Advertisement

ಉಪ ಚುನಾವಣೆಯ 15 ಕ್ಷೇತ್ರಗಳಲ್ಲೂ ಜೆಡಿಎಸ್‌ ಸ್ಪರ್ಧೆ

11:11 PM Oct 16, 2019 | Lakshmi GovindaRaju |

ಬೆಂಗಳೂರು: ಅನರ್ಹಗೊಂಡಿರುವ ಶಾಸಕರ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಏನು ತೀರ್ಪು ಬರುತ್ತೋ ಗೊತ್ತಿಲ್ಲ. ಸ್ಪೀಕರ್‌ ತೀರ್ಮಾನ ಎತ್ತಿ ಹಿಡಿದರೆ ಉಪ ಚುನಾವಣೆ ನಡೆಯುತ್ತದೆ. ಇಲ್ಲದಿದ್ದರೆ ಇಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಉಪ ಚುನಾವಣೆ ನಡೆದರೆ ಹದಿನೈದು ಕ್ಷೇತ್ರಗಳಲ್ಲಿ ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಅದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು.

Advertisement

ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ, ಮೂವರು ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ನ ಅನರ್ಹಗೊಂಡ ಶಾಸಕರನ್ನು ಕರೆದುಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಅವರ ಹೈಕಮಾಂಡ್‌ ಏನು ಹೇಳುತ್ತೋ ಗೊತ್ತಿಲ್ಲ ಎಂದರು. ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಜವರಾಯಿಗೌಡರೇ, ಅದರಲ್ಲಿ ಅನುಮಾನವೇ ಬೇಡ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ಅವರು ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂದು ವದಂತಿ ಹರಡುತ್ತಿದ್ದಾರೆ ಎಂದು ದೂರಿದರು.

ಮುಂದಿನ ಹತ್ತು ತಿಂಗಳಲ್ಲಿ ಬಿಬಿಎಂಪಿ ಚುನಾವಣೆ ಬರಲಿದ್ದು, ಅಲ್ಲಿಯೂ ಎಲ್ಲ ಕಡೆ ಅಭ್ಯರ್ಥಿಗಳನ್ನು ಹಾಕುತ್ತೇವೆ. ಬೆಂಗಳೂರು ನಗರದಲ್ಲಿ ಪಕ್ಷವನ್ನು ಶಕ್ತಿಯುತವಾಗಿ ಸಂಘಟನೆ ಮಾಡುತ್ತೇವೆ. ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಅ.18 ರಂದು ಸಭೆ ನಡೆಸುತ್ತೇವೆ. ಬಸವರಾಜ ಹೊರಟ್ಟಿ ಅವರನ್ನೇ ಕರೆದು ಪದವೀಧರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.

ಯಡಿಯೂರಪ್ಪ ಅವರು ಮಹಾರಾಷ್ಟ್ರ ಚುನಾವಣೆಗೆ ಪ್ರಚಾರಕ್ಕೆ ಹೋಗಿರುವ ಕುರಿತು ಪ್ರತಿಕ್ರಿಯಿಸಿ, ಅವರಿಗೆ ಪಕ್ಷ ಮುಖ್ಯ. ಅವರ ಪಕ್ಷದ ಹೈಕಮಾಂಡ್‌ ಆದೇಶ ದಿಂದ ಅವರು ಪ್ರಚಾರಕ್ಕೆ ಹೋಗಿದ್ದಾರೆ. ಇಲ್ಲಿ ಸಚಿವರಿಗೆ ಜವಾಬ್ದಾರಿ ಕೊಟ್ಟು ಹೋಗಿರಬಹುದು ಎಂದು ಹೇಳಿದರು. ನನ್ನ ವಿರುದ್ಧ ಐಟಿ ದಾಳಿ ಆದರೆ ದೇವೇಗೌಡರೇ ಕಾರಣ ಎಂಬ ಕೆ.ಎನ್‌.ರಾಜಣ್ಣ ಆರೋಪ ಕುರಿತು ಸಿಡಿಮಿಡಿಗೊಂಡ ಅವರು, ಒಬ್ಬ ಮಾಜಿ ಪ್ರಧಾನಿಯಾಗಿ ಅವರ ವಿರುದ್ಧ ಅರ್ಜಿ ಬರೆದು ಕೊಂಡು ಕುಳಿತುಕೊಳ್ಳಲಾ? ಎಂದರು.

Advertisement

Udayavani is now on Telegram. Click here to join our channel and stay updated with the latest news.

Next