Advertisement

ಜೆಡಿಎಸ್‌: ಕಿಂಗ್‌ ಮೇಕರ್‌ ಆಸೆ ಈಡೇರಿಕೆಗೆ ತಂತ್ರ

10:38 PM Nov 13, 2019 | Lakshmi GovindaRaju |

ಬೆಂಗಳೂರು: ಉಪ ಚುನಾವಣೆ ಮುಂದೂಡಿಕೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜೆಡಿಎಸ್‌ಗೆ ಸುಪ್ರೀಂಕೋರ್ಟ್‌ ತೀರ್ಪು ಹಿನ್ನೆಲೆಯಲ್ಲಿ ಮೈ ಕೊಡವಿ ಅಖಾಡಕ್ಕೆ ಇಳಿಯುವ ಅನಿವಾರ್ಯತೆ ಎದುರಾಗಿದೆ. ಐದಾರು ಕ್ಷೇತ್ರ ಹೊರತುಪಡಿಸಿ 15 ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಇದ್ದರೂ ತಮ್ಮ ಅಸ್ತಿತ್ವ ಸಾಬೀತು ಪಡಿಸಲು “ಶ್ರಮ’ ಹಾಕಲೇಬೇಕಿದೆ. ಜತೆಗೆ, ಉಪ ಚುನಾವಣೆಯಲ್ಲಿ ಬಿಜೆಪಿ ಕಡಿಮೆ ಸ್ಥಾನ ಗೆಲ್ಲುವಂತೆ ನೋಡಿಕೊಂಡು ಫ‌ಲಿತಾಂಶ ನಂತರದ ವಿದ್ಯಮಾನಗಳಲ್ಲಿ “ಕಿಂಗ್‌ ಮೇಕರ್‌’ ಆಗಲು ಜೆಡಿಎಸ್‌ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.

Advertisement

ಇದೇ ಕಾರಣಕ್ಕೆ ಜಿದ್ದಾಜಿದ್ದಿ ಕ್ಷೇತ್ರವಾದ ಹೊಸಕೋಟೆ ಕ್ಷೇತ್ರದಲ್ಲಿ ಸಂಸದ ಬಿ.ಎನ್‌.ಬಚ್ಚೇಗೌಡರ ಪುತ್ರ ಶರತ್‌ ಬಚ್ಚೇಗೌಡರಿಗೆ ಬೆಂಬಲ ಘೋಷಿಸಲಾಗಿದೆ. ಶಿವಾಜಿನಗರದಲ್ಲಿ ರೋಷನ್‌ಬೇಗ್‌ ಪಕ್ಷೇತರ ಸದಸ್ಯರಾಗಿ ಸ್ಪರ್ಧೆ ಮಾಡುವ ಸಾಧ್ಯತೆಯಿದ್ದು ಅಲ್ಲೂ ಜೆಡಿಎಸ್‌ ಬೆಂಬಲಿಸುವ ನಿರೀಕ್ಷೆಯಿದೆ. ಶಿವಾಜಿನಗರ ಕ್ಷೇತ್ರದಿಂದ ರೋಷನ್‌ಬೇಗ್‌ ಬಿಜೆಪಿ ಟಿಕೆಟ್‌ನಡಿ ಸ್ಪರ್ಧೆಗೆ ಸ್ಥಳೀಯರ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿದ್ದು, ಪಕ್ಷೇತರರಾಗಿ ಸ್ಪರ್ಧೆ ಮಾಡಲು ಒತ್ತಾಯ ಹಾಕುತ್ತಿದ್ದಾರೆ.

ಬಿಜೆಪಿ ಅಲ್ಲಿ ಅಭ್ಯರ್ಥಿ ಹಾಕದಂತೆ ನೋಡಿಕೊಂಡು ಜೆಡಿಎಸ್‌ ಬೆಂಬಲ ಪಡೆಯುವ ನಿಟ್ಟಿನಲ್ಲಿ ರೋಷನ್‌ ಬೇಗ್‌ ಸಹ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಜತೆ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಎಂಟು ಕ್ಷೇತ್ರ ಗೆಲ್ಲಬೇಕಾಗಿದೆ. ಇದಕ್ಕಿಂತ ಕಡಿಮೆ ಗೆದ್ದರೆ ತೂಗುಗತ್ತಿ ಸದಾ ಇರುತ್ತದೆ. ಅಂತಹ ಸಂದರ್ಭದಲ್ಲಿ ಬಿಜೆಪಿಗೆ ಮುಂದಿನ ಮೂರು ವರ್ಷ ಸರ್ಕಾರ ಮುನ್ನಡೆಸಲು ಜೆಡಿಎಸ್‌ನ ಅನಿವಾರ್ಯತೆ ಉಂಟಾಗುತ್ತದೆ. ಆಗ “ಆಟ’ ಪ್ರಾರಂಭಿಸುವುದು ಜೆಡಿಎಸ್‌ ಲೆಕ್ಕಾಚಾರ ಎಂದು ಹೇಳಲಾಗುತ್ತಿದೆ.

ಇದೇ ಕಾರಣಕ್ಕೆ ಹೊಸಕೋಟೆಯಲ್ಲಿ ಶರತ್‌ ಬಚ್ಚೇಗೌಡರಿಗೆ ಬೆಂಬಲ ಸೂಚಿಸುವ ಮೂಲಕ ಕಾಂಗ್ರೆಸ್‌-ಬಿಜೆಪಿಗೆ “ಶಾಕ್‌’ ನೀಡಿರುವ ಜೆಡಿಎಸ್‌, ಇತರೆ ಕ್ಷೇತ್ರಗಳಲ್ಲೂ ತಮ್ಮದೇ ಆದ ಕಾರ್ಯತಂತ್ರ ರೂಪಿಸಲು ಮುಂದಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ಎಚ್‌.ಡಿ.ಕುಮಾರಸ್ವಾಮಿಯವರು ಪಕ್ಷದ ಕಚೇರಿಯಲ್ಲಿ ಸುಮಾರು ಅರ್ಧ ಗಂಟೆ ಪ್ರತ್ಯೇಕ ಮಾತುಕತೆ ನಡೆಸಿ, ಕೆಲವು ಪ್ರಮುಖ ತೀರ್ಮಾನ ಕೈಗೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮಹಾಲಕ್ಷ್ಮಿ ಲೇ ಔಟ್‌, ಹುಣಸೂರು, ಕೆ.ಆರ್‌. ಪೇಟೆ, ಯಶವಂತಪುರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಹೆಚ್ಚು ಶ್ರಮ ಹಾಕುವುದು. ಹೊಸಕೋಟೆ, ಶಿವಾಜಿನಗರ ಕ್ಷೇತ್ರಗಳಲ್ಲಿ ಪಕ್ಷೇತರರಿಗೆ ಬೆಂಬಲ ನೀಡುವುದು. ಇತರೆ ಕ್ಷೇತ್ರಗಳಲ್ಲಿ ಬಿಜೆಪಿ ಓಟಕ್ಕೆ ಬ್ರೇಕ್‌ ಹಾಕುವುದು ಜೆಡಿಎಸ್‌ನ ಉದ್ದೇಶ. ಹುಣಸೂರಿನಲ್ಲಿ ಎಚ್‌.ವಿಶ್ವನಾಥ್‌ ಮಣಿಸಲು ಗಣೇಶ್‌ ಹಾಗೂ ಸೋಮಶೇಖರ್‌ ಎಂಬ ಇಬ್ಬರು ಪ್ರಬಲ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ.

Advertisement

ಈ ಮಧ್ಯೆ, ಜಿ.ಟಿ.ದೇವೇಗೌಡರ ಜತೆಯೂ ಸಂಧಾನ ನಡೆಯಲಾಗುತ್ತಿದ್ದು ಅವರನ್ನೂ ಪಕ್ಷದಲ್ಲೇ ಉಳಿಸಿಕೊಳ್ಳಲು ಯತ್ನಿಸಲಾಗುತ್ತಿದೆ. ಅವರು ಬಯಸಿದರೆ ಹುಣಸೂರು ಕ್ಷೇತ್ರಕ್ಕೆ ಅವರ ಪುತ್ರ ಹರೀಶ್‌ಗೌಡರಿಗೆ ಟಿಕೆಟ್‌ ನೀಡಲು ಮುಂದಾಗಿ ದ್ದಾರೆ ಎನ್ನಲಾಗಿದೆ. ಅದೇ ರೀತಿ ಮಹಾಲಕ್ಷ್ಮಿ ಲೇ ಔಟ್‌ ಕ್ಷೇತ್ರದಲ್ಲಿ ಮಾಜಿ ಉಪ ಮೇಯರ್‌ ಜತೆಗೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಗಿರೀಶ್‌ ಕೆ.ನಾಶಿ ಸೆಳೆಯಲು ತೀರ್ಮಾನಿಸಲಾಗಿದೆ.

ಕೆ.ಆರ್‌.ಪೇಟೆ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಜೆಪಿ ನಗರ ನಿವಾಸದಲ್ಲಿ ಎಚ್‌.ಡಿ. ಕುಮಾರಸ್ವಾಮಿಯವರು ಹತ್ತು ಮುಖಂಡರ ಜತೆ ಚರ್ಚಿಸಿದ್ದಾರೆ. ಅಲ್ಲಿ ಐವರು ಆಕಾಂಕ್ಷಿಗಳಿ ರುವುದರಿಂದ ಒಮ್ಮತದ ಅಭ್ಯರ್ಥಿಯಾಗಿ ನೀವೇ ಒಬ್ಬರು ಚರ್ಚಿಸಿ ಎಂದು ಹೇಳಲಾಗಿದೆ.

ಜೆಡಿಎಸ್‌ ಆತಂಕ ಏನು?: ಈ ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದು ಸರ್ಕಾರ ಗಟ್ಟಿಯಾದರೆ ಮತ್ತೆ ಜೆಡಿಎಸ್‌ನ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸಬಹುದು ಎಂಬ ಆತಂಕವೂ ಜೆಡಿಎಸ್‌ಗಿದೆ. ಈಗಾಗಲೇ ಜಿ.ಟಿ.ದೇವೇಗೌಡ ಸೇರಿದಂತೆ ಕೆಲವರು ಬಿಜೆಪಿ ಸಂಪರ್ಕದಲ್ಲಿರುವುದು. ಮತ್ತೆ ಕೆಲವರು ಕಾಂಗ್ರೆಸ್‌ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಹೀಗಾಗಿ, ಇದಕ್ಕೆ ತಡೆಯೊಡ್ಡಿ ಪಕ್ಷದಿಂದ ಯಾರೂ ಹೋಗದಂತೆ ನೋಡಿಕೊಳ್ಳಲು ಮುಂದಿನ ದಿನಗಳಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಜತೆ ನಾವೇ ಸೇರಿ ಸರ್ಕಾರ ರಚನೆ ಮಾಡಬಹುದು ಎಂಬ ಸಂದೇಶ ರವಾನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

* ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next