ಚಿಕ್ಕಮಗಳೂರು: ಪರಿಶಿಷ್ಟ ಜಾತಿ ಸಮುದಾಯದ ಜೆಸಿಬಿ ಚಾಲಕ ಸವರ್ಣೀಯರ ಬಡಾವಣೆಗೆ ಹೋಗಿದ್ದಾನೆಂಬ ಕಾರಣಕ್ಕೆ ಚಾಲಕನ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದಲ್ಲದೆ ದಂಡ ವಸೂಲಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ!
ತರೀಕೆರೆ ತಾಲೂಕಿನ ಗೇರುಮರಡಿ ಗ್ರಾಮದ ಗೊಲ್ಲರಹಟ್ಟಿಯಲ್ಲಿ ಘಟನೆ ನಡೆದಿದ್ದು, ಹಲ್ಲೆ ಮಾಡಿ ಜಾತಿನಿಂದನೆ ಮಾಡಿ, ದಂಡ ವಿಧಿಸಿರುವ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳ ಮುಖಂಡರು ಮಂಗಳವಾರ ಗ್ರಾಮದಲ್ಲಿ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.
ಸೋಮವಾರ ಸಂಜೆ ಪರಿಶಿಷ್ಟ ಸಮುದಾಯದ ಜೆಸಿಬಿ ಚಾಲಕ ಮಾರುತಿ ಗ್ರಾಮದ ಸವರ್ಣೀಯರ ಬಡಾವಣೆಗೆ ಜೆಸಿಬಿಯೊಂದಿಗೆ ತೆರಳಿದ್ದು, ಮನೆ ಕೆಡವುವ ವೇಳೆ ಡಿಶ್ ವೈಯರ್ ತುಂಡಾದ ಹಿನ್ನಲೆಯಲ್ಲಿ ಪಾನಮತ್ತನಾಗಿದ್ದ ವ್ಯಕ್ತಿ ಜೆಸಿಬಿ ಆಪರೇಟರ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗುತ್ತಿದೆ. ಹಲ್ಲೆಗೊಳಗಾದ ಜೆಸಿಬಿ ಡ್ರೈವರ್ ಮಾರುತಿ ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಜೆಸಿಬಿ ಆಪರೇಟರ್ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ್ದು ಕೆಳ ಜಾತಿಯ ಯುವಕ ಗ್ರಾಮಕ್ಕೆ ತೆರಳಿದ್ದಕ್ಕೆ ಹಲ್ಲೆ ನಡೆಸಿ, ದಂಡವನ್ನೂ ವಿಧಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಆರೋಪಿಸಿದ್ದು, ಗ್ರಾಮದಲ್ಲಿ ಮುಖಂಡರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಗ್ರಾಮಕ್ಕೆ ಪೊಲೀಸರು ಧಾವಿಸಿದ್ದು, ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ. ಜಾತಿ ವ್ಯವಸ್ಥೆ ಇಂದಿಗೂ ಇದ್ದು, ಇದು ಖಂಡನೀಯ, ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧಿಕಾರಿಗಳು ಆಗಮಿಸಬೇಕು. ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸ ಬೇಕೆಂದು ಪಟ್ಟು ಹಿಡಿದಿದ್ದಾರೆ.
ಗ್ರಾಮದಲ್ಲಿ ಸದ್ಯ ಬಿಗುವಿನ ವಾತಾವರಣವಿದೆ. ಈ ಸಂಬಂಧ ಇದುವರೆಗೂ ಪ್ರಕರಣ ದಾಖಲಾಗಿಲ್ಲ, ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ನಿರ್ಲಕ್ಷ ವಹಿಸಿದ್ದಾರೆ ಎಂದು ಮುಂಖಡರು ಆರೋಪ ಮಾಡುತ್ತಿದ್ದಾರೆ.