Advertisement

ಉದ್ಯೋಗ ಖಾತ್ರಿಯಲ್ಲಿ ಅವ್ಯವಹಾರ: ತನಿಖೆಗೆ ಆಗ್ರಹ

05:09 PM Nov 07, 2024 | Team Udayavani |

ಉದಯವಾಣಿ ಸಮಾಚಾರ
ಹಳಿಯಾಳ: ಬಡ ಕೂಲಿ ಕಾರ್ಮಿಕರ ಜೀವನಕ್ಕೆ ನೆರವಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡಲಾಗಿದೆ. ಆದರೆ ತಾಲೂಕಿನಲ್ಲಿ ಈ ಯೋಜನೆಯಡಿ ಭಾರಿ ಅವ್ಯವಹಾರ ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ.

Advertisement

ಉದ್ಯೋಗ ಅವಶ್ಯವಿರುವ ರೈತ ಹಾಗೂ ಕೂಲಿ ಕಾರ್ಮಿಕರಿಗೆ 100 ದಿನ ಉದ್ಯೋಗ ಒದಗಿಸಿ ಅವರ ಜೀವನಕ್ಕೆ ನೆರವಾಗಬೇಕಾದ ಉದ್ಯೋಗ ಖಾತ್ರಿ ಯೋಜನೆಯನ್ನು ಅಧಿಕಾರಿಗಳು ದುರ್ಬಳಕೆ ಮಾಡಿಕೊಂಡು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ತಾಲೂಕಿನಾದ್ಯಂತ ಹಬ್ಬಿವೆ.

ನಿಯಮ ಉಲ್ಲಂಘನೆ: ತಾಲೂಕಿನ ಕೆಸರೊಳ್ಳಿ ಗ್ರಾಪಂ ವ್ಯಾಪ್ತಿಯ ನೀರಲಗಾ ಗ್ರಾಮದ ಯಶೋಧ ಪಿ. ಮನೆಯಿಂದ ದೇವೇಂದ್ರ ಕೆ. ಅವರ ಮನೆವರೆಗೆ ಉದ್ಯೋಗ ಖಾತ್ರಿಯಡಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಈ ಯೋಜನೆಯಲ್ಲಿ ಜೆಸಿಬಿ ಬಳಸಬಾರದು ಎಂಬ ನಿಯಮವಿದೆ. ಆದರೆ ಇಲ್ಲಿ ಅದನ್ನು ಉಲ್ಲಂಘಿಸಿ ಸರ್ಕಾರದ ಕಣ್ಣಿಗೆ ಮಣ್ಣೆರೆಚ್ಚುವ ಕೆಲಸ ಮಾಡಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಇದಲ್ಲದೇ ತಾಲೂಕಿನ ವಿವಿಧ ಭಾಗಗಳಲ್ಲಿ ಈ ಯೋಜನೆ ಮೂಲಕ ಕೈಗೊಳ್ಳಲಾಗಿರುವ ಹಲವು ಕಾಮಗಾರಿಗಳಲ್ಲಿ ಸರಕಾರದ ನಿಯಮ ಉಲ್ಲಂಘಿ ಸಲಾಗಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಲೋಕಾಯುಕ್ತಕ್ಕೆ ದೂರು: ಈ ಯೋಜನೆಯಲ್ಲಿ
ನಡೆದಿರುವ ಅವ್ಯವಹಾರಗಳ ಕುರಿತು ತನಿಖೆ ಕೈಗೊಳ್ಳಬೇಕು ಹಾಗೂ ಸರಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿರುವ
ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಹಿನ್ನೆಲೆಯಲ್ಲಿ ತಾಲೂಕಿನ ಕೆಲ ಪ್ರಜ್ಞಾವಂತರು ಲೋಕಾಯುಕ್ತಕ್ಕೆ ಹಾಗೂ ಹಿರಿಯ ಅಧಿಕಾರಿಗಳ ಬಳಿ ದೂರು ನೀಡಲು ಸಿದ್ಧತೆ ನಡೆಸಿದ್ದಾರೆ.

ಈ ಯೋಜನೆಯಡಿ ಕೆಲಸ ನಿರ್ವಹಿಸುವ ಉದ್ಯೋಗಿಗಳ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ. ಆದರೆ ಕೆಲ ಕಾಮಗಾರಿಗಳನ್ನು ಗುತ್ತಿಗೆದಾರರ ಮೂಲಕ ಕೈಗೊಳ್ಳಲಾಗುತ್ತಿದೆ. ಗುತ್ತಿಗೆದಾರರು ಕಚ್ಚಾ ಸಾಮಗ್ರಿ ಬಳಸಿ ಕಾಮಗಾರಿ
ಕೈಗೊಂಡಿರುವ ಉದಾಹರಣೆಗಳೂ ಇವೆ. ಕೊನೆಗೆ ಕಾಮಗಾರಿ ಮೊತ್ತ ಬಿಡುಗಡೆ ಮಾಡಲು ಸಹ ಅ ಧಿಕಾರಿಗಳು ಹಣಕ್ಕೆ ಬೇಡಿಕೆ ಇಡುತ್ತಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಸರ್ಕಾರದ ಯೋಜನೆಗಳು ಅರ್ಹರಿಗೆ ತಲುಪಬೇಕು ಹಾಗೂ
ಯೋಜನೆಯಲ್ಲಿ ಉಂಟಾಗಿರುವ ಅವ್ಯವಹಾರಗಳ ಕುರಿತು ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ತನಿಖೆ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next