ಹುಣಸೂರು: ಪ್ರಾದೇಶಿಕ ಅರಣ್ಯ ವಿಭಾಗ ಸೇರಿದಂತೆ ಮೈಸೂರು ಜಿಲ್ಲೆಯ ನಾಗರಹೊಳೆ ಮತ್ತು ಕೊಡಗಿನ ವಿವಿಧ ಆನೆ ಕ್ಯಾಂಪ್‌ಗ್ಳಿಂದ ಪಳಗಿಸಿರುವ ಎರಡು ಮರಿ ಸೇರಿದಂತೆ 9 ಆನೆಗಳು ದೂರದ ಉತ್ತರಕಾಂಡ್ ರಾಜ್ಯದ ಜಿಮ್‌ಕಾರ್ಬೇಟ್ ರಾಷ್ಟ್ರೀಯ ಉದ್ಯಾನದ ಸಿಬ್ಬಂದಿಗಳ ಪೆಟ್ರೋಲಿಂಗ್ (ಗಸ್ತು) ಕಾರ್ಯ ಕ್ಕಾಗಿ ಸೋಮವಾರ ತಡ ರಾತ್ರಿ ತೆರಳಿದವು.
ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ದೊಡ್ಡಹರವೆ ಕ್ಯಾಂಪ್‌ನಲ್ಲಿ ಆಶ್ರಯ ಪಡೆದಿದ್ದ ಹಾಸನದ ಆಲೂರು ಭಾಗದಲ್ಲಿ ಸೆರೆ ಹಿಡಿಯಲಾಗಿದ್ದ ಗಜರಾಜ (11ವರ್ಷ) ಮತ್ತು ಕೆಂಚಾಂಬ (22) ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದದ ಮತ್ತಿಗೋಡು ವಲಯದಿಂದ ತುಂಗಾ (16), ಈಕೆಯ ಎರಡು ವರ್ಷದ ಗಂಡು ಮರಿ ಕರ್ಣ(7), ಭೀಷ್ಮ(7) ಕೊಡಗಿನ ದುಬಾರೆಯ ಕಪಿಲಾ (33) ಈಕೆಯ ಎರಡು ವರ್ಷದ ಮರಿ ಶಿವಗಂಗೆ(16) ಸೇರಿದಂತೆ ಒಂಬತ್ತು ಆನೆಗಳನ್ನು ಸೋಮವಾರ ಮಧ್ಯರಾತ್ರಿ ಹುಣಸೂರಿನ ಕಲ್‌ಬೆಟ್ಟದ ಮರ ಸಂಗ್ರಹಣಾ ಕೇಂದ್ರದಿಂದ ಉತ್ತರಕಾಂಡ್‌ನತ್ತ ಆನೆಗಳ ಮಾವುತರು ಮತ್ತು ಕವಾಡಿಗಳೊಂದಿಗೆ ಪ್ರಯಾಣ ಬೆಳೆಸಿದವು.
12 ಚಕ್ರಗಳ ಟ್ರಕ್: ಪ್ರತಿ ಆನೆಯನ್ನು ದೊಡ್ಡ ದಾದ 12 ಚಕ್ರಗಳುಳ್ಳ ದೊಡ್ಡ ಲಾರಿಗಳ ಸುತ್ತ ಎತ್ತರದ ಹಲಗೆಗಳಿಂದ ಜೋಡಿಸಿ ಆನೆಗಳು ಕಾಣದಂತೆ ಮಾಡಲಾಗಿದೆ. ಆನೆಗಳು ಮಲ ಗಲು, ತಿರುಗಲು ಅವಕಾಶವಿದೆ. ಸುಮಾರು 5-6 ದಿನಗಳ ಪಯಣದಲ್ಲಿ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಆನೆಗಳನ್ನು ಹೊತೊಯ್ಯುವ ಲಾರಿಗಳನ್ನು ರಾತ್ರಿ ವೇಳೆ ಮಾತ್ರ ಗಂಟೆಗೆ 40 ಕಿ.ಮೀ. ವೇಗ ದಲ್ಲಿ ಓಡಿಸಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ.
