Advertisement

ಮೇಯರ್‌ ಪಟ್ಟಕ್ಕೆ ಜೆಡಿಎಸ್‌ ಪಟ್ಟು?

11:30 AM Aug 16, 2017 | Team Udayavani |

ಬೆಂಗಳೂರು: ಮುಂದಿನ ತಿಂಗಳು ಬಿಬಿಎಂಪಿಯ ಮೇಯರ್‌ ಮತ್ತು ಉಪಮೇಯರ್‌ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಪಾಲಿಕೆ ಆಡಳಿತದಲ್ಲಿ ಕಾಂಗ್ರೆಸ್‌ನೊಂದಿಗೆ ಪಾಲುದಾರಿಕೆ ಪಕ್ಷವಾಗಿರುವ ಜೆಡಿಎಸ್‌ ಈ ಬಾರಿ ಮೇಯರ್‌ ಸ್ಥಾನಕ್ಕೆ ಪಟ್ಟ ಹಿಡಿಯುವ ಸಾಧ್ಯತೆಗಳಿವೆ. 

Advertisement

ಕಳೆದ ಎರಡು ವರ್ಷ ಕಾಂಗ್ರೆಸ್‌ಗೆ ಬೆಂಬಲ ನೀಡಿ ಉಪ ಮೇಯರ್‌ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷಗಿರಿಗೆ ತೃಪ್ತಿಪಟ್ಟುಕೊಂಡಿದ್ದ ಜೆಡಿಎಸ್‌ ಈ ಬಾರಿ ಮೇಯರ್‌ ಪದವಿ ತನಗೇ ಬೇಕು ಎಂದು ಕಾಂಗ್ರೆಸ್‌ ಮುಂದೆ ಬೇಡಿಕೆ ಇಡಲು ತೀರ್ಮಾನಿಸಿದೆ.

ಮೈತ್ರಿ ಧರ್ಮದ ಪ್ರಕಾರ ಎರಡು ಬಾರಿ ಮೇಯರ್‌ ಸ್ಥಾನ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದ್ದೇವೆ. ಸಂಖ್ಯಾಬಲಕ್ಕಿಂತ ಮೈತ್ರಿಯ ಧರ್ಮ ಮುಖ್ಯ. ಹೀಗಾಗಿ, ಜೆಡಿಎಸ್‌ಗೆ ಈ ಬಾರಿ ಮೇಯರ್‌ ಪದವಿ ಬಿಟ್ಟುಕೊಟ್ಟು ಕಾಂಗ್ರೆಸ್‌ ಉಪ ಮೇಯರ್‌ ಹಾಗೂ ಸ್ಥಾಯಿ ಸಮಿತಿ ಸ್ಥಾನಗಳನ್ನು ಇಟ್ಟುಕೊಳ್ಳಲಿ ಎಂಬುದು ಜೆಡಿಎಸ್‌ ವಾದ.

ಈ ಬಗ್ಗೆ ಸದ್ಯದಲ್ಲೇ ಅಧಿಕೃತವಾಗಿಯೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ವಿಷಯ ತರಲು ಪಕ್ಷ ನಿರ್ಧರಿಸಿದೆ. 
ಜೆಡಿಎಸ್‌ ನಗರ ಘಟಕ ಅಧ್ಯಕ್ಷ ಪ್ರಕಾಶ್‌, ವಿಧಾನಪರಿಷತ್‌ ಸದಸ್ಯರಾದ ರಮೇಶ್‌ಬಾಬು, ಶರವಣ ಈ ಬಗ್ಗೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೂ ಮಾತನಾಡಿದ್ದು, ಮೇಯರ್‌ ಸ್ಥಾನಕ್ಕೆ ಪಟ್ಟು ಹಿಡಿಯಲು ಒಪ್ಪಿದ್ದಾರೆ ಎಂದು ಹೇಳಲಾಗಿದೆ.

