Advertisement

ಲೋಕಸಭೆ ಚುನಾವಣೆಗೆ ಜೆಡಿಎಸ್‌ ತಂತ್ರ

12:30 AM Jan 10, 2019 | |

ಬೆಂಗಳೂರು:ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡು ಲೋಕಸಭೆ ಚುನಾವಣೆ ಎದುರಿಸಲು ಮುಂದಾಗಿರುವ ಜೆಡಿಎಸ್‌, ಕ್ಷೇತ್ರಾವಾರು ಸ್ಥಿತಿಗತಿ ಅರಿಯಲು ಸಮೀಕ್ಷೆ ನಡೆಸಲು ತೀರ್ಮಾನಿಸಿದೆ.

Advertisement

ರಾಜ್ಯದ 28 ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿದ್ದು, ಆ ವರದಿ ಬಂದ ನಂತರ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರ ಮುಂದಿಟ್ಟು ಕ್ಷೇತ್ರಗಳಿಗೆ ಬೇಡಿಕೆ ಇಡಲು ನಿರ್ಧರಿಸಲಾಗಿದೆ.

ಜೆಡಿಎಸ್‌ ಗೆಲ್ಲುವ ಅವಕಾಶ ಇರುವ ಕ್ಷೇತ್ರಗಳು, ಕಾಂಗ್ರೆಸ್‌ ಗೆಲ್ಲಲು ಅವಕಾಶ ಇರುವ ಕ್ಷೇತ್ರಗಳು. ಅದಕ್ಕೆ ಕಾರಣಗಳು, ಸ್ಥಳೀಯ ರಾಜಕೀಯ ಪರಿಸ್ಥಿತಿ, ಜಾತಿ ಹಾಗೂ ಸಮುದಾಯದ ಲೆಕ್ಕಾಚಾರ, ಸಮ್ಮಿಶ್ರ ಸರ್ಕಾರದ ಬಗ್ಗೆ ಮತದಾರರ ಅಭಿಪ್ರಾಯ ಹೇಗಿದೆ ಎಂಬ ಅಂಶವೂ ಸಮೀಕ್ಷೆ  ಒಳಗೊಂಡಿರುತ್ತದೆ. ಈ ಮಾಸಾಂತ್ಯದೊಳಗೆ  ಸಮೀಕ್ಷಾ ವರದಿ ಕೈ ಸೇರಲಿದೆ ಎಂದು ಮೂಲಗಳು ತಿಳಿಸಿವೆ.

ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ,ಬಿಜಾಪುರ, ಬೀದರ್‌, ಬೆಂಗಳೂರು ಉತ್ತರ ಕ್ಷೇತ್ರ ಬಿಟ್ಟುಕೊಡಬೇಕು ಎಂಬುದು ಜೆಡಿಎಸ್‌ ಬೇಡಿಕೆಯಾಗಿದೆ.  ಈ ಪೈಕಿ  ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಹಾಲಿ ಕಾಂಗ್ರೆಸ್‌ ಸಂಸದರು ಇರುವುದರಿಂದ ಬಿಟ್ಟುಕೊಡಲು ಸಾಧ್ಯವಿಲ್ಲ ಎಂಬುದು ಕಾಂಗ್ರೆಸ್‌ ವಾದ. ಮೈಸೂರು ಕ್ಷೇತ್ರವು ಸಿದ್ದರಾಮಯ್ಯ ಅವರ ತವರು ಕ್ಷೇತ್ರ ಆಗಿರುವುದರಿಂದ ಅವರು ಒಪ್ಪದಿರಬಹುದು ಎಂಬ ಮಾತುಗಳು  ಇವೆ.

ಆದರೆ, ಸ್ಥಳೀಯವಾಗಿ ಪರಿಸ್ಥಿತಿ ಭಿನ್ನವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಮತಗಳಿಕೆ, ಹಾಲಿ ಸಂಸದರ ವಿರುದ್ಧದ ವಿರೋಧಿ ಅಲೆ, ಜಾತಿವಾರು ಪ್ರಾಬಲ್ಯದ ಆಧಾರದ ಮೇಲೆ ಜೆಡಿಎಸ್‌ಗೆ  ಈ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶ ಇದೆ ಎಂಬುದನ್ನು ಸಾಬೀತುಪಡಿಸಲು ಜೆಡಿಎಸ್‌ ಸಮೀಕ್ಷೆ ಮೊರೆಹೋಗಿದ್ದು ವಾಸ್ತವಾಂಶದ ಬಗ್ಗೆ ಸಮೀಕ್ಷೆ ನಡೆಸಿ ಕಾಂಗ್ರೆಸ್‌ ನಾಯಕರ ಮುಂದಿಡಲು ಮುಂದಾಗಿದೆ.