ಕಾಡಿನ ರಕ್ಷಣೆಗೆ ಬಳಕೆ: ಉತ್ತರಕಾಂಡ್‌ನ ಜಿಮ್ ಕಾರ್ಬೇಟ್ ರಾಷ್ಟ್ರೀಯ ಉದ್ಯಾನ ದಲ್ಲಿ ಆನೆಗಳಿದ್ದರೂ ಸೆರೆಹಿಡಿಯುವ ವ್ಯವಸ್ಥೆ ಇಲ್ಲ. ಆದ್ದರಿಂದ ಕರ್ನಾಟಕ ಸರಕಾರದ ಒಪ್ಪಿಗೆಯೊಂದಿಗೆ ಆನೆಗಳನ್ನು ಕೊಂಡೊಯ್ಯ ಲಾಗುತ್ತಿದೆ. ಅಲ್ಲಿ ಕಾವಲು ಕಾಯಲು ಈ ಆನೆಗಳನ್ನು ಬಳಸಲಾಗುತ್ತದೆ ಎಂದು ಜಿಮ್‌ಕಾರ್ಬೇಟ್ ನ್ಯಾಷನಲ್ ಪಾರ್ಕ್‌ನ ಡಿಸಿಎಫ್ ಅಮಿತ್‌ಬರ್ಮಾ ತಿಳಿಸಿದರು.
ಇಬ್ಬರು ವೈದ್ಯರು, ಮೇವು: ಆನೆಗಳೊಂದಿಗೆ ಉತ್ತರ ಕಾಂಡ್ ಅರಣ್ಯ ಇಲಾಖೆಯ ಪಶು ವೈದ್ಯರಾದ ಡಾ.ದುಶ್ಯಂತ್ ಹಾಗೂ ಬನ್ನೇರುಘಟ್ಟದ ಡಾ.ಸುಜಯ್ ಪಯಣ ಬೆಳೆಸಿದ್ದಾರೆ. ಒಂದು ಪ್ರತ್ಯೇಕ ಲಾರಿಯಲ್ಲಿ ಆನೆಗಳಿಗೆ ಬೇಕಾದ ಮೇವು ಹಾಗೂ ನೀರಿಗಾಗಿ ದೊಡ್ಡ ಡ್ರಮ್‌ಗಳನ್ನು ಹಾಗೂ ನೀರು ತುಂಬಿಸಲು ಮಿನಿ ಮೋಟಾರ್ ವ್ಯವಸ್ಥೆ ಇದೆ. ಎಲ್ಲಾ ಆನೆಗಳ ಆರೋಗ್ಯ ಪರೀಕ್ಷಿಸಿದ ನಾಗರಹೊಳೆ ಪಶುವೈದ್ಯ ಡಾ. ಉಮಾ ಶಂಕರ್ ಹಾಗೂ ಅರಣ್ಯ ಸಿಬ್ಬಂದಿ ಟ್ರಕ್‌ಗೆ ಹತ್ತಿಸುವ ಕಾರ್ಯವನ್ನು ಯಶಸ್ವಿ ಯಾಗಿಸಿದರು.
ಉತ್ತರ ಕಾಂಡ್‌ಗೆ ಕೊಂಡೊ ಯ್ಯಲು ಸುಗಮವಾಗುವಂತೆ ಅಲ್ಲಿನ ಅರಣ್ಯ ಸಿಬ್ಬಂದಿ ತಿಂಗಳ ಹಿಂದೆಯೇ ಇಲ್ಲಿಗಾಗಮಿಸಿ ಆನೆಗಳೊಂದಿಗೆ ನಂಟು ಬೆಳೆಸಿದ್ದರು.
ಸ್ಥಳದಲ್ಲಿ ರಾಜ್ಯ ಆನೆ ಯೋಜನೆ ನಿರ್ದೇಶಕ ದಿಲೀಪ್ ಕುಮಾರ್‌ದಾಸ್, ಹುಣಸೂರು ಡಿಸಿಎಫ್ ಬಾಲಚಂದ್ರ, ಮಡಿಕೇರಿ ಡಿಸಿಎಫ್ ಸೂರ್ಯಸೇನ್, ಎಸಿಎಫ್ಗಳಾದ ಪ್ರಸನ್ನಕುಮಾರ್, ಶಾಂತಪ್ಪ ಹಾಜರಿದ್ದು ಬಿಳ್ಕೊಟ್ಟರು.