ಮೂರನೇ ಅವಧಿಗೆ ಮೇಯರ್‌ ಸ್ಥಾನ ಎಸ್‌ಸಿ, ಉಪ ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ. ಜೆಡಿಎಸ್‌ನಿಂದ ಎಸ್‌ಸಿ ವರ್ಗಕ್ಕೆ ಸೇರಿದ ಮಾರಪ್ಪನಪಾಳ್ಯ ವಾರ್ಡ್‌ನ ಮಹದೇವ್‌ ಹಾಗೂ ಶಕ್ತಿ ಗಣಪತಿ ನಗರ ವಾರ್ಡ್‌ನಿಂದ ಗಂಗಮ್ಮ ಇದ್ದಾರೆ. ಮೇಯರ್‌ ಸ್ಥಾನ ಬಿಟ್ಟುಕೊಟ್ಟರೆ ಆ ಸ್ಥಾನ ಅಲಂಕರಿಸುವ ಸಾಮರ್ಥ್ಯ ಇರುವವರು ನಮ್ಮ ಪಕ್ಷದಲ್ಲೂ ಇದ್ದಾರೆ ಎಂಬುದನ್ನು ಕಾಂಗ್ರೆಸ್‌ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ವಿಧಾನಪರಿಷತ್‌ ಸದಸ್ಯ ರಮೇಶ್‌ಬಾಬು ತಿಳಿಸಿದ್ದಾರೆ.

Advertisement

ಕಾಂಗ್ರೆಸ್‌ ಪಕ್ಷವು  ಈ ವಿಷಯದಲ್ಲಿ ಉದಾರತೆ ತೋರಬೇಕು. ನಾವು ಎರಡು ಬಾರಿ ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಈ ಬಾರಿ ಅವರು ನಮಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದ್ದಾರೆ.

ವಿಘ್ನ: ಮತ್ತೂಂದೆಡೆ, ಈ ಬಾರಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮುಂದುವರಿಯುವುದು ಅಷ್ಟು ಸುಲಭವಲ್ಲ. ಎಂಟು ವಿಧಾನಪರಿಷತ್‌ ಸದಸ್ಯರು ಬೆಂಗಳೂರಿನಲ್ಲಿ ವಾಸಿಸುತ್ತಿರುವುದಾಗಿ ಸುಳ್ಳು ಹೇಳಿ ಬಿಬಿಎಂಪಿಯಲ್ಲಿ ಮತ ಹಾಕಿ ತಮ್ಮ ಕ್ಷೇತ್ರಗಳಲ್ಲಿನ ವಿಳಾಸ ನೀಡಿ ಭತ್ಯೆ ಪಡೆದಿದ್ದಾರೆ ಎಂದು ಬಿಜೆಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಆ ದೂರು ಸದ್ಯದಲ್ಲೇ ಇತ್ಯರ್ಥವಾಗಬೇಕಿದೆ.  ಈಗಾಗಲೇ ಮೂವರು ತಮ್ಮ ವಿಳಾಸ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಜತೆಗೆ ಇನ್ನೂ ನಾಲ್ವರ ವಿರುದ್ಧವೂ ದೂರು ನೀಡಲು ಬಿಜೆಪಿ ಸಿದ್ಧತೆ ಮಾಡಿದೆ. ಹೀಗಾಗಿ, ಜೆಡಿಎಸ್‌-ಕಾಂಗ್ರೆಸ್‌ನ 12 ಮತಗಳು ಖೋತಾ ಆಗುವ ಸಾಧ್ಯತೆಗಳು ಇವೆ.

ಬಿಜೆಪಿ ಲೆಕ್ಕಾಚಾರ: ಈ ಬಾರಿ ಬಿಜೆಪಿಯೂ ಪಾಲಿಕೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸಿದ್ದು, ಕಾಂಗ್ರೆಸ್‌-ಜೆಡಿಎಸ್‌ನ 12 ಮತಗಳು ಕಡಿಮೆಯಾದರೆ ಬಿಜೆಪಿಗೆ ಅಧಿಕಾರ ಹಿಡಿಯಲು ಕೇವಲ ಮೂರು ಮತಗಳು ಮಾತ್ರ ಕೊರತೆ ಬೀಳಲಿದೆ. ಅಂತಹ ಸಂದರ್ಭದಲ್ಲಿ  ಪಕ್ಷೇತರರನ್ನು ಸೆಳೆಯಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

ಸದಸ್ಯ ಬಲ: ಪಾಲಿಕೆಯಲ್ಲಿ ಬಿಜೆಪಿ 101, ಕಾಂಗ್ರೆಸ್‌ 76, ಜೆಡಿಎಸ್‌ 14 ಹಾಗೂ 7 ಪಕ್ಷೇತರರು ಸೇರಿ 198 ಸದಸ್ಯ ಬಲ ಇದೆ. ಶಾಸಕರು-ಸಂಸದರು ಸೇರಿ  ಒಟ್ಟು ಮತಗಳ ಸಂಖ್ಯೆ 271.

Advertisement

Udayavani is now on Telegram. Click here to join our channel and stay updated with the latest news.

Next