್ಮಾನಗಳನ್ನು ಕೇಳಲು ಯಾರು ಇಲ್ಲ. ಆದರೆ ಗಂಡಾಗಿ ಹುಟ್ಟಿ, ಹೆಣ್ಣಾದ ಅವರಿಗೆ ಬದುಕುವ ಹಕ್ಕಿದೆ ಎಂದು ದಶಕಗಳಿಂದಲೂ ನಡೆಯುತ್ತಿರೋ ಹೋರಾಟ ನಿರಂತರವಾಗಿದೆ. ಇವತ್ತಿಗೂ ತೃತೀಯ ಲಿಂಗಿಗಳ ಬದುಕಿಗೆ ಗೌರವ ಎನ್ನುವುದು ನಮ್ಮ ಸಮಾಜದಲ್ಲಿ ಇನ್ನೂ ಪರಿಪಕ್ವವಾಗಿಲ್ಲ. ನಮ್ಮ ಸಮಾಜದಲ್ಲಿ ಮಂಗಳಮುಖೀಯರು ಎಂದ ತತ್‌ಕ್ಷಣ ಹಣ ಕೀಳುವುದು, ದುಡ್ಡಿಗಾಗಿ ಕಾಟ ಕೊಡೊವುದು ಎಂದೇ ಭಾವಿಸುತ್ತೇವೆ. ಆದರೇ ಅವರ ಜೀವನ, ಬದುಕೇ ವಿಭಿನ್ನ. ನಾಡಿನಾದ್ಯಂತ ಇಂತಹ ವಿಶೇಷ, ಅದ್ಭುತ, ಅಮೋಘ ವ್ಯಕ್ತಿಗಳು ನಮ್ಮ ಮುಂದೆ ಇದ್ದಾರೆ. ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿರದೇ ಎಲ್ಲ ಸಮುದಾಯಕ್ಕೂ ಸ್ಫೂರ್ತಿಯಾಗಿರುವ ಇಂತಹ ವ್ಯಕ್ತಿತ್ವ ನಮ್ಮೆಲ್ಲರ ಸ್ಫೂರ್ತಿ ಆಗಬೇಕು.