ದಾವಣಗೆರೆ: “ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಎಷ್ಟು ದಿನ ಇರುತ್ತದೋ ನೋಡೋಣ. ಹೆಚ್ಚು ದಿನವಂತೂ ಇರುವುದಿಲ್ಲ” ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ವಿಶ್ವಾಸಮತ ಗಳಿಸಲು ಸಾಧುವಾಗದೇ ಇರುವುದಕ್ಕೆ ತೀವ್ರ ಮನನೊಂದು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಗ್ರಾಮದ ಎಚ್.ಚನ್ನಬಸಪ್ಪ ಎಂಬುವವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಬಿ.ಎಸ್. ಯಡಿಯೂರಪ್ಪ, ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
“”ಈ ಸರ್ಕಾರ ಎಷ್ಟು ದಿನ ಇರುತ್ತದೆ ಎಂದು ಕಾದು ನೋಡೋಣ. ಮುಂದೆ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ 150+ ಸ್ಥಾನ ಗಳಿಸಲಿದೆ. ರಾಜ್ಯದ ಲಕ್ಷಾಂತರ ಜನರ ಆಶೀರ್ವಾದದಿಂದ ಬಿಜೆಪಿಗೆ 104 ಸ್ಥಾನ ಲಭಿಸಿವೆ. ಬಹುಮತಕ್ಕೆ 8 ಸ್ಥಾನ ಕಡಿಮೆ ಇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಯಬೇಕಿತ್ತು ಎಂಬುದಾಗಿ ಅನೇಕರು ಅಪೇಕ್ಷಿಸಿದ್ದರು. ಆದರೆ ನಮ್ಮ ಸರ್ಕಾರ ಉಳಿಯಲಿಲ್ಲವಲ್ಲ ಎಂಬುದಾಗಿ ಬೇಸರಪಟ್ಟುಕೊಂಡು, ನೊಂದಿದ್ದಾರೆ” ಎಂದು ಹೇಳಿದರು.
“”ಇನ್ನು 3-4 ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ಏನಾಗಬೇಕು ಎಂಬುದನ್ನು ಅರಿಯುವ ಜೊತೆಗೆ ಏನೆಲ್ಲ ಆಯಿತು ಎಂಬುದನ್ನು ತಿಳಿಸಲಾಗುವುದು. ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸ. ಹಾಗಾಗಿ ಯಾರೂ ಧೃತಿಗೆಡಬಾರದು, ಬೇಸರಪಟ್ಟುಕೊಳ್ಳಬಾರದು ಎಂದು ಜನರಲ್ಲಿ ಕೈ ಮುಗಿದು ಮನವಿ ಮಾಡುವೆ” ಎಂದು ತಿಳಿಸಿದರು.
ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಕೆ. ಮಾಡಾಳ್ ವಿರುಪಾಕ್ಷಪ್ಪ, ಮುರುಗೇಶ್ ನಿರಾಣಿ, ಪ್ರೊ| ಎನ್. ಲಿಂಗಣ್ಣ ಇತರರು ಇದ್ದರು.