Advertisement

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಡಿ ಯಾರೇ ಗೆದ್ದರೂ ಅದು ಮಹಾಘಟಬಂಧನ್‌ಗೆ ಬಲ ಬರುತ್ತದೆ. ಕಾಂಗ್ರೆಸ್‌-ಜೆಡಿಎಸ್‌ ಒಟ್ಟುಗೂಡಿದರೆ ಬಿಜೆಪಿ ವಶದಲ್ಲಿರುವ ಮೈಸೂರು, ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ, ಬೆಳಗಾವಿ, ಬಿಜಾಪುರ, ಬೀದರ್‌, ಶಿವಮೊಗ್ಗ ಕ್ಷೇತ್ರಗಳನ್ನು ಗೆಲ್ಲಬಹುದು. ಆದರೆ, ಸ್ಥಳೀಯ ಶಕ್ತಿ ಹಾಗೂ ಓಟ್‌ಬ್ಯಾಂಕ್‌ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿ ಹಾಕಬೇಕು. ಎರಡೂ ಪಕ್ಷಗಳ ಪೈಕಿ ಯಾವ ಪಕ್ಷ ಗೆಲ್ಲುವ ಸಾಧ್ಯತೆ ಹೆಚ್ಚಾಗಿರುತ್ತದೆಯೋ ಆ ಪಕ್ಷಕ್ಕೆ ಬಿಟ್ಟುಕೊಡಬೇಕು. ಈ ವಿಚಾರದಲ್ಲಿ ಪ್ರತಿಷ್ಠೆ ಮಾಡಬಾರದು.

ಕರ್ನಾಟಕದಿಂದ ಮಹಾಘಟ್‌ಬಂಧನ್‌ಗೆ 20 ಕ್ಷೇತ್ರಗಳ ಟಾರ್ಗೆಟ್‌ ಹಾಕಿಕೊಳ್ಳಲಾಗಿದ್ದು ಜೆಡಿಎಸ್‌ 7, ಕಾಂಗ್ರೆಸ್‌ 13 ಕ್ಷೇತ್ರ ಗೆಲ್ಲುವ ಅವಕಾಶ ಇದೆ. ಆದರೆ,  ಎರಡೂ ಪಕ್ಷಗಳಲ್ಲಿ ವ್ಯತ್ಯಾಸವಾದರೆ ಒಟ್ಟಾರೆ 15 ದಾಟುವುದು ಕಷ್ಟವಾಗಬಹುದು. ಅಪಸ್ವರಗಳು ಬಂದರೆ ಬಿಜೆಪಿ ಮೇಲುಗೈ ಸಾಧಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರಿಗೂ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಗೆಲ್ಲುವ ಅವಕಾಶ
ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕಳೆದ ಬಾರಿ ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಸ್ಪರ್ಧೆ ಮಾಡಿದ್ದರಿಂದ ಕಾಂಗ್ರೆಸ್‌ ಗೆಲುವು ಸಾಧಿಸಿತಾದರೂ ಇದೀಗ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾದರೆ ಮತ್ತೆ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಹೇಳಲಾಗದು. ಸ್ಥಳೀಯವಾಗಿ ಪರಿಸ್ಥಿತಿ ಬೇರೆಯೇ ಇದೆ. ಇಲ್ಲಿ ಜೆಡಿಎಸ್‌ ಅಭ್ಯರ್ಥಿ ಮೈತ್ರಿಕೂಟದಡಿ ಸ್ಪರ್ಧೆ ಮಾಡಿದರೆ ಗೆಲ್ಲುವ ಅವಕಾಶ ಜಾಸ್ತಿಯಿದೆ. ಅದೇ ರೀತಿ ಬೆಂಗಳೂರು ಉತ್ತರ, ಶಿವಮೊಗ್ಗ, ಮೈಸೂರು ಕ್ಷೇತ್ರದಲ್ಲೂ ಜೆಡಿಎಸ್‌ ಅಭ್ಯರ್ಥಿ ಕಣಕ್ಕಿಳಿದರೆ ಗೆಲ್ಲಬಹುದು. ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ, ಬೆಳಗಾವಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶ ಇದೆ ಎಂಬುದು ಈಗಿನ ಲೆಕ್ಕಾಚಾರ ಎನ್ನಲಾಗಿದೆ.

ಬಿಜೆಪಿ ಮಣಿಸಲು ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ ಪೂರ್ಣ ಮನಸ್ಸಿನಿಂದ ಹೋರಾಟ ನಡೆಸಬೇಕು. ಮೈತ್ರಿ ಎಂದರೆ ಕೊಟ್ಟು ತೆಗೆದುಕೊಳ್ಳುವುದು ಇದ್ದೇ ಇರುತ್ತದೆ. ಇದರಲ್ಲಿ ಯಾರೂ ಹೆಚ್ಚು ಅಥವಾ ಕಡಿಮೆ ಎಂದು ಭಾವಿಸಬಾರದು. ಯಾವ್ಯಾವ ಕ್ಷೇತ್ರಗಳಲ್ಲಿ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ನಮ್ಮದೇ ಆದ ಮೂಲಗಳಿಂದ ಮಾಹಿತಿ ಸಂಗ್ರಹಿಸಲಾಗುವುದು.
– ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next