Advertisement

ಬಡವರ ಮನೆ ಮೇಲೆ ಜೆಸಿಬಿ ಪ್ರಹಾರ!

11:15 AM Oct 27, 2018 | |

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮತ್ತೆ ಆರಂಭಿಸಲು ಬಿಬಿಎಂಪಿ ಮುಂದಾಗಿದೆ. ಆದರೆ, ಪಾಲಿಕೆಯಿಂದ ಸಿದ್ಧಪಡಿಸಿರುವ ತೆರವು ಕಾರ್ಯಾಚರಣೆ ಪಟ್ಟಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರ ಕಟ್ಟಡಗಳನ್ನೇ ಗುರಿಯಾಗಿಸಿದ್ದು, ಈ ಬಾರಿಯೂ ಪ್ರಭಾವಿಗಳನ್ನು ಬಿಟ್ಟಿರುವ ಅನುಮಾನ ವ್ಯಕ್ತವಾಗಿದೆ.

Advertisement

ಕಳೆದೊಂದು ವರ್ಷದಿಂದ ಸ್ಥಗಿತಗೊಂಡಿದ್ದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಅಕ್ಟೋಬರ್‌ 29ರಿಂದ ಆರಂಭಿಸಲು ನಗರ ಜಿಲ್ಲಾಡಳಿತ ಹಾಗೂ ಪಾಲಿಕೆಯ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಆದರೆ, ತೆರವು ಕಾರ್ಯಾಚರಣೆಯನ್ನು ಕೇವಲ ಖಾಲಿ ನಿವೇಶನಗಳು, ಕಾಂಪೌಂಡ್‌ಗಳನ್ನು ತೆರವುಗೊಳಿಸುವುದಕ್ಕೆ ಸೀಮಿತಗೊಳಿಸಿ, ಅಪಾರ್ಟ್‌ಮೆಂಟ್‌, ಬೃಹತ್‌ ಕಟ್ಟಡಗಳಿಗೆ ಕೇವಲ ನೋಟಿಸ್‌ ನೀಡಲು ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಹೀಗಾಗಿ, ಪ್ರಭಾವಿಗಳು ಮಾಡಿಕೊಂಡಿರುವ ಒತ್ತುವರಿ ತೆರವು ತಕ್ಷಣಕ್ಕೆ ಆಗದು ಎಂದೇ ಹೇಳಲಾಗುತ್ತಿದೆ.

ಒತ್ತುವರಿಯಿಂದ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ 2016ರಲ್ಲಿ ಯಾವುದೇ ನೋಟಿಸ್‌ ನೀಡದೆ ಹಾಗೂ ಮನೆಗಳಲ್ಲಿರುವ ವಸ್ತುಗಳನ್ನು ತೆಗೆದುಕೊಳ್ಳಲು ಅವಕಾಶ ನೀಡದೆ ಏಕಾಏಕಿ ತೆರವುಗೊಳಿಸಲಾಗಿತ್ತು. ಅದಾದ ಬಳಿಕ ಒತ್ತುವರಿಯಲ್ಲಿ ಪ್ರಭಾವಿಗಳ ಹೆಸರುಗಳು ಕೇಳಿಬಂದ ಕೂಡಲೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತೆಂದು ಮನೆ ಕಳೆದುಕೊಂಡ ಸಂತ್ರಸ್ತರು ಪಾಲಿಕೆಯನ್ನು ಟೀಕಿಸಿದ್ದರು. 

ಆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮತ್ತೆ ಆರಂಭಿಸಲು ಪಾಲಿಕೆ ಮುಂದಾಗಿತ್ತು. ಜತೆಗೆ ಉಪಮುಖ್ಯಮಂತ್ರಿಗಳು ಸಹ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳುವಂತೆ ಪಾಲಿಕೆಗೆ ಸೂಚಿಸಿದ್ದರು. ಜತೆಗೆ ಕಂದಾಯ ಇಲಾಖೆಯ ಭೂ ಮಾಪನ ವಿಭಾಗದವರಿಗೆ ಒತ್ತುವರಿ ಜಾಗ ಗುರುತಿಸಲು ಸರ್ವೆಯರ್‌ಗಳನ್ನು ಪಾಲಿಕೆಗೆ ನಿಯೋಜಿವಂತೆ ಸೂಚಿಸಿದ್ದರು. 

ಅದರಂತೆ ಪಾಲಿಕೆಯ ನಗರದ ನಾಲ್ಕು ವಲಯಗಳಲ್ಲಿ ಸರ್ವೇ ನಡೆಸಿದ ಅಧಿಕಾರಿಗಳು 450 ಪ್ರಕರಣಗಳಲ್ಲಿ ರಾಜಕಾಲುವೆ ಒತ್ತುವರಿಯನ್ನು ಗುರುತಿಸಿ, ಒತ್ತುವರಿಯಾಗಿರುವ ನಕ್ಷೆ ಹಾಗೂ ತೆರವುಗೊಳಿಸಬೇಕಾದ ಒತ್ತುವರಿಯನ್ನು ಗುರುತು ಮಾಡಿ ಪಾಲಿಕೆಗೆ ವರದಿಯನ್ನು ಒಪ್ಪಿಸಿದ್ದಾರೆ. ಆ 450 ಪ್ರಕರಣಗಳಲ್ಲಿ ಕೇವಲ 71 ಕಟ್ಟಡಗಳು ಮಾತ್ರವಿದ್ದು, ಉಳಿದಂತೆ ನಿವೇಶನ, ಕೃಷಿ ಭೂಮಿ, ಕಾಂಪೌಡ್‌, ಕಾಲುವೆಗೆ ಮಣ್ಣು ಮುಚ್ಚಿ ಒತ್ತುವರಿ ಮಾಡಿಕೊಂಡ ಪ್ರಕರಣಗಳೇ ಹೆಚ್ಚಾಗಿದ್ದು, ಈ ಹಿಂದೆ ಒತ್ತುವರಿ ಆರೋಪ ಕೇಳಿಬಂದ ಪ್ರಭಾವಿಗಳ ಹೆಸರುಗಳು ಬಿಟ್ಟು ಹೋಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

Advertisement

571 ಕಡೆ ಮಾತ್ರ ತೆರವು: ಬಿಬಿಎಂಪಿ ವ್ಯಾಪ್ತಿಯ 800 ಕಿ.ಮೀ. ಉದ್ದದ ರಾಜಕಾಲುವೆಯ 1953 ಕಡೆಗಳಲ್ಲಿ ಒತ್ತುವರಿಯಾಗಿದ್ದು, ಇದನ್ನು ನಾಲ್ಕು ವರ್ಷಗಳ ಹಿಂದೆಯೇ ಅಧಿಕಾರಿಗಳು ಸರ್ವೆ ಮೂಲಕ ಗುರುತಿಸಿದ್ದಾರೆ. 2016ರಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸುವ ಮೊದಲೇ ಪಾಲಿಕೆಯ ಅಧಿಕಾರಿಗಳು 820 ಕಡೆಗಳಲ್ಲಿ ತೆರವುಗೊಳಿಸಿದ್ದರು. ಉಳಿದ 1,133 ಪ್ರಕರಣಗಳ ಪೈಕಿ ಕಳೆದ ಎರಡು ವರ್ಷಗಳಲ್ಲಿ ಕೇವಲ 571 ಕಡೆಗಳಲ್ಲಿನ ಒತ್ತುವರಿ ತೆರವುಗೊಳಿಸಿದ್ದು, ಇನ್ನೂ 562 ಕಡೆಗಳಲ್ಲಿ ಒತ್ತುವರಿ ತೆರವು ಬಾಕಿಯಿದೆ.

ಕಂದಾಯ ಇಲಾಖೆ ಭೂ ಮಾಪನ ಇಲಾಖೆಯ ಅಧಿಕಾರಿಗಳು 450 ಪ್ರಕರಣಗಳಲ್ಲಿನ ಒತ್ತುವರಿ ಸರ್ವೇ ಮಾಡಿ, ಒತ್ತುವರಿ ಗುರುತು ಮಾಡಿಕೊಟ್ಟಿದ್ದಾರೆ. ಅದರಂತೆ ಅ.29ರಿಂದ ಮತ್ತೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲು ಉದ್ದೇಶಿಸಲಾಗಿದೆ. ಏಕಾಏಕಿ ಒತ್ತುವರಿ ತೆರವುಗೊಳಿಸದ ಕಟ್ಟಡಗಳಿಗೆ ನೋಟಿಸ್‌ ನೀಡಿ ತೆರವಿಗೆ ಸೂಚನೆ ನೀಡಲಾಗುವುದು. ನಿವೇಶನ, ಕಾಂಪೌಂಡ್‌ ಜಾಗವನ್ನು ಕೂಡಲೇ ತೆರವುಗೊಳಿಸಲಾಗುವುದು.
-ಪ್ರಹ್ಲಾದ್‌, ಎಸ್‌ಡಬುಡಿ ಮುಖ್ಯ ಇಂಜಿನಿಯರ್‌

ಯಾವ ವಲಯದಲ್ಲಿ ಎಷ್ಟು ಒತ್ತುವರಿ
ಬಿಬಿಎಂಪಿ ವಲಯ    ಒಟ್ಟು ಪ್ರಕರಣಗಳು    ಒತ್ತುವರಿಯ ಸ್ವರೂಪ

-ಮಹದೇವಪುರ    226    46 ಕಟ್ಟಡ/ಮನೆಗಳು
-ದಕ್ಷಿಣ ವಲಯ    20    17 ಮನೆ
-ಯಲಹಂಕ    202    7 ಮನೆ/ಕಟ್ಟಡ, 1 ಫ್ಯಾಕ್ಟರಿ, 1 ಅಪಾರ್ಟ್‌ಮೆಂಟ್‌
-ಆರ್‌ ಆರ್‌ ನಗರ    2    1 ಕಟ್ಟಡ (ನ್ಯಾಯಾಲಯದ ತಡೆಯಾಜ್ಞೆಯಿದೆ)

* ವೆಂ.ಸುನೀಲ್‌ಕುಮಾರ್‌ 

Advertisement

Udayavani is now on Telegram. Click here to join our channel and stay updated with the latest news.

Next