ಹುಬ್ಬಳ್ಳಿ: ವೃದ್ಧೆಯೊಬ್ಬರು ಮೈಸೂರು-ಧಾರವಾಡ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದಾಗ ರಾತ್ರಿ ವೇಳೆ ಕಳ್ಳರು ಅವರ ಲಗೇಜ್ ಬ್ಯಾಗ್‌ನಲ್ಲಿದ್ದ ಅಂದಾಜು 4.72 ಲಕ್ಷ ರೂ. ಮೌಲ್ಯದ 105 ಗ್ರಾಂ ಚಿನ್ನಾಭರಣವಿದ್ದ ವ್ಯಾನಿಟಿ ಬ್ಯಾಗ್ ಕಳವು ಮಾಡಿದ್ದಾರೆ.
ಮೈಸೂರು ಬನ್ನಿಮಂಟಪದ ಪ್ರೇಮಾ ಎಂಬುವರು ತಮ್ಮ ಮಗಳು, ಮೊಮ್ಮಕ್ಕಳೊಂದಿಗೆ ಮೈಸೂರಿನಿಂದ ಹುಬ್ಬಳ್ಳಿಗೆ ಮೇ 17ರಂದು ಆಗಮಿಸುತ್ತಿದ್ದಾಗ ತಡರಾತ್ರಿ ಮಲಗಿದ್ದಾರೆ.
18ರಂದು ಬೆಳಗ್ಗೆ ನಗರಕ್ಕೆ ಆಗಮಿಸಿ ವಿದ್ಯಾನಗರದಲ್ಲಿರುವ ಮೈದುನನ ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿದಾಗಲೇ ತಲಾ 30 ಗ್ರಾಂನ ಎರಡೆಲೆ ಅವಲಕ್ಕಿ ಸರ ಮತ್ತು ಎರಡು ಬಳೆಗಳು ಹಾಗೂ 45ಗ್ರಾಂನ ಮಾಂಗಲ್ಯ ಸರವಿದ್ದ ವ್ಯಾನಿಟಿ ಬ್ಯಾಗ್ ಕಳವು ಆಗಿರುವುದು ಗೊತ್ತಾಗಿದೆ. ಪ್ರೇಮಾ ಅವರ ದೂರಿನ ಮೇರೆಗೆ ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಕೆಟ್ ಬೆಟ್ಟಿಂಗ್-ಐವರ ಬಂಧನ: ಗೋಕುಲ ರಸ್ತೆಯ ಮಂಜುನಾಥ ನಗರ ಕ್ರಾಸ್, ಕೈಗಾರಿಕಾ ವಸಾಹತು 2ನೇ ಗೇಟ್ ಹಾಗೂ ದುರ್ಗದ ಬಯಲಿನಲ್ಲಿ ಶುಕ್ರವಾರ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿ, 13,280 ನಗದು, ಐದು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಗೋಕುಲ ರಸ್ತೆ ಪೊಲೀಸರು ಕೈಗಾರಿಕಾ ವಸಾಹತು ಬಳಿ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರನ್ನು ಬಂಧಿಸಿ, 1,800 ನಗದು, ಎರಡು ಮೊಬೈಲ್ ಹಾಗೂ ಮಂಜುನಾಥ ನಗರ ಕ್ರಾಸ್ ಬಳಿ ಆಡುತ್ತಿದ್ದ ಇಬ್ಬರನ್ನು ಪ್ರತ್ಯೇಕವಾಗಿ ಬಂಧಿಸಿ, ಅವರಿಂದ ಎರಡು ಮೊಬೈಲ್, 1,480 ನಗದು ವಶಪಡಿಸಿಕೊಂಡಿದ್ದಾರೆ.
ಶಹರ ಪೊಲೀಸರು ದುರ್ಗದ ಬಯಲಿನಲ್ಲಿ ಬೆಟ್ಟಿಂಗ್ ಆಡುತ್ತಿದ್ದ ಒಬ್ಬನನ್ನು ಬಂಧಿಸಿ, 10 ಸಾವಿರ ನಗದು, ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಪ್ರತ್ಯೇಕವಾಗಿ ಗೋಕುಲ ರಸ್ತೆ ಠಾಣೆಯಲ್ಲಿ ಮೂರು ಹಾಗೂ ಶಹರ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.