ಲಂಡನ್: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆ ಮಾಡಲಾದ ಇಂಗ್ಲೆಂಡಿನ ಏಕದಿನ ತಂಡಕ್ಕೆ ಜೋಫ್ರ ಆರ್ಚರ್ ಮರಳಿದ್ದಾರೆ. ಮೊಣಕೈ ಮತ್ತು ಬೆನ್ನಿನ ಗಾಯದಿಂದ ಚೇತರಿಸಿಕೊಂಡಿರುವ ವೇಗಿ ಆರ್ಚರ್ 2021ರ ಮಾರ್ಚ್ ಬಳಿಕ ತನ್ನ ಮೊದಲ ಪಂದ್ಯವನ್ನಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ಇಂಗ್ಲೆಂಡ್ 2019ರ ಏಕದಿನ ವಿಶ್ವಕಪ್ ಗೆದ್ದ ವೇಳೆ ಆರ್ಚರ್ ತಂಡದ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಅವರು ಭಾರತ ವಿರುದ್ಧದ ಟಿ20 ಪ್ರವಾಸದ ವೇಳೆ ಈ ಹಿಂದಿನ ಕೊನೆಯ ಪಂದ್ಯ (2021ರ ಮಾರ್ಚ್) ಆಡಿದ್ದರು. ಕಳೆದೊಂದು ವರ್ಷದಲ್ಲಿ ಅವರು ಮೊಣಕೈ ಮತ್ತು ಬೆನ್ನು ನೋವಿನ ತೀವ್ರ ಸಮಸ್ಯೆಗೆ ಒಳಗಾಗಿದ್ದರು. ಮೊಣಕೈ ಸಮಸ್ಯೆಗೆ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಮೂರು ಪಂದ್ಯಗಳ ಏಕದಿನ ಸರಣಿ ಆರು ದಿನಗಳ ಅಂತರದಲ್ಲಿ ನಡೆಯಲಿದೆ. ಜ. 27ರಂದು ಬ್ಲೋಮ್‌ಫಾಂಟೈನ್‌ನಲ್ಲಿ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಆಬಳಿಕ ಇಂಗ್ಲೆಂಡ್ ತಂಡವು ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಅಣಿಯಾಗಲಿದೆ.
ಇಂಗ್ಲೆಂಡ್ ತಂಡ:
ಜಾಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಜೋಫ್ರ ಆರ್ಚರ್, ಹ್ಯಾರಿ ಬ್ರೂಕ್, ಸ್ಯಾಮ್ ಕರನ್, ಬೆನ್ ಡಕೆಟ್, ಡೇವಿಡ್ ಮಾಲನ್, ಅದಿಲ್ ರಶೀದ್, ಜಾಸನ್ ರಾಯ್, ಫಿಲ್ ಸಾಲ್ಟ್, ಒಲಿ ಸ್ಟೋನ್, ರೀಸ್ ಟೊಪ್ಲೆ, ಡೇವಿಡ್ ವಿಲ್ಲೆ, ಕ್ರಿಸ್ ವೋಕ್ಸ್.