Advertisement

JDS; ಕೇಸರಿ ಬಣ್ಣದ ಮೇಲೆ ಅಸಹನೆ, ಸಂಕುಚಿತ ಭಾವನೆ ಏಕೆ: ಎಚ್ ಡಿಕೆ ಪ್ರಶ್ನೆ

05:48 PM Jan 30, 2024 | Team Udayavani |

ಬೆಂಗಳೂರು: ಕೇಸರಿ ಬಣ್ಣದ ಮೇಲೆ ಅಸಹನೆ, ಸಂಕುಚಿತ ಭಾವನೆ ಏಕೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.

Advertisement

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ನಡೆದ ಹನುಮಧ್ವಜ ಇಳಿಸಿದ ಘಟನೆಯ ವಿಷಯದಲ್ಲಿ ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

”ಕೇಸರಿ ಶಾಲು ಧರಿಸುವುದು ಮಹಾ ಅಪರಾಧವೇ? ರಾಷ್ಟ್ರ ಧ್ವಜದಲ್ಲಿ ಯಾವ ಬಣ್ಣಗಳು ಇವೆ ಎಂದು ಕಾಂಗ್ರೆಸ್ ನವರಿಗೆ ತಿಳಿದಿಲ್ಲವೇ? ರಾಷ್ಟ್ರ ಧ್ವಜದಿಂದ ಕೇಸರಿ ಬಣ್ಣ ತೆಗೆದರೆ ಅರ್ಥವೇನು ಉಳಿಯುತ್ತದೆ” ಎಂದು ಪ್ರಶ್ನಿಸಿದರು.

”ನಾನು ದಲಿತ ಬಂಧುಗಳು ಕರೆದಾಗ ಕಾರ್ಯಕ್ರಮಕ್ಕೆ ಹೋಗಿ ನೀಲಿ ಶಾಲನ್ನೂ ಹಾಕಿದ್ದೇನೆ, ಇದು ಅವರ ಕಣ್ಣಿಗೆ ಯಾಕೆ ಕಾಣಲಿಲ್ಲ” ಎಂದು ಪ್ರಶ್ನಿಸಿದರು. ”ನಾನು ಅಭಿಮಾನಿಗಳು, ಬೆಂಬಲಿಗರು ಒತ್ತಾಯ ಮಾಡಿದ್ದಕ್ಕೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ” ಎಂದು ಹೇಳಿದರು.

“ಕಾಂಗ್ರೆಸ್ ತನ್ನ ಚುನಾವಣ ಭರವಸೆಗಳ ಭಾಗವಾಗಿ ಪಕ್ಷವು ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳು ಏನಾಯಿತು ಎಂಬುದರ ಕುರಿತು ಮಾಹಿತಿಯನ್ನು ನೀಡಬೇಕು. ಬಿಜೆಪಿ ಅಥವಾ ನರೇಂದ್ರ ಮೋದಿ ಜಿ ಅವರನ್ನು ದೂಷಿಸುವುದನ್ನು ನಿಲ್ಲಿಸಬೇಕು” ಎಂದರು.

Advertisement

ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಡ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಜಂಟಿ ಪ್ರತಿಭಟನೆಯಲ್ಲಿ ಕೇಸರಿ ಶಾಲು ಹಾಕಿ ಕುಮಾರಸ್ವಾಮಿ ಅವರು ಭಾಗವಹಿಸಿದ್ದರು. ಈ ಬಗ್ಗೆ ಕಾಂಗ್ರೆಸ್ ನಾಯಕರು ಸೇರಿ ಹಲವರು ಟೀಕಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next