ಬೆಳಗಾವಿ: ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ ಒಕ್ಕೂಟಕ್ಕೆ ಹೀನಾಯ ಸೋಲಾದ ಬೆನ್ನಲ್ಲೇ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮತಯಂತ್ರಗಳ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ.
ಇವಿಎಂನಲ್ಲೂ ಹೊಂದಾಣಿಕೆ ನಡೆಯುತ್ತಿದೆ. ಇವಿಎಂ ಮಷಿನ್ ಇರುವವರೆಗೂ ಈ ರೀತಿ ಸಮಸ್ಯೆ ಎಲ್ಲ ಕಡೆ ಇದೇ ಇರುತ್ತದೆ. ಇವಿಎಂ ಬಗ್ಗೆ ಸಾಕಷ್ಟು ಅನುಮಾನವಿದೆ. ಇದೇ ಕಾರಣದಿಂದ ಅನೇಕ ಕಡೆಗಳಲ್ಲಿ ಇವಿಎಂ ಬಗ್ಗೆಯೇ ಚರ್ಚೆ ಆಗುತ್ತಿದೆ. ಇವಿಎಂ ವ್ಯವಸ್ಥೆಯಲ್ಲಿ ಒಂದು ಕಡೆ ಕೊಟ್ಟು ಇನ್ನೊಂದು ಕಡೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಸಚಿವ ಸತೀಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದರು.
ಈ ಹಿಂದೆ ನಮಗೆ ಜಮ್ಮು ಮತ್ತು ಕಾಶ್ಮೀರ ಕೊಟ್ಟರು. ಹರಿಯಾಣವನ್ನು ತೆಗೆದುಕೊಂಡರು. ಈಗ ಜಾರ್ಖಂಡ್ ಕೊಟ್ಟು ಮಹಾರಾಷ್ಟ್ರ ಕಸಿದುಕೊಂಡರು. ಈ ರೀತಿ ಗೀವ್ ಆಂಡ್ ಟೇಕ್ ಪಾಲಿಸಿ ಮಾಡುತ್ತಿದ್ದಾರೆ. ಅವರಿಗೆ ಬೇಕಾದದ್ದನ್ನು ತೆಗೆದುಕೊಳ್ಳುತ್ತಾರೆ, ಬೇಡದ್ದನ್ನು ಬಿಡುತ್ತಾರೆ. ಹೀಗಾಗಿ ಇವಿಎಂ ದಲ್ಲಿ ಸಹ ಹೊಂದಾಣಿಕೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ಅಹಿಂದ ಮತಗಳು ಮುಖ್ಯ
ಶಿಗ್ಗಾವಿ ಉಪ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಅಹಿಂದ ಮತಗಳನ್ನು ಮೊದಲು ಗಟ್ಟಿಗೊಳಿಸಬೇಕು. ಅಹಿಂದ ಮತಗಳು ಕಾಂಗ್ರೆಸ್ ಪಕ್ಷದ ಮೂಲ ಬೇರು. ಇದು ಶಿಗ್ಗಾವಿ ಉಪ ಚುನಾವಣೆಯಲ್ಲಿ ಸಾಬೀತಾಗಿದೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಪ್ರತಿಶತ 70ರಷ್ಟು ಅಹಿಂದ ಮತಗಳು ಚದುರಿ ಹೋಗುತ್ತಿದ್ದವು. ಇದು ಬಸವರಾಜ ಬೊಮ್ಮಾಯಿ ಅವರ ಗೆಲುವಿಗೆ ಕಾರಣವಾಗಿತ್ತು. ಈ ಬಾರಿ ಅಹಿಂದ ಮತಗಳು ಚದುರಿ ಹೋಗಲಿಲ್ಲ. ಶೇಕಡಾ 70 ರಷ್ಟು ಮತಗಳು ನಮಗೆ ಬಂದವು. ಈ ಹಿಂದೆ ಶಿಗ್ಗಾವಿ ಕ್ಷೇತ್ರದಲ್ಲಿ ಹಿಂದೂ ಮತ್ತು ಮುಸ್ಲಿಂ ಭಾವನೆಯ ಮೇಲೆ ಚುನಾವಣೆ ನಡೆಯುತ್ತ ಬಂದಿತ್ತು. ಈ ಬಾರಿ ತಾವು ಶ್ರೀನಿವಾಸ ಮಾನೆ ಸೇರಿದಂತೆ ಪ್ರಮುಖ ನಾಯಕರು ಮುಂಚೂಣಿಗೆ ಬಂದಿದ್ದರಿಂದ ಹಿಂದೂ ಮುಸ್ಲಿಮ್ ಭಾವನೆ ದೂರವಾಯಿತು ಎಂದರು.
ಅಹಿಂದ ಈ ಚುನಾವಣೆಯಲ್ಲಿ ಬಹಳ ಪರಿಣಾಮ ಬೀರಿದೆ. ಇದರ ಜೊತೆಗೆ ಅಭಿವೃದ್ಧಿ ಕಾರ್ಯಕ್ರಮ ಗ್ಯಾರಂಟಿ ಯೋಜನೆಗಳು ನಮ್ಮ ನೆರವಿಗೆ ಬಂದಿವೆ. ಶಿಗ್ಗಾವಿ ಕ್ಷೇತ್ರದ ಚುನಾವಣೆ ನಾಯಕತ್ವ ನನ್ನ ಹೆಗಲಿಗೆ ಬಿದ್ದಿತ್ತು. ಹೀಗಾಗಿ ನಾನು ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಮಾಡಿದಂತೆ ಇಲ್ಲಿಯೂ ನನ್ನದೇ ಆದ ಕಾರ್ಯತಂತ್ರ ರೂಪಿಸಿದೆ. ಅಹಿಂದ ವರ್ಗದ ಮತಗಳು ಚದುರಿ ಹೋಗದಂತೆ ನೋಡಿಕೊಂಡೆ. ಈ ಫಲಿತಾಂಶವನ್ನು ಕಾಂಗ್ರೆಸ್ ಎಲ್ಲ ಕ್ಷೇತ್ರಗಳಿಗೆ ಮಾದರಿ ಮಾಡಿಕೊಳ್ಳಬೇಕು. ನಾವು ಅಧಿಕಾರಕ್ಕೆ ಬರಬೇಕಾದರೆ ಅಹಿಂದ ಗಟ್ಟಿ ಮಾಡಬೇಕು. ಈ ಗೆಲುವಿನಿಂದ ನನಗೆ ಡಬಲ್ ಪ್ರಮೋಷನ್ ಸಿಕ್ಕಿದೆ ಎಂದರು.
ಮುಖ್ಯಮಂತ್ರಿಯಾಗುವೆ
ಈ ಉಪಚುನಾವಣೆ ಫಲಿತಾಂಶದ ನಂತರ ಮುಖ್ಯಮಂತ್ರಿ ಇನ್ನಷ್ಟು ಬಲವಾಗಿದ್ದಾರೆ. ಅವರ ಬದಲಾವಣೆ ಪ್ರಶ್ನೆಯೇ ಇಲ್ಲ. ನನಗೆ ಮುಖ್ಯಮಂತ್ರಿ ಸ್ಥಾನದ ಮೇಲೆ ಈಗ ಕಣ್ಣಿಲ್ಲ. ನನ್ನ ಗುರಿ ಏನಿದ್ದರೂ 2028 ರ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗುವುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು.