Advertisement

ಜೆಡಿಎಸ್‌ “ಬುಟ್ಟಿಗೆ’ಕೈ-ಕಮಲ ಲಗ್ಗೆ? 

06:40 AM Dec 19, 2017 | |

ಬೆಂಗಳೂರು: ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫ‌ಲಿತಾಂಶ ಜೆಡಿಎಸ್‌ ಪಾಲಿಗೆ ಸ್ವಲ್ಪಮಟ್ಟಿನ “ನಿರಾಸೆ’ ತಂದೊಡ್ಡಿದ್ದು, ತಮ್ಮ ಬುಟ್ಟಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಕೈ ಹಾಕಬಹುದು ಎಂಬ ಆತಂಕಕ್ಕೆ ಒಳಗಾಗಿದೆ.

Advertisement

ಅದರಲ್ಲೂ ಗುಜರಾತ್‌ ಫ‌ಲಿತಾಂಶದ ನಂತರ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳನ್ನು ಜೆಡಿಎಸ್‌ ಕಡೆಗೆ ಸೆಳೆಯುವುದಕ್ಕಿಂತ ಜೆಡಿಎಸ್‌ನಿಂದ ಎರಡೂ ಪಕ್ಷಗಳತ್ತ ಹೋಗುವವರನ್ನು ತಡೆಯುವುದೇ ದೊಡ್ಡ ಸವಾಲಾಗಲಿದೆ.

ಈಗಾಗಲೇ ಜೆಡಿಎಸ್‌ನ 40 ಶಾಸಕರ ಪೈಕಿ ಏಳು ಮಂದಿ ಕಾಂಗ್ರೆಸ್‌ ಬಾಗಿಲಲ್ಲಿ ನಿಂತಿದ್ದು, ಇನ್ನೂ ಐವರನ್ನು ಸೆಳೆಯಲು ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರಯತ್ನಿಸುತ್ತಿದೆ. ಮಲ್ಲಿಕಾರ್ಜುನ ಖೂಬಾ, ಮಾನಪ್ಪ ವಜ್ಜಲ್‌, ಪಿಳ್ಳಮುನಿಶಾಮಪ್ಪ, ಡಾ.ಶಿವರಾಜ್‌ ಪಾಟೀಲ್‌,
ಶಿವಲಿಂಗೇಗೌಡರಿಗೆ ಗಾಳ ಹಾಕಲಾಗಿದೆ ಎಂಬ ಗುಸುಗುಸು ಕಳೆದ ಆರು ತಿಂಗಳಿನಿಂದ ಇದೆ. ಹೀಗಾಗಿ, ಯಾರು ಯಾವ ಕಡೆ ಹೋಗುತ್ತಾರೆ ಎಂಬುದನ್ನು ಪತ್ತೆ ಹಚ್ಚಿ ಸಾಧ್ಯವಾದರೆ ಹಿಡಿದಿಟ್ಟುಕೊಳ್ಳುವ ಪ್ರಯತ್ನ ನಡೆಸಬೇಕಿದೆ.

ಮೇಲ್ನೋಟಕ್ಕೆ ಗುಜರಾತ್‌ ಚುನಾವಣಾ ಫ‌ಲಿತಾಂಶ ಜೆಡಿಎಸ್‌ ಮೇಲೆ ಏನೂ ಪರಿಣಾಮ ಬೀರದು ಎಂದು ಹೇಳಿದರೂ ಒಳಗೊಳಗೇ ಆತಂಕವಂತೂ ಇದ್ದೇ ಇದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್‌ನಿಂದ ಒಬ್ಬೊಬ್ಬರನ್ನೇ ಸೆಳೆದು ಪಕ್ಷ ದುರ್ಬಲಗೊಳಿಸುವ ಪ್ರಯತ್ನ ತಡೆಯುವತ್ತ ನಾಯಕರು ಚಿತ್ತ ಹರಿಸಬೇಕಿದೆ.

ನಮ್ಮ ಭದ್ರಕೋಟೆ ಕಾಯುವ ಕೆಲಸ ಆಗಲೇಬೇಕೆಂದು ಆ ಪಕ್ಷದ ನಾಯಕರು ಅಭಿಪ್ರಾಯಪಡುತ್ತಾರೆ. ಜತೆಗೆ, ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅನುಸರಿಸಬೇಕಾರಾಜಕೀಯ ತಂತ್ರಗಾರಿಕೆ ಬದಲಾಯಿಸುವ
ಅನಿವಾರ್ಯತೆಯೂ ಇದೆ ಎಂದು ಹೇಳುತ್ತಾರೆ.

Advertisement

ಗುಜರಾತ್‌ನಲ್ಲಿ ಶಕ್ತಿಯುತ ಪ್ರಾದೇಶಿಕ ಪಕ್ಷ ಇರಲಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆಯೇ ಸೆಣಸಾಟವಿತ್ತು. ಆದರೆ, ಕರ್ನಾಟಕದಲ್ಲಿ ಹಾಗಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸವಾಲು ನೀಡುವ ಸಾಮರ್ಥ್ಯ ನಮಗಿದೆ ಎಂಬ ಸಮರ್ಥನೆಯೊಂದಿಗೆ ಮುನ್ನಡೆಯಬೇಕಾದ ಸ್ಥಿತಿ ಜೆಡಿಎಸ್‌ನದ್ದಾಗಿದೆ.

ಈಗಾಗಲೇ ಪ್ರಾರಂಭಿಸಿ ರುವ ಸಮುದಾಯವಾರು ಸಮಾವೇಶ ಮುಂದುವರಿಸಿ ಕರ್ನಾಟಕದ ರಾಜಕಾರಣದಲ್ಲಿ ನಿರ್ಣಾಯಕ ಎನಿಸಿರುವ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಮತಬ್ಯಾಂಕ್‌ಗೆ ಲಗ್ಗೆ ಹಾಕುವುದು. ಜತೆಗೆ ಜನತಾಪರಿವಾರದ ಹಳೇ ನಾಯಕರನ್ನು ಒಟ್ಟುಗೂಡಿಸುವುದು. ಇದಕ್ಕಾಗಿ ಎಂ.ಸಿ.ನಾಣಯ್ಯ, ಬಸವರಾಜ ಹೊರಟ್ಟಿ, ಪಿ.ಜಿ.ಆರ್‌ ಸಿಂಧ್ಯಾ, ವೈ.ಎಸ್‌.ವಿ.ದತ್ತ ಅವರ ತಂಡ ರಚಿಸಲು ತೀರ್ಮಾನಿಸಲಾಗಿದೆ. ಜೆಡಿಎಸ್‌ ಎಂದರೆ ಅಪ್ಪ-ಮಕ್ಕಳ‌ಕ್ಷ ಎಂಬ ಹಣೆಪಟ್ಟಿ ತೆಗೆದುಹಾಕುವ Åಯತ್ನವೂ ಇದರ ಹಿಂದಿದೆ.

ಜತೆಗೆ ಬಿಎಸ್‌ಪಿ, ಜೆಡಿಯು ಶರದ್‌ ಯಾದವ್‌ಬಣ, ರೈತ, ದಲಿತ, ಕಾರ್ಮಿಕ, ಕನ್ನಡ ಸಂಘಟನೆಗಳನ್ನು ಒಗ್ಗೂಡಿಸಿ ಕೊಂಡು ಕೆಲವು ಕಡೆ ಸೀಟು ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವ ಲೆಕ್ಕಾಚಾರ ಸಹ ಹಾಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ತಮ್ಮ ಮತಬ್ಯಾಂಕ್‌ ಗಟ್ಟಿಗೊಳಿಸುವ ಜತೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಮತಬ್ಯಾಂಕ್‌ಗೆ ಲಗ್ಗೆ ಇಡಲು ಕಾರ್ಯತಂತ್ರ ರೂಪಿಸಲು ಸದ್ಯದಲ್ಲೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚರ್ಚಿಸಲಿದ್ದು ನಂತರ ಪಕ್ಷದ ಕೋರ್‌ ಕಮಿಟಿ ಸಭೆ ಕರೆದು ಸಮಾಲೋಚನೆ ನಡೆಸಿ ಮುಂದಿನ ಹೆಜ್ಜೆ ಇಡಲಿದೆ ಎನ್ನಲಾಗಿದೆ.

ಒಟ್ಟಾರೆ, ಹಳೇ ಮೈಸೂರು ಭಾಗದ ಜತೆ ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಹೆಚ್ಚು ಸೀಟು ಪಡೆಯುವ ಗುರಿ ಇಟ್ಟುಕೊಂಡಿರುವ ಜೆಡಿಎಸ್‌, ಈ ಹಂತದವರೆಗಿನ ಪಕ್ಷದ “ವೃದ್ಧಿ’ ಕಾಯ್ದಿಟ್ಟು ಕೊಂಡು ಮತ್ತಷ್ಟು ಬಲ ತುಂಬಿಸಿಕೊಳ್ಳಬೇಕಿದೆ.

– ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next