ಮಂಡ್ಯ: ನಾಗಮಂಗಲ ಕ್ಷೇತ್ರದ ಜೆಡಿಎಸ್‌ನ ಹಾಲಿ ಶಾಸಕ ಕೆ.ಸುರೇಶ್‌ಗೌಡ ಹಾಗೂ ಜೆಡಿಎಸ್ ವಕ್ತಾರ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ನಡುವಿನ ಮುಸುಕಿನ ಗುದ್ದಾಟ ಮತ್ತೆ ಭುಗಿಲೆದ್ದಿದೆ.
ಗ್ರಾಮ ಪಂಚಾಯಿತಿ ಚುನಾವಣೆಗೂ ಮುನ್ನ ಶಾಸಕ ಕೆ.ಸುರೇಶ್‌ಗೌಡ, ವಿಧಾನ ಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ನಡುವೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿತ್ತು. ಇದರಿಂದ ಶಾಸಕ ಕೆ.ಸುರೇಶ್‌ಗೌಡ ವಿರುದ್ಧ ಎಲ್.ಆರ್.ಶಿವರಾಮೇಗೌಡ ಹಾಗೂ ಎನ್. ಅಪ್ಪಾಜಿಗೌಡ ಆಗಿಂದಾಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದರು. ನಂತರ ಗ್ರಾಪಂ ಚುನಾವಣೆಯಲ್ಲಿ ಇದ್ದಕ್ಕಿದ್ದಂತೆ ಒಗ್ಗಟ್ಟು ಪ್ರದರ್ಶನ ಮಾಡುವ ಮೂಲಕ ಕ್ಷೇತ್ರದಲ್ಲಿ ಅಚ್ಚರಿ ಮೂಡಿಸಿದ್ದರು. ತ್ರಿಮೂರ್ತಿಗಳಂತೆ ಕ್ಷೇತ್ರ ಸುತ್ತುತ್ತಾ ಚುನಾವಣೆ ಪ್ರಚಾರ ನಡೆಸಿದ್ದರು.
ಶಮನವಾಗದ ಭಿನ್ನಮತ: ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಮತ ಮತ್ತೆ ಭುಗಿಲೆದ್ದಿದೆ. ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಎಲ್.ಆರ್.ಶಿವರಾಮೇಗೌಡ, ಭಾನುವಾರ ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಜೆಡಿಎಸ್‌ನಿಂದ ಸ್ಪರ್ಧಿಸುವುದಾಗಿ ಪುನರುಚ್ಚರಿಸಿದ್ದಾರೆ. ಇದರಿಂದ ನಾಗಮಂಗಲ ಕ್ಷೇತ್ರದ ದಳಪತಿಗಳಲ್ಲಿ ಭಿನ್ನಮತ ಶಮನವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಚುನಾವಣೆಗೆ ಸಿದ್ಧತೆಯಲ್ಲಿ ಎಲ್‌ಆರ್‌ಎಸ್: ಇನ್ನೂ ಎರಡೂವರೆ ವರ್ಷ ಇರುವಾಗಲೇ ಜೆಡಿಎಸ್‌ನ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ, ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುಂದಿನ ವಿಧಾನ ಸಭಾ ಚುನಾವಣೆಗೆ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುವ ಮೂಲಕ ಮುಂದಿನ ಅಭ್ಯರ್ಥಿ ನಾನೇ ಎಂದು ಘೋಷಿಸಿದ್ದಾರೆ. ಈ ಹಿಂದೆಯೂ ಇದೇ ರೀತಿ ಹೇಳಿದ್ದರು. ಅದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಚುನಾವಣೆ ಬಂದಾಗ ನೋಡೋಣ ಎಂದಿದ್ದರು. ಆದರೆ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್ ಕುಮಾರಸ್ವಾಮಿ ಮುಂದಿನ ಅಭ್ಯರ್ಥಿ ಕೆ.ಸುರೇಶ್‌ಗೌಡರೇ ಎಂದು ಹೇಳಿದ್ದರು.
ಟಿಕೆಟ್ ರೇಸ್‌ನಲ್ಲಿ ಎನ್.ಅಪ್ಪಾಜಿಗೌಡ?: ನಾಗಮಂಗಲ ಕ್ಷೇತ್ರದ ಟಿಕೆಟ್‌ನಲ್ಲಿ ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಅಪ್ಪಾಜಿ ಗೌಡ ಕೂಡ ಇದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಶಾಸಕ ಸುರೇಶ್‌ಗೌಡ ವಿರುದ್ಧ ಅಸಮಾಧಾನ ಹೊರಹಾಕಿದ್ದ ಅಪ್ಪಾಜಿಗೌಡ ಕೂಡ ಮುಂದಿನ ಟಿಕೆಟ್ ಆಕಾಂಕ್ಷಿ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.