Advertisement

ಜೆಸಿಬಿ ಅಳಿಸಿ ಪರ್ಯಾಯ ರಾಜಕಾರಣ ಬೆಳೆಸಿ

09:40 PM May 17, 2019 | Lakshmi GovindaRaj |

ಮೈಸೂರು: ರಾಜ್ಯದಲ್ಲಿರುವ ಜೆಸಿಬಿ (ಜೆಡಿಎಸ್‌-ಕಾಂಗ್ರೆಸ್‌-ಬಿಜೆಪಿ)ಯನ್ನು ಅಳಿಸಿ ಪರ್ಯಾಯ ರಾಜಕಾರಣ ಬೆಳಸಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಎಸ್‌.ಆರ್‌. ಹಿರೇಮಠ ಹೇಳಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ರಾಜಕಾರಣವನ್ನು ಬೆಳೆಸುವ ನಿಟ್ಟಿನಲ್ಲಿ ಚಿಂತನ-ಮಂಥನ ಅವಶ್ಯವಿದೆ. ರಾಜಕಾರಣಿಗಳು ಆಮಿಷಗಳಿಗೆ ಒಳಗಾಗಿ ಮಾಡುವ ಪಕ್ಷಾಂತರ, ಪ್ರಜಾಪ್ರಭುತ್ವಕ್ಕೆ ಎಸಗುವ ಗಂಭೀರ ಅಪಚಾರ. ಸಂವಿಧಾನ ನೀಡಿರುವ ಜವಾಬ್ದಾರಿ, ಹೊಣೆಗಾರಿಕೆ ಕುರಿತು ಅವರಿಗೆ ಅರಿವು ಮೂಡಿಸದ ಹೊರತು ರಾಜಕಾರಣಿಗಳ ಕೆಟ್ಟ ಚಾಳಿಗೆ ತಡೆಯೊಡ್ಡಲಾಗುವುದಿಲ್ಲ ಎಂದರು.

ಒಂದು ಪಕ್ಷದ ಚಿಹ್ನೆಯಿಂದ ಆಯ್ಕೆಯಾದವರು ನಾಚಿಕೆ-ಮಾನ-ಮರ್ಯಾದೆ ಬಿಟ್ಟು ಮತ್ತೂಂದು ಪಕ್ಷಕ್ಕೆ ಹೋಗುವುದು, ಅಂಥವರನ್ನು ತಮ್ಮ ಪಕ್ಷಗಳಿಗೆ ಸೇರಿಸಿಕೊಳ್ಳಲು ಆಮಿಷಗಳನ್ನು ಒಡ್ಡುವುದನ್ನು ನೋಡಿದರೆ, ಮತದಾರರು ಸಹ ತಮ್ಮ ಹೊಣೆಗಾರಿಕೆ ಅರಿತು ಪಕ್ಷಾಂತರಿಗಳನ್ನು ಪ್ರಶ್ನಿಸಬೇಕಾಗಿದೆ ಎಂದು ಹೇಳಿದರು.

ಅಪಾಯಕಾರಿ: ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಂದ ನಂತರ ದೇಶದ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ. ಬಿಜೆಪಿ ಆರೆಸ್ಸೆಸ್‌ನ ಅಂಗಸಂಸ್ಥೆ. ಆರೆಸ್ಸೆಸ್‌ ಸಿದ್ಧಾಂತ ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತೆ. ಇಂತಹ ಸಿದ್ಧಾಂತದ ಪಕ್ಷ ಅಧಿಕಾರ ನಡೆಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದರು.

ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ 40 ಸಾವಿರ ಕೋಟಿ ರೂ. ಅಕ್ರಮ ಗಣಿಗಾರಿಕೆ ನಡೆಸಿದ್ದಾನೆ. ಇದರಲ್ಲಿ ಅಂದು ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಹಾಗೂ ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಕೂಡ ಪಾಲುದಾರರಾಗಿವೆ. ಆದರೂ ಚುನಾವಣಾ ಸಂದರ್ಭದಲ್ಲಿ ಆದಾಯ ತೆರಿಗೆ ದಾಳಿ ವಿರೋಧ ಪಕ್ಷಗಳವರ ಮೇಲೆ ಮಾತ್ರ ನಡೆಯುತ್ತಿದ್ದು, ಬಿಜೆಪಿಯವರ ಮೇಲೇಕೆ ದಾಳಿ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.

Advertisement

ಸಂವಿಧಾನ ಬದ್ಧ ಹುದ್ದೆಯಲ್ಲಿರುವ ರಾಜ್ಯಪಾಲರೊಬ್ಬರು ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕು. ಆದರೆ, ರಾಜ್ಯಪಾಲರೊಬ್ಬರು ಮೋದಿ ಮತ್ತೂಮ್ಮೆ ಪ್ರಧಾನ ಮಂತ್ರಿಯಾಗಲು ಮತಹಾಕಿ ಎಂದರೆ, ಮುಖ್ಯಮಂತ್ರಿಯೊಬ್ಬರು ಭಾರತೀಯ ಸೇನೆಯನ್ನು ಮೋದಿ ಸೇನೆ ಎನ್ನುತ್ತಾರೆ,

ಪ್ರಧಾನಿ ನರೇಂದ್ರಮೋದಿ ಸಹ ಪುಲ್ವಾಮ ದಾಳಿಯಲ್ಲಿ ಮೃತಪಟ್ಟ ಸೈನಿಕರಿಗಾಗಿ ಬಿಜೆಪಿಗೆ ಮತಹಾಕಿ ಎಂದು ಕೇಳುತ್ತಾರೆ, ದೇಶದಲ್ಲಿನ ಈ ರೀತಿಯ ಪರಿಸ್ಥಿತಿಯಿಂದಾಗಿ ಜಯಪ್ರಕಾಶ್‌ ನಾರಾಯಣ (ಜೆಪಿ) ಅವರು ನಡೆಸಿದ ಮಾದರಿಯ ಆಂದೋಲನ ದೇಶದಲ್ಲಿ ಅವಶ್ಯವಿದೆ.

ಈ ನಿಟ್ಟಿನಲ್ಲಿ ಜೆಪಿ ಅವರು ಸ್ಥಾಪಿಸಿದ ಸಿಟಿಜನ್‌ ಫಾರ್‌ ಡೆಮಾಕ್ರಸಿ (ಸಿಎಫ್ಡಿ)ಯ ರಾಷ್ಟ್ರೀಯ ಸಮ್ಮೇಳನ ಜೂನ್‌ 29,30ರಂದು ದೆಹಲಿಯಲ್ಲಿ ನಡೆಯಲಿದ್ದು, ಗಂಭೀರ ಬಿಕ್ಕಟ್ಟಿನಲ್ಲಿ ಭಾರತದ ಗಣತಂತ್ರ-ನಾಗರಿಕ ಸಮಾಜದ ಹೊಣೆಗಾರಿಕೆ ಕುರಿತು ಜನತಂತ್ರ ಸಮಾಜದವತಿಯಿಂದ ರಾಷ್ಟ್ರಪತಿಯವರಿಗೆ ಬಹಿರಂಗ ಪತ್ರ ಬರೆಯಲಾಗುವುದು ಎಂದು ತಿಳಿಸಿದರು. ಅಭಿರುಚಿ ಗಣೇಶ್‌, ಚಂದ್ರಶೇಖರ ಮೇಟಿ, ಕರುಣಾಕರ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ರಾಜ್ಯದಲ್ಲಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರಿಗೂ ಸಂವಿಧಾನದಡಿ ಕೆಲಸ ನಿರ್ವಹಿಸುವ ಜವಾಬ್ದಾರಿಯಿಲ್ಲ. ಇನ್ನು ಅವರ ಮಕ್ಕಳ (ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ) ಬಗ್ಗೆ ಹೇಳುವುದೇ ಬೇಡ.
-ಎಸ್‌.ಆರ್‌. ಹಿರೇಮಠ, ಸಾಮಾಜಿಕ ಹೋರಾಟಗಾರ

Advertisement

Udayavani is now on Telegram. Click here to join our channel and stay updated with the latest news.

Next