Advertisement

ಹಳ್ಳಿಗೆ ಹೋದವರಿಗೆ ಕೆಲಸ ಕೊಡುವಲ್ಲಿ ಯಶಸ್ವಿ

01:43 AM Feb 17, 2021 | Team Udayavani |

ಮಾರ್ಚ್‌ ಮೊದಲ ವಾರದಲ್ಲಿ ರಾಜ್ಯ ಬಜೆಟ್‌ ಮಂಡನೆಯಾಗಲಿದೆ. ಒಂದು ರೀತಿಯಲ್ಲಿ ಇದು ಮರುನಿರ್ಮಾಣದ ಬಜೆಟ್‌. ಜನಪ್ರಿಯ ಯೋಜನೆಗಳಿಗಿಂತ ಕೃಷಿ, ಆರೋಗ್ಯ, ಉದ್ಯೋಗ ಸೃಷ್ಟಿ, ಸಂಚಾರ- ಸಾರಿಗೆ ಸುಧಾರಣೆ, ಕೈಗಾರಿಕೆಗಳಿಗೆ ಪ್ರೋತ್ಸಾಹ, ವ್ಯಾಪಾರ- ವಾಣಿಜ್ಯ ಚಟುವಟಿಕೆಗೆ ಉತ್ತೇಜನ ಮತ್ತು ಅನಗತ್ಯ ವೆಚ್ಚ, ಸಂಪನ್ಮೂಲ ಸೋರಿಕೆ ತಡೆಯುವುದು ಬಜೆಟ್‌ನ ಆದ್ಯತೆಗಳಾಗಬೇಕಾಗಿದೆ.
ಇದು ಉದಯವಾಣಿ ಆಶಯವೂ ಹೌದು. ಗ್ರಾಮಾಭಿವೃದ್ಧಿ ಇಲಾಖೆಯ ಒಟ್ಟಾರೆ ವರದಿ ಇಲ್ಲಿದೆ.

Advertisement

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಪ್ರಸಕ್ತ ವರ್ಷ ರಾಜ್ಯ ಬಜೆಟ್‌ ಅನುದಾನದ ಶೇ.64 ರಷ್ಟು ವೆಚ್ಚ ಮಾಡಲು ಮಾತ್ರ ಸಾಧ್ಯವಾಗಿದೆ.

ಆದರೆ ಕೇಂದ್ರ ಪುರಸ್ಕೃತ ಯೋಜನೆಗಳಡಿ ಶೇ.81ರ ವರೆಗೂ ಗುರಿ ಮುಟ್ಟಿದೆ. ಕೊರೊನಾ ಹಿನ್ನೆಲೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧನೆಯಾಗಿಲ್ಲ. ನರೇಗಾ, ಸ್ವತ್ಛ ಭಾರತ ಅಭಿಯಾನ, ಮುಖ್ಯಮಂತ್ರಿ ಗ್ರಾಮ ವಿಕಾಸ, ಗ್ರಾಮೀಣ ನೀರು ಪೂರೈಕೆ, ಪ್ರಧಾನ ಮಂತ್ರಿ ಗ್ರಾಮ ಸಡಕ್‌, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಗಳಿಗೆ ಇಲಾಖೆ ಹೆಚ್ಚು ಆದ್ಯತೆ ನೀಡಿದೆ.

ನರೇಗಾದಡಿ ರಾಜ್ಯಕ್ಕೆ ಹಂಚಿಕೆಯಾ ಗಿದ್ದ 13 ಕೋಟಿ ಮಾನವ ದಿನಗಳ ಜತೆಗೆ 1.10 ಕೋಟಿ ಮಾನವ ದಿನ ಹೆಚ್ಚುವರಿಯಾಗಿ ಪಡೆಯುವ ಮೂಲಕ ಕೊರೊನಾ ಸಂಕಷ್ಟಕ್ಕೆ ಸಿಲುಕಿ ನಗರ ಬಿಟ್ಟು ಹಳ್ಳಿಗೆ ಮರಳಿದವರಿಗೆ ಕೆಲಸ ಕೊಡುವಲ್ಲಿ ಯಶಸ್ವಿಯಾಗಿದೆ.
ನರೇಗಾದಡಿ 44.86 ಲಕ್ಷ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದ್ದು, 8.34 ಲಕ್ಷ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಡಿಸೆಂಬರ್‌ ವರೆಗೆ 4234.19 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಶೇ.48.94ರಿಂದ 53.94ಕ್ಕೆ ಹೆಚ್ಚಿಸಿ 2.55 ಲಕ್ಷ ಮಹಿಳಾ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಕೆಲಸ ನೀಡಿರುವುದು ದೇಶದಲ್ಲೇ ದಾಖಲೆಯಾಗಿದೆ.

ಗ್ರಾಮೀಣ ಪ್ರದೇಶಗಳಲ್ಲೂ ನಗರ ಮಾದರಿಯ ಮೂಲಸೌಕರ್ಯ ಕಲ್ಪಿಸುವ “ರರ್ಬನ್‌’ ಯೋಜನೆಯಡಿ 2020-21ನೇ ಸಾಲಿನಲ್ಲಿ ಬೆಳಗಾವಿ, ಬೆಂಗಳೂರು, ರಾಯಚೂರು, ಬಳ್ಳಾರಿ, ಗದಗದಲ್ಲಿ ಎಂಟು ಕ್ಲಸ್ಟರ್‌ಗಳನ್ನು ರಚಿಸಿ ಕುಡಿಯುವ ನೀರು, ಬಸ್‌ ನಿಲ್ದಾಣ ಸೇರಿ 82 ಗ್ರಾಮಗಳಲ್ಲಿ 2,422 ಕಾಮಗಾರಿಗಳನ್ನು 165 ಕೋಟಿ ರೂ. ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ 60:40 ಅನುಪಾತದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದ್ದು ಮೊದಲ ಕಂತಿನ ಹಣ 49.5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

Advertisement

ಮನೆ ಮನೆಗೆ ಗಂಗೆ ಯೋಜನೆಯಡಿ ರಾಜ್ಯದ ಗ್ರಾಮೀಣ ಭಾಗದ ಪ್ರತೀ ಮನೆಗೆ 2023ರೊಳಗೆ ನಲ್ಲಿ ಮೂಲಕ ಕುಡಿಯುವ ನೀರು ಪೂರೈಕೆಗೆ ಯೋಜನೆ ರೂಪಿಸಲಾಗಿದ್ದು 8,384.52 ಕೋಟಿ ರೂ. ಅನುದಾನದಡಿ 23.57 ಲಕ್ಷ ಮನೆಗಳಿಗೆ ನೀರು ಒದಗಿಸುವ ಗುರಿ ಹೊಂದಿದ್ದು ಡಿಸೆಂಬರ್‌ ಅಂತ್ಯಕ್ಕೆ 2 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ.

ಆಗಲೇಬೇಕಾದ ಕೆಲಸ
5 ಲಕ್ಷ ವೈಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ತಲುಪುವುದು ಹಾಗೂ ರೈತರ ವೈಯಕ್ತಿಕ ಜಮೀನುಗಳಲ್ಲಿ ಮಳೆ ನೀರು ಸಂರಕ್ಷಣೆಗೆ 1 ಲಕ್ಷ ಕಂದಕ, ಬದು ನಿರ್ಮಾಣ, 67405 ಕೃಷಿ ಹೊಂಡ ನಿರ್ಮಾಣ.

ನಿರೀಕ್ಷಿತ ಯೋಜನೆಗಳು
– ಮನೆ ಮನೆಗೆ ಗಂಗೆ ಯೋಜನೆಯಡಿ 2021-22ನೇ ಸಾಲಿನಲ್ಲಿ 23.57 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಸುವುದು.
– ಗ್ರಾಮೀಣ ಭಾಗದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ ಗರಿಷ್ಠ 20 ಲಕ್ಷ ರೂ. 1538 ಗ್ರಾಮಪಂಚಾಯತ್‌ಗಳಿಗೆ ಸ್ವತ್ಛ ಭಾರತ್‌ ಮಿಷನ್‌ನಡಿ ಮಂಜೂರು ಮಾಡುವುದು.
– ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆ-3 ರಡಿ 5612 ಕಿ.ಮೀ. ರಸ್ತೆ ಅಭಿವೃದ್ಧಿ ಮಾಡುವುದು.
– ಅಂತರ್ಜಲ ಚೇತನ ಯೋಜನೆಯಡಿ ಅರಣ್ಯೀಕರಣ, ಕೃಷಿ ಮತ್ತು ತೋಟಗಾರಿಕೆ ಮೂಲಕ ಹಸುರು ಹೊದಿಕೆ ಪ್ರದೇಶ ಹೆಚ್ಚಿಸುವುದು.
– ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ ತ್ಯಾಜ್ಯ ನೀರು ನಿರ್ವಹಣೆಗೆ 3 ಲಕ್ಷ ಬಚ್ಚಲು ಗುಂಡಿ ನಿರ್ಮಾಣ ಮಾಡುವುದು. 5 ಲಕ್ಷ ವೈಯಕ್ತಿಕ ಶೌಚಾಲಯ ನಿರ್ಮಾಣ

ರಾಜ್ಯ ಬಜೆಟ್‌ ಅನುದಾನದ ಶೇ.64 ರಷ್ಟು ಪ್ರಗತಿ ಸಾಧಿಸ ಲಾಗಿದೆ. ಕೇಂದ್ರ ಅನುದಾನದಲ್ಲೂ ಶೇ.80 ರವರೆಗೂ ಸಾಧನೆ ಮಾಡ ಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳ ಪೂರ್ಣ ಗೊಳಿಸುವಿಕೆ ಹಾಗೂ ಹೊಸ ಯೋಜನೆಗಳ ಅನುಷ್ಟಾನಕ್ಕೆ ಕಾಲಮಿತಿ ನಿಗದಿಪಡಿಸಲಾ ಗುವುದು.

– ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next