Advertisement

ಜಾತ್ಯತೀತ ಸಿದ್ಧಾಂತಕ್ಕಾಗಿ ಜೆಡಿಎಸ್‌, ಕಾಂಗ್ರೆಸ್‌ ಹೋರಾಟ

09:52 PM Apr 07, 2019 | Team Udayavani |

ರಾಮನಾಥಪುರ: ಜಾತ್ಯತೀತ ಸಿದ್ಧಾಂತದ ಉಳಿವಿಗಾಗಿ ಜೆಡಿಎಸ್‌ – ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿಯಾದ ನನಗೆ ಜಿಲ್ಲೆಯ ಜನರು ಆಶೀರ್ವದಿಸಿ ಭಾರೀ ಬಹುಮತದಿಂದ ಗೆಲ್ಲಿಸಬೇಕೆಂದು ಪ್ರಜ್ವಲ್‌ ರೇವಣ್ಣ ಮನವಿ ಮಾಡಿದರು.

Advertisement

ಅರಕಲಗೂಡು ತಾಲೂಕು ರಾಮನಾಥಪುರದ ಶ್ರೀ ಬಸವೇಶ್ವರ ವೃತ್ತದಲ್ಲಿ ರೋಡ್‌ ಶೋ ನಡೆಸಿ ಮಾತನಾಡಿದ ಅವರು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಜಾತ್ಯತೀತ ತತ್ವ ಮತ್ತು ಸಿದ್ಧಾಂತಗಳಡಿ ಹೋರಾಟ ಮಾಡುತ್ತಿವೆ.

ನಾನು ಈ ಎರಡೂ ಪಕ್ಷಗಳ ಅಭ್ಯರ್ಥಿ ಅಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ರಾಜ್ಯದಲ್ಲಿ ಎರಡು ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತಿರುವುದು ಇದೇ ಮೊದಲ ಮೊದಲು. ಈ ಚುನಾವಣೆ ಕೋಮವಾದ ಮತ್ತು ಜಾತ್ಯತೀತ ತತ್ವಗಳ ನಡುವಿನ ಹೋರಾಟ ಎಂದರು.

ಮಂಜುಗೆ ನೈತಿಕ ಹಕ್ಕಿಲ್ಲ: ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಬಿಜೆಪಿ ಎ. ಮಂಜು ಅವರಿಗೆ ನೈತಿಕ ಹಕ್ಕಿಲ್ಲ. ಕಾಂಗೆಸ್‌ ಶಾಸಕನಾಗಿ, ಸಚಿವನಾಗಿ ಅಧಿಕಾರ ಅನುಭವಿಸಿದ ಮಂಜು ಕೇವಲ ಅಧಿಕಾರಕ್ಕಾಗಿ ಪಕ್ಷಾಂತರ ನಡೆಸಿ ನನ್ನ ನಾಯಕ ಎನ್ನುತ್ತಿದ್ದ ಸಿದ್ದರಾಮಯ್ಯ ಅವರಿಗೆ ವಂಚನೆ ಮಾಡಿದ್ದಾರೆ.

ಚುನಾವಣಾ ಪ್ರಚಾರಕ್ಕಾಗಿ ಸಿದ್ದರಾಮಯ್ಯ ಅವರೂ ಜಿಲ್ಲೆಯಲ್ಲಿ ಪ್ರವಾಸ ನಡೆಸಲಿದ್ದು ಎ.ಮಂಜು ಅವರು ಕಾಂಗ್ರೆಸ್‌ಗೆ ಮಾಡಿರುವ ದ್ರೋಹದ ಬಗ್ಗೆ ಮಾತನಾಡಲಿದ್ದಾರೆ ಎಂದ ಅವರು ಅವಕಾಶವಾದಿ ರಾಜಕಾರಣಿ ಎ.ಮಂಜು ಎದುರು ಮೈತ್ರಿ ಅಭ್ಯರ್ಥಿಯಾಗಿರುವ ನನ್ನ ಗೆಲುವು ಖಚಿತ. ಎಂದರು.

Advertisement

ಅರಕಲ ಗೂಡು ಕ್ಷೇತ್ರಕ್ಕೆ ಗೌಡರ ಕೊಡುಗೆ ಅಪಾರ: ಶಾಸಕ ಎ.ಟಿ. ರಾಮಸ್ವಾಮಿ ಮಾತನಾಡಿ, ಅರಕಲಗೂಡು ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರ ಕೊಡುಗೆ ಅಪಾರವಾಗಿದೆ.

ಈ ಹಿಂದೆ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಜನರ ಮುಂದೆ ಹೇಳುತ್ತಿದ್ದವರು ಇಂದು ಮೋದಿ ಹಾಗೂ ಬಿಎಸ್‌. ಯಡಿಯೂರಪ್ಪ ಅವರ ಮುಂದೆ ಕೈಮುಗಿಯುತ್ತಿದ್ದಾರೆ. ಇಂತಹವರಿಗೆ ಜನರ ಮುಂದೆ ಹೋಗಿ ಮತ ಕೇಳಲು ಯಾವ ಅರ್ಹತೆ ಇದೆ ಎಂದು ಎ.ಮಂಜು ಅವರನ್ನು ತರಾಟೆಗೆ ತೆಗೆದುಕೊಂಡರು.

ಅರಕಲಗೂಡು ತಾಲೂಕು ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್‌ ಮಾತನಾಡಿ, ಬಿಜೆಪಿ ಅಭ್ಯರ್ಥಿಯಾಗಿರುವ ಎ.ಮಂಜು ಜೆಡಿಎಸ್‌ನವರ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಿದ್ದಾರೆ. ಎ.ಮಂಜು ಅವರು ತಮ್ಮ ಪತ್ನಿ ಹಾಗೂ ಮಗನನ್ನು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಮಾಡಿಲ್ಲವೇ ಎಂದು ತಿರುಗೇಟು ನೀಡಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷ ಅನಿಲ್‌ಕುಮಾರ್‌ ಮಾತನಾಡಿ, ಎಲ್ಲರೂ ಒಂದಾಗಿ ಜೆಡಿಎಸ್‌ ಅಭ್ಯರ್ಥಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರಿಗೆ ಮತ ನೀಡುವ ಮೂಲಕ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳಿಸಬೇಕು ಎಂದು ಮನವಿ ಮಾಡಿದರು. ಜೆಡಿಎಸ್‌ ಮುಖಂಡ ಮುತ್ತಿಗೆ ರಾಜೇಗೌಡ, ಡಾ.ಮೋಹನ್‌, ಮುದ್ದನಹಳ್ಳಿ ರಮೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next