ಮೈಸೂರು: ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ನಡೆಸುತ್ತಿದ್ದ ಪ್ರತಿಭಟನೆ ಹತ್ತಿಕ್ಕಲು ಕೇಂದ್ರದ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಬಲ ಪ್ರಯೋಗಿಸಿ ಲಾಠಿ ಪ್ರಹಾರ ಮಾಡಿಸಿದೆ ಎಂದು ಆರೋಪಿಸಿ ಮೈಸೂರು ವಿವಿ ಸಂಶೋಧಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಮಾನಸಗಂಗೋತ್ರಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಬಿಜೆಪಿ ಸರ್ಕಾರ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಿಸಿರುವುದು ಖಂಡನೀಯ.
ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರು, ಕಾರ್ಮಿಕರು, ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಿಸಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದೀಗ ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ಜೆಎನ್‌ಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ ಅವರ ಮೇಲೂ ಲಾಠಿ ಪ್ರಹಾರ ಮಾಡಿಸಿ ದಬ್ಟಾಳಿಕೆ ಮಾಡುತ್ತಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ವಾಧಿಕಾರಿ ಧೋರಣೆ ಎಂದು ಕಿಡಿಕಾರಿದರು.
ಬೇಡಿಕೆ ಈಡೇರಿಸಿ: ಜೆಎನ್‌ಯು ಹಾಸ್ಟೆಲ್ ಶುಲ್ಕ ಹೆಚ್ಚಳ ಕೈಬಿಡಬೇಕು. ಉನ್ನತ ಶಿಕ್ಷಣದವರೆಗೂ ಉಚಿತ ಶಿಕ್ಷಣ ನೀಡಬೇಕು. ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ಎಲ್ಲಾ ಮೊಕದ್ದಮೆ ಕೈಬಿಡಬೇಕು. ಇಲ್ಲದಿದ್ದಲ್ಲಿ ಕರ್ನಾಟಕದ ಎಲ್ಲಾ ಸಂಘಟನೆಗಳು ಸೇರಿ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ.
ಅಲ್ಲದೆ, ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮತ್ತು ಹಲ್ಲೆ ಮಾಡಿಸಿರುವ ಮೋದಿ ವಿರುದ್ಧ ನಿರಂತರವಾಗಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಶೋಧಕರ ಸಂಘದ ಗುರುಮೂರ್ತಿ, ವಿನಯ್, ಭಾಗ್ಯಶ್ರೀ, ಮಹೇಶ್ ಸೋಸಲೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.