ಹೊಸದಿಲ್ಲಿ: ಇದೇ 14ರಿಂದ ಆರಂಭಗೊಳ್ಳಲಿರುವ ಮುಂಗಾರು ಅಧಿವೇಶನದ ಮೊದಲ ದಿನವೇ ರಾಜ್ಯಸಭೆಯ ಉಪಾಸಭಾಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಆಡಳಿತಾರೂಢ ಎನ್‌ಡಿಎ ಒಕ್ಕೂಟದಿಂದ ಜೆಡಿಯುನ ಹರಿವಂಶ್ ನಾರಾಯಣ್ ಸಿಂಗ್ ಕಣಕ್ಕಿಳಿದಿದ್ದರೆ, ವಿಪಕ್ಷಗಳ ಒಕ್ಕೂಟದಿಂದ ಆರ್‌ಜೆಡಿಯ ಮನೋಜ್ ಝಾ ಅವರನ್ನು ಎದುರಾಳಿಯನ್ನಾಗಿಸಲಾಗಿದೆ. ಹರಿವಂಶ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದರ ಹಿಂದೆ ಬಿಜೆಪಿಯ ಕೆಲವು ಲೆಕ್ಕಾಚಾರ ಅಡಗಿವೆ ಎನ್ನಲಾಗಿದೆ.
ಓಲೈಕೆ ರಾಜಕಾರಣ?: ಹರಿವಂಶ್ ಅವರು ಬಿಹಾರದ ರಜಪೂತ ಸಮುದಾಯದವರು. ಸದ್ಯದಲ್ಲೇ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಹಾಗಾಗಿ, ಅಲ್ಲಿನ ರಜಪೂತ್ ಸಮುದಾಯವನ್ನು ಓಲೈಸುವ ತಂತ್ರಗಾರಿಕೆಯ ಒಂದು ಭಾಗವಾಗಿ ಹರಿವಂಶ್ ಅವರನ್ನು ಬಿಜೆಪಿ ಚುನಾವಣಾ ಕಣಕ್ಕೆ ಇಳಿಸಿದೆ ಎಂದು ಹೇಳಲಾಗಿದೆ.
140 ಮತಗಳ ನಿರೀಕ್ಷೆಯಲ್ಲಿ: ಈಗಾಗಲೇ ರಾಜ್ಯಸಭೆಯಲ್ಲಿ 113 ಸದಸ್ಯ ಬಲ ಹೊಂದಿರುವ ಎನ್‌ಡಿಎಗೆ ಯಾವುದೇ ಒಕ್ಕೂಟಕ್ಕೆ ಸೇರದ ಪಕ್ಷಗಳಿಂದಲೂ ಬೆಂಬಲ ಸಿಗುವ ಸಾಧ್ಯತೆಯಿದೆ. ಹಾಗಾಗಿ, ಚುನಾವಣೆಯಲ್ಲಿ 140ಕ್ಕೂ ಅಧಿಕ ಮತಗಳನ್ನು ಹರಿವಂಶ್ ಅವರು ಪಡೆಯುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದೆ.
23 ಮಸೂದೆ ಮಂಡನೆ: ಈ ನಡುವೆ, ಸೋಮವಾರ ಆರಂಭವಾಗುವ ಸಂಸತ್ ಅಧಿವೇಶನದಲ್ಲಿ ಮಂಡಿಸಲು 23 ಹೊಸ ವಿಧೇಯಕಗಳನ್ನು ಸರಕಾರ ಪಟ್ಟಿ ಮಾಡಿದೆ. ಆರೋಗ್ಯಸೇವಾ ಸಿಬ್ಬಂದಿ ಮೇಲಿನ ಹಿಂಸೆ ತಡೆಯುವುದಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆ, ಒಂದು ವರ್ಷ ಕಾಲ ಸಂಸದರ ವೇತನದಲ್ಲಿ ಶೇ.30 ಕಡಿತ ಸುಗ್ರೀವಾಜ್ಞೆ ಸೇರಿದಂತೆ 11 ಸುಗ್ರೀವಾಜ್ಞೆಗಳೂ ಇದರಲ್ಲಿ ಸೇರಿವೆ.
16 ಸಾವಿರ ಕೋಟಿಯ ಯೋಜನೆಗಳಿಗೆ ಚಾಲನೆ
ಮುಂದಿನ 10 ದಿನಗಳಲ್ಲಿ ಪ್ರಧಾನಿ ಮೋದಿ ಬಿಹಾರದಲ್ಲಿ 16 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಎಲ್‌ಪಿಜಿ ಪೈಪ್‌ಲೈನ್, ತ್ಯಾಜ್ಯ ಸಂಸ್ಕರಣಾ ಸ್ಥಾವರ, ನೀರು ಪೂರೈಕೆ ಯೋಜನೆ, ಹೊಸ ರೈಲ್ವೆ ಲೈನ್, ರೈಲ್ವೆ ಸೇತುವೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳಿಗೆ ಅವರು ಚಾಲನೆ ನೀಡಲಿದ್ದಾರೆ.