ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಕೈಗೊಂಡಿದ್ದ “ಪಂಚರತ್ನ ರಥಯಾತ್ರೆ’ ಮಳೆ ಹಿನ್ನೆಲೆಯಲ್ಲಿ ಒಂದು ವಾರದ ಮಟ್ಟಿಗೆ ಮುಂದೂಡಿಕೆಯಾಗಿದೆ.
ಇತಿಹಾಸ ಪ್ರಸಿದ್ಧ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೂಡುಮಲೆ ಮಹಾಗಣಪತಿ ದೇವಾಲಯದಲ್ಲಿ ಪಂಚರತ್ನ ಯಾತ್ರೆ ಪ್ರಯುಕ್ತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಹಿತ ಎಲ್ಲ ನಾಯಕರು ವಿಶೇಷ ಪೂಜೆ ಹಾಗೂ ಹೋಮ ನಡೆಸಿ ಯಾತ್ರೆಗೆ ಸಜ್ಜಾದರಾದರೂ ದಿಢೀರ್ ಎದುರಾದ ಮಳೆ ಹಿನ್ನೆಲೆಯಲ್ಲಿ ಯಾತ್ರೆ ಮುಂದೂಡುವುದಾಗಿ ಪ್ರಕಟಿಸಲಾಯಿತು.
ಶೀಘ್ರವೇ ಮರು ಆರಂಭದ ದಿನಾಂಕ ಪ್ರಕಟಿಸಲಾಗುವುದು. ಮುಳಬಾಗಿಲಿನಿಂದಲೇ ಯಾತ್ರೆ ಪುನಾರಂಭ ಮಾಡಲಾಗುವುದು ಎಂದು ಪೂಜೆಯ ಅನಂತರ ಎಚ್.ಡಿ. ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.
ಬೆಳಗ್ಗೆಯೇ ಮಾಜಿ ಪ್ರಧಾನಿ ದೇವೇಗೌಡರು ಸೇರಿ ನಾವೆಲ್ಲ ಪೂಜೆ ಸಲ್ಲಿಸಿ ಚಾಲನೆ ನೀಡಿದೆವಾದರೂ ಇನ್ನೂ ನಾಲ್ಕೈದು ದಿನ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಬೃಹತ್ ಸಮಾವೇಶ ರಥಯಾತ್ರೆ ಹಾಗೂ ಗ್ರಾಮ ವಾಸ್ತವ್ಯವನ್ನು ಒಂದು ವಾರ ಮುಂದಕ್ಕೆ ಹಾಕಲಾಗಿದೆ ಎಂದು ತಿಳಿಸಿದರು.
ರಥಯಾತ್ರೆಯ ಹಿನ್ನೆಲೆಯಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ಮತ್ತವರ ಭಾರತ ರಾಷ್ಟ್ರೀಯ ಸಮಿತಿ ಪಕ್ಷದ ಪ್ರತಿನಿಧಿಯಾಗಿ ಶಾಸಕ ರಾಜೇಂದರ್ ರೆಡ್ಡಿ ಆಗಮಿಸಿದ್ದರು. ಯಾತ್ರೆ ಹಿನ್ನೆಲೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಅಪಾರ ಕಾರ್ಯಕರ್ತರು ಜಮಾಯಿಸಿದ್ದರು. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಯುವ ಘಟಕದ ಅಧ್ಯಕ್ಷ ನಿಖೀಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಶಾಸಕರು, ಮುಖಂಡರು ಹಾಜರಿದ್ದರು.