ಕೆಜಿಎಫ್: ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆಯಾಗುತ್ತಿರುವುದಕ್ಕೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದೇ ಸಾಕ್ಷಿ ಎಂದು ಯುವ ಮುಖಂಡ ಕಾರ್ತೀಕ್ ಭಕ್ತವತ್ಸಲಂ ಹೇಳಿದರು.
ನಗರದ ಎಸ್.ಎಸ್.ಕಲ್ಯಾಣ ಮಂಟಪದಲ್ಲಿ ಭಾನುವಾರ ಜೆಡಿಎಸ್ ಮುಖಂಡ ಪಿ.ದಯಾನಂದ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತಮಗೆ ಪಕ್ಷದ ವರಿಷ್ಠರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಇದ್ದಂತೆ, ಕೆಜಿಎಫ್ ಕ್ಷೇತ್ರದಲ್ಲಿ ನನಗೆ ಮತದಾರರು ಹಾಗೂ ಕಾರ್ಯಕರ್ತರು ಹೈಕಮಾಂಡ್.
ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನೆ ಮಾಡಿಕೊಂಡು ಬಂದಿದ್ದ ನಮ್ಮ ತಂದೆ ದಿ.ಭಕ್ತವತ್ಸಲಂ ಅವರ ಹಾದಿಯಲ್ಲಿ ಮುನ್ನಡೆಯಲು ಕಾರ್ಯಕರ್ತರು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಮಾತನಾಡಿದ ಚಿತ್ರಾ ಭಕ್ತವತ್ಸಲಂ, ಮುಂಬರುವ ನಗರಸಭೆ ಚುನಾವಣೆಯಲ್ಲಿ 35 ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಲಿದ್ದು,
ಅವರನ್ನು ಮತದಾರರು ಆಯ್ಕೆ ಮಾಡುವ ಮೂಲಕ ನಗರದಲ್ಲಿ ಹೆಚ್ಚು ಅಭಿವೃದ್ಧಿ ಮಾಡಲು ಸಹಕಾರಿಯಾಗುತ್ತದೆ ಎಂದರು. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಈಗ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸುವುದು ಖಚಿತ ಎಂದರು.
ಉರಿಗಾಂಪೇಟೆ, ಶ್ರೀರಾಮನಗರ, ಇ.ಟಿ.ವಾರ್ಡ್, ಬೌರಿಲಾಲ್‌ಪೇಟೆಯ ಯುವಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮುಖಂಡರಾದ ಅಯ್ಯಪ್ಪ, ಕೃಷ್ಣಾರೆಡ್ಡಿ, ಜಾನ್ಸನ್, ನಾಮದೇವ್, ಪ್ರಕಾಶ್, ಆನಂದ್‌ರಾಜ್, ಸುಡರ್, ದಾಡಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.