Advertisement
ಮುಂಬರುವ ವಿಧಾನಸಭೆ ಚುನಾವಣೆಗೆ ಈ ಭಾಗದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಬೇಕೆಂಬ ಜೆಡಿಎಸ್ ವರಿಷ್ಠರಿಗೆ ಪಕ್ಷದಿಂದ ಆಯ್ಕೆಯಾದ ಶಾಸಕರೇ ಶಾಕ್ ನೀಡತೊಡಗಿದ್ದಾರೆ. 80ರ ದಶಕದಲ್ಲಿ ಕರ್ನಾಟಕದಲ್ಲೇ ರಾಜಕೀಯ ಬದಲಾವಣೆಯ ಮಹತ್ವದ ಕ್ರಾಂತಿ ಮೊಳಗಿತ್ತು. ಬಲಾಡ್ಯ ಕಾಂಗ್ರೆಸ್ ಮಣಿಸಿ ಜನತಾಪಕ್ಷ ಅಧಿಕಾರ ಹಿಡಿದು ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯಾಗಿ ಜನತಾ ಪರಿವಾರ ಎದ್ದು ನಿಂತಿತ್ತು.
Related Articles
Advertisement
2008ರ ಚುನಾವಣೆಯಲ್ಲಿ ಜೆಡಿಎಸ್ ಕೇವಲ 28 ಸ್ಥಾನ ಗೆದ್ದಿತ್ತು. ಅದರಲ್ಲಿ ಉಕದಿಂದ 10 ಮಂದಿ ಆಯ್ಕೆಯಾಗಿದ್ದರು. ಚುನಾವಣಾ ಫಲಿತಾಂಶ ಬಂದ ಕೇವಲ 36 ದಿನಗಳಲ್ಲಿ “ಆಪರೇಷನ್ ಕಮಲ’ಕ್ಕೆ ಬಿದ್ದ ಈ ಭಾಗದ ಮೂವರು ಜೆಡಿಎಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು.
2013ರ ಚುನಾವಣೆಯಲ್ಲಿ ಜೆಡಿಎಸ್ 40 ಸ್ಥಾನಗಳನ್ನು ಗಳಿಸಿದ್ದು, ಉಕದಲ್ಲಿ 6 ಸ್ಥಾನಗಳನ್ನು ಗೆಲ್ಲಲು ಮಾತ್ರ ಸಾಧ್ಯವಾಗಿತ್ತು. 2018ರ ವಿಧಾನಸಭೆ ಚುನಾವಣೆಗೆ ಉತ್ತರದಲ್ಲಿ ಹೆಚ್ಚು ಸ್ಥಾನ ಗಳಿಸಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿಯೇ ಮನೆ ಮಾಡಿ ಪಕ್ಷ ಸಂಘಟನೆಗೆ ಹಲವು ಕಸರತ್ತು ಮಾಡುತ್ತಿರುವಾಗಲೇ, ಆರು ಜೆಡಿಎಸ್ ಶಾಸಕರಲ್ಲಿ ನಾಲ್ವರು ಪಕ್ಷದಿಂದ ದೂರವಾಗಿದ್ದಾರೆ.
ಜೆಡಿಎಸ್ ಭಿನ್ನಮತಿಯ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಹಾಗೂ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ ಈಗಾಗಲೇ ಕಾಂಗ್ರೆಸ್ ಕದ ತಟ್ಟಿಯಾಗಿದೆ. ರಾಯಚೂರು ನಗರ ಶಾಸಕ ಡಾ.ಶಿವರಾಜ ಪಾಟೀಲ, ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ ಕಮಲ ಅಪ್ಪಿಕೊಂಡಾಗಿದೆ. ಉತ್ತರದಲ್ಲಿ ಇದೀಗ ಜೆಡಿಎಸ್ ಶಾಸಕರೆಂದು ಹೇಳಿಕೊಳ್ಳುವುದಕ್ಕೆ ಉಳಿದಿರುವವರು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬಸವಕಲ್ಯಾಣದ ಶಾಸಕ ಮಲ್ಲಿಕಾರ್ಜುನ ಖೂಬಾ, ಮುಂಬೈ ಕರ್ನಾಟಕದಲ್ಲಿ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಮಾತ್ರ!
ಜೆಡಿಎಸ್‌ಗೆ ಈಗ ಪಕ್ಷ ಸಂಘಟನೆಯ ಕೊರತೆ ಒಂದು ಕಡೆಯಾದರೆ, ಪಕ್ಷದಿಂದ ಗೆದ್ದ ಅನೇಕರು ಅನ್ಯ ಪಕ್ಷಕ್ಕೆ ವಲಸೆ ಹೋಗುತ್ತಿರುವುದು ಬಹುದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಈ ಎಲ್ಲ ಇಲ್ಲಗಳ ನಡುವೆ, ಸೊರಗಿದ ಸಂಘಟನೆಯೊಂದಿಗೆ ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಯಾವ ರೀತಿ ಮೇಲೆದ್ದು ನಿಲ್ಲುವುದೋ ಕಾದು ನೋಡಬೇಕು.
– ಅಮರೇಗೌಡ ಗೋನವಾರ