Advertisement

INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಸೋತ ಭಾರತ

09:03 AM Jan 05, 2025 | Team Udayavani |

ಸಿಡ್ನಿ: ಅತ್ಯಂತ ನಿರ್ಣಾಯಕ ಸಮಯದಲ್ಲಿ ಪ್ರಮುಖ ವೇಗಿ, ನಾಯಕ ಜಸ್ಪ್ರೀತ್‌ ಬುಮ್ರಾ ಅಲಭ್ಯತೆಯ ಪರಿಣಾಮ ಒತ್ತಡ ಅನುಭವಿಸಿದ ಭಾರತ ಕೊನೆಗೆ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಆರು ವಿಕೆಟ್‌ ಅಂತರದ ಸೋಲನುಭವಿಸಿದೆ. ಇದರೊಂದಿಗೆ ಬಾರ್ಡರ್‌ ಗಾವಸ್ಕರ್‌ ಟ್ರೋಫಿಯು ದಶಕದ ಬಳಿಕ ಅಲನ್ ಬಾರ್ಡರ್‌ ದೇಶದ ಪಾಲಾಗಿದೆ. ಆಸ್ಟ್ರೇಲಿಯಾ 3-1 ಅಂತರದಿಂದ ಸರಣಿ ಗೆದ್ದುಕೊಂಡಿದೆ.

Advertisement

ಭಾರತ ನೀಡಿದ 162 ರನ್‌ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡವು ನಾಲ್ಕು ವಿಕೆಟ್‌ ಕಳೆದುಕೊಂಡು 27 ಓವರ್‌ ಗಳಲ್ಲಿ ಜಯ ಸಾಧಿಸಿತು.

ಆರು ವಿಕೆಟ್‌ ನಷ್ಟಕ್ಕೆ 141 ರನ್‌ ಗಳಿಸಿದ್ದಲ್ಲಿಂದ ಮೂರನೇ ದಿನದಾಟದ ಬ್ಯಾಟಿಂಗ್‌ ಆರಂಭಿಸಿದ ಭಾರತವು 157 ರನ್‌ ಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು. ಕೇವಲ ಏಳು ಓವರ್‌ ಗಳಲ್ಲಿ ಭಾರತವನ್ನು ಆಲೌಟ್‌ ಮಾಡುವಲ್ಲಿ ಆಸೀಸ್‌ ಬೌಲರ್‌ ಗಳು ಯಶಸ್ವಿಯಾದರು. 61 ರನ್‌ ಗಳಿಸಿದ ಪಂತ್‌ ಅವರದ್ದೇ ಗರಿಷ್ಠ ಗಳಿಕೆ. ಭಾರತವನ್ನು ಕಾಡಿದ ವೇಗಿ ಬೊಲ್ಯಾಂಡ್‌ ಆರು ವಿಕೆಟ್‌ ಕಿತ್ತರೆ, ನಾಯಕ ಕಮಿನ್ಸ್‌ ಮೂರು ವಿಕೆಟ್‌ ಪಡೆದರು. ಒಂದು ವಿಕೆಟ್‌ ವೆಬ್‌ಸ್ಟರ್ ಪಾಲಾಯಿತು.

ಗೆಲುವಿಗೆ 162 ರನ್‌ ಗುರಿ ಪಡೆದ ಆಸ್ಟ್ರೇಲಿಯಾ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್‌ ಗೆ ಮನ ಮಾಡಿತು. ಅದರಲ್ಲೂ ನಾಯಕ ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಗೆ ಇಳಿಯದೆ ಇದ್ದಿದ್ದು ಭಾರತಕ್ಕೆ ಮುಳುವಾಯಿತು. ಪ್ರಸಿಧ್‌ ಕೃಷ್ಣ ಮತ್ತು ಸಿರಾಜ್‌ ವಿಕೆಟ್‌ ಪಡೆದರೂ ದುಬಾರಿಯಾದರು.

ಉಸ್ಮಾನ್‌ ಖ್ವಾಜಾ 41 ರನ್‌ ಮಾಡಿದರೆ, ಕ್ವಾಂನ್ಸ್ಟಾಸ್‌ 22 ರನ್‌ ಮಾಡಿದರು. ನಾಲ್ಕು ರನ್‌ ಗಳಿಸಿದ ಸ್ಟೀವನ್‌ ಸ್ಮಿತ್‌ ಟೆಸ್ಟ್‌ ಕ್ರಿಕೆಟ್‌ ನಲ್ಲಿ 9,999 ರನ್‌ ಗಳಿಸಿದ್ದ ವೇಳೆ ಕ್ಯಾಚಿತ್ತು ಔಟಾದರು. ಕೊನೆಯಲ್ಲಿ ಟ್ರಾವಿಸ್‌ ಹೆಡ್‌ 34 ರನ್‌ ಮತ್ತು ಬ್ಯೂ ವೆಬ್‌ಸ್ಟರ್ ಅಜೇಯ 39 ರನ್‌ ಗಳಿಸಿದರು.

Advertisement

ಭಾರತದ ಪರ ಪ್ರಸಿಧ್‌ ಕೃಷ್ಣ ಮೂರು ವಿಕೆಟ್‌ ಕಿತ್ತರೆ, ಸಿರಾಜ್‌ ಒಂದು ವಿಕೆಟ್‌ